ತೀವ್ರ ಚಳಿಯಲ್ಲಿ ಕೇವಲ ಟಿಶರ್ಟ್ ತೊಟ್ಟು ಹೇಗೆ ಹೆಜ್ಜೆ ಹಾಕುತ್ತಿದ್ದೀರಿ ಎಂಬ ಪ್ರಶ್ನೆಗೆ ರಾಹುಲ್ ಉತ್ತರಿಸಿದ್ದು ಹೀಗೆ

Update: 2022-12-25 07:41 GMT

ಹೊಸದಿಲ್ಲಿ: ರಾಹುಲ್ ಗಾಂಧಿ (Rahul Gandhi) ನೇತೃತ್ವದ ಭಾರತ್ ಜೋಡೊ ಯಾತ್ರೆ (Bharat Jodo Yatra) ರಾಷ್ಟ್ರ ರಾಜಧಾನಿ ದಿಲ್ಲಿಯನ್ನು ಪ್ರವೇಶಿಸಿದ್ದು, ಕೇವಲ ಟಿಶರ್ಟ್ ತೊಟ್ಟು ಉತ್ತರ ಭಾರತದ ತೀವ್ರ ಚಳಿಯ ಹವಾಮಾನದಲ್ಲಿ ಹೆಜ್ಜೆ ಹಾಕುತ್ತಿರುವ ರಾಹುಲ್ ಗಾಂಧಿಯನ್ನು "ನೀವು ಈ ತೀವ್ರ ಚಳಿಯಲ್ಲಿ ಅದು ಹೇಗೆ ಕೇವಲ ಟಿಶರ್ಟ್ ತೊಟ್ಟು ಹೆಜ್ಜೆ ಹಾಕುತ್ತಿದ್ದೀರಿ?" ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿರುವ ರಾಹುಲ್ ಗಾಂಧಿ, "ಇದೇ ಪ್ರಶ್ನೆಯನ್ನು ನೀವು ರೈತರು, ಕಾರ್ಮಿಕರು, ಬಡ ಮಕ್ಕಳಿಗೆ ಕೇಳುವುದಿಲ್ಲ" ಎಂದು ಈ ಚಳಿಯ ಹವಾಮಾನದಲ್ಲಿ ಬೆಚ್ಚನೆಯ ಉಡುಪುಗಳನ್ನು ಹೊಂದಿಸಿಕೊಳ್ಳಲಾಗದ ಜನರನ್ನು ಉಲ್ಲೇಖಿಸಿ ಹೇಳಿದ್ದಾರೆ.

"ನಾನು ಈವರೆಗೆ 2800 ಕಿಮೀ ನಡೆದಿದ್ದೇನೆ. ಆದರಿದು ದೊಡ್ಡ ಸಂಗತಿಯಲ್ಲ. ವಾಸ್ತವವಾಗಿ ರೈತರು, ರೈತ ಕಾರ್ಮಿಕರು, ಕಾರ್ಖಾನೆಯ ನೌಕರರು ಸೇರಿದಂತೆ ಇಡೀ ದೇಶ ಪ್ರತಿ ದಿನ ಇದಕ್ಕಿಂತ ಹೆಚ್ಚು ದೂರ ನಡೆಯುತ್ತದೆ" ಎಂದು ಕೆಂಪು ಕೋಟೆಯ ಬಳಿ ಆಯೋಜಿಸಲಾಗಿದ್ದ ಸಭೆಯನ್ನು ಉದ್ದೇಶಿಸಿ ಹೇಳಿದ್ದಾರೆ.

ರಾಹುಲ್ ಗಾಂಧಿಗೆ ಚಳಿಯ ಅನುಭವವಾಗುತ್ತಿಲ್ಲವೆ ಎಂಬ ವಿಷಯದ ಕುರಿತು ndtv.comಗೆ ಪ್ರತಿಕ್ರಿಯಿಸಿರುವ ಮತ್ತೋರ್ವ ಕಾಂಗ್ರೆಸ್ ನಾಯಕ ಕನ್ಹಯ್ಯ ಕುಮಾರ್, "ಬಿಜೆಪಿ ಮತ್ತು ಆರೆಸ್ಸೆಸ್ ದ್ವೇಷಕ್ಕೆ ರಾಹುಲ್ ಗಾಂಧಿ ಅಚ್ಚುಮೆಚ್ಚಿನ ಗುರಿಯಾಗಿರುವುದು ನಿಮಗೂ ತಿಳಿದೇ ಇದೆ. ಪ್ರತಿನಿತ್ಯ ಯಾವುದೇ ವ್ಯಕ್ತಿ ತೀವ್ರವಾದ ದಾಳಿಗೆ ಗುರಿಯಾಗತೊಡಗಿದಾಗ ಅಂತಹ ವ್ಯಕ್ತಿಯ ದೇಹ ಸ್ವಯಂ ನಿರೋಧಕ ಶಕ್ತಿ ಬೆಳೆಸಿಕೊಳ್ಳುತ್ತದೆ" ಎಂದು ತಿಳಿಸಿದ್ದಾರೆ.

ಭಾರತ್ ಜೋಡೊ ಯಾತ್ರೆಯು ದಿಲ್ಲಿ ಹಂತ ಪೂರೈಸಿದ ನಂತರ ಮಾತನಾಡಿದ ರಾಹುಲ್ ಗಾಂಧಿ, ನಾನು ಈ ಯಾತ್ರೆಯಲ್ಲಿ ಹಲವು ಬಗೆಯ ಜನರನ್ನು ಕಂಡೆ. ಈ ಯಾತ್ರೆಯು ಕನ್ಯಾಕುಮಾರಿಯಿಂದ ಶುರುವಾಗಿದ್ದು, ಕಾಶ್ಮೀರದಲ್ಲಿ ಅಂತ್ಯವಾಗಲಿದೆ. ಆದರೆ, ದಾರಿಯುದ್ದಕ್ಕೂ ಜನರಲ್ಲಿ ನಾನು ಭಯ ಗುರುತಿಸಿದೆನೇ ಹೊರತು ದ್ವೇಷವನ್ನಲ್ಲ" ಎಂದಿದ್ದಾರೆ.

ಬಿಜೆಪಿ ಮತ್ತು ಆರೆಸ್ಸೆಸ್ ದೇಶಾದ್ಯಂತ ದ್ವೇಷ ಹರಡುತ್ತಿವೆ ಎಂದು ಆರೋಪಿಸಿದ ಅವರು, "ನಾನು ಯಾತ್ರೆ ಆರಂಭಿಸಿದಾಗ ದೇಶದೆಲ್ಲೆಡೆ ದ್ವೇಷ ತುಂಬಿದೆ ಎಂದು ಭಾವಿಸಿದ್ದೆ. ಆದರದು ನನಗೆ ಕಂಡು ಬರಲೇ ಇಲ್ಲ. ನೀವು ಯಾವುದೇ ಟಿವಿ ನೋಡಿದರೂ ಹಿಂದೂ-ಮುಸ್ಲಿಂ, ಹಿಂದೂ-ಮುಸ್ಲಿಂ ಎಂದು ವಿವಾದ ಸೃಷ್ಟಿಸಲಾಗುತ್ತಿದೆ. ಆದರೆ ಭಾರತದ ಜನರು ಹಾಗಿಲ್ಲ" ಎಂದು ಅಭಿಪ್ರಾಯ ಪಟ್ಟರು.

ಭಾರತ್ ಜೋಡೊ ಯಾತ್ರೆಯಲ್ಲಿ ರಾಹುಲ್ ಗಾಂಧಿ ಅವರ ತಾಯಿ ಸೋನಿಯಾ ಗಾಂಧಿ, ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ, ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಹಲವಾರು ಹಿರಿಯ ಕಾಂಗ್ರೆಸ್ ನಾಯಕರು ಹೆಜ್ಜೆ ಹಾಕಿದರು.

Similar News