ಕಾಶ್ಮೀರಿ ಪಂಡಿತರ ಜೀವವುಳಿಸಲು ಡಝನ್ ಕಚೇರಿಗಳನ್ನು ಮುಚ್ಚಿದರೂ ತೊಂದರೆಯಿಲ್ಲ: ಮುಷ್ಕರಕ್ಕೆ ಕೇಂದ್ರ ಸಚಿವರ ಬೆಂಬಲ
ಶ್ರೀನಗರ,ಡಿ.25: ಕಣಿವೆಯಲ್ಲಿ ಸೇವೆ ಸಲ್ಲಿಸುತ್ತಿರುವ ಕಾಶ್ಮೀರಿ ಪಂಡಿತರು ತಮ್ಮ ಕರ್ತವ್ಯಗಳಿಗೆ ಮರಳದಿದ್ದರೆ ಅವರಿಗೆ ವೇತನಗಳನ್ನು ಪಾವತಿಸುವುದಿಲ್ಲ ಎಂದು ಜಮ್ಮು-ಕಾಶ್ಮೀರದ ಉಪರಾಜ್ಯಪಾಲ ಮನೋಜ ಸಿನ್ಹಾ ಅವರು ಎಚ್ಚರಿಕೆ ನೀಡಿರುವ ಬೆನ್ನಲ್ಲೇ ಕೇಂದ್ರ ಸಚಿವ ಹಾಗೂ ಹಿರಿಯ ಬಿಜೆಪಿ ನಾಯಕ ಡಾ.ಜಿತೇಂದ್ರ ಸಿಂಗ್ ಅವರು ತಮ್ಮನ್ನು ಜಮ್ಮು ಜಿಲ್ಲೆಗೆ ವರ್ಗಾಯಿಸುವಂತೆ ಬೇಡಿಕೆಯೊಂದಿಗೆ ಪ್ರತಿಭಟನೆ ನಡೆಸುತ್ತಿರುವ ಕಾಶ್ಮೀರಿ ಪಂಡಿತ ಉದ್ಯೋಗಿಗಳ ಬೆಂಬಲಕ್ಕೆ ಧಾವಿಸಿದ್ದಾರೆ.
ಪ್ರಧಾನ ಮಂತ್ರಿಗಳ ವಿಶೇಷ ಉದ್ಯೋಗ ಯೋಜನೆಯಡಿ ಕಣಿವೆಗೆ ಮರಳಿರುವ ಸುಮಾರು 6,000 ಕಾಶ್ಮೀರಿ ಪಂಡಿತ ಉದ್ಯೋಗಿಗಳು ಉಗ್ರರು ತಮ್ಮನ್ನು ಗುರಿಯಾಗಿಸಿಕೊಂಡು ನಡೆಸುತ್ತಿರುವ ಹತ್ಯೆಗಳ ವಿರುದ್ಧ ತಮ್ಮ ಪ್ರತಿಭಟನೆಯನ್ನು ದಾಖಲಿಸಲು ಕಳೆದ ಏಳು ತಿಂಗಳುಗಳಿಂದ ತಮ್ಮ ಕಚೇರಿಗಳಿಗೆ ಹಾಜರಾಗುತ್ತಿಲ್ಲ.
ಕಾಶ್ಮೀರಿ ಪಂಡಿತರ ಬೇಡಿಕೆಯನ್ನು ಬಲವಾಗಿ ಬೆಂಬಲಿಸಿರುವ ಪ್ರಧಾನಿ ಕಚೇರಿಯಲ್ಲಿ ರಾಜ್ಯ ಸಚಿವರಾಗಿರುವ ಡಾ.ಜಿತೇಂದ್ರ ಸಿಂಗ್,ಬೆದರಿಕೆಗಳನ್ನು ಎದುರಿಸುತ್ತಿರುವ ವ್ಯಕ್ತಿಯ ಜೀವವನ್ನುಳಿಸಲು ಡಝನ್ ಸರಕಾರಿ ಕಚೇರಿಗಳನ್ನು ಮುಚ್ಚುವುದಕ್ಕೆ ತಾನು ಆದ್ಯತೆ ನೀಡುತ್ತೇನೆ. ಜೀವವನ್ನುಳಿಸುವುದು ಹೆಚ್ಚು ಮುಖ್ಯವಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಶನಿವಾರ ಜಮ್ಮುವಿಗೆ ಆಗಮಿಸಿ ಪ್ರತಿಭಟನಾನಿರತ ಕಾಶ್ಮೀರಿ ಪಂಡಿತರನ್ನು ಭೇಟಿಯಾದ ಬಿಜೆಪಿಯ ಪ್ರಧಾನ ಕಾರ್ಯದರ್ಶಿಗಳಾದ ತರುಣ ಛುಗ್ ಮತ್ತು ದಿಲೀಪ ಸೈಕಾಯಿ ಅವರು,ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದ್ದಾರೆ.
ಸಿನ್ಹಾ ಅವರ ಎಚ್ಚರಿಕೆಯ ಬಳಿಕ ಹಲವಾರು ಕಾಶ್ಮೀರಿ ಪಂಡಿತರು ಮತ್ತು ಮೀಸಲು ವರ್ಗದ ಉದ್ಯೋಗಿಗಳು ಜಮ್ಮುವಿನ ಬಿಜೆಪಿ ಕೇಂದ್ರಕಚೇರಿಯ ಎದುರು ನಡೆಸುತ್ತಿರುವ ಪ್ರತಿಭಟನೆಯನ್ನು ಇನ್ನಷ್ಟು ತೀವ್ರಗೊಳಿಸಿದ್ದಾರೆ.
ಇತ್ತೀಚಿನ ಉದ್ದೇಶಿತ ದಾಳಿಗಳ ಹಿನ್ನೆಲೆಯಲ್ಲಿ,ಕಾಶ್ಮೀರಿ ಪಂಡಿತರು ಮತ್ತು ಮೀಸಲು ವರ್ಗದ ಉದ್ಯೋಗಿಗಳನ್ನು ಕಾಶ್ಮೀರ ಕಣಿವೆಯಲ್ಲಿ ಕರ್ತವ್ಯ ನಿರ್ವಹಿಸುವಂತೆ ಸರಕಾರವು ಬಲವಂತಗೊಳಿಸಿದರೆ ಅವರು ಹರಕೆಯ ಕುರಿಗಳಾಗಲು ತಾವು ಅವಕಾಶ ನೀಡುವುದಿಲ್ಲ ಎಂದು ಜಮ್ಮು-ಕಾಶ್ಮೀರದಲ್ಲಿನ ಸ್ಥಳೀಯ ಬಿಜೆಪಿ ನಾಯರು ಘೋಷಿಸಿದ್ದಾರೆ.
ಸಿನ್ಹಾ ವಿರುದ್ಧ ಪರೋಕ್ಷ ದಾಳಿಯನ್ನು ನಡೆಸಿರುವ ಬಿಜೆಪಿ ರಾಜ್ಯಾಧ್ಯಕ್ಷ ರವೀಂದ್ರ ರೈನಾ ಅವರು,ಕಾಶ್ಮೀರದಲ್ಲಿ ತಳಮಟ್ಟದ ಸ್ಥಿತಿಯ ವಾಸ್ತವತೆಯನ್ನು ತಿಳಿದುಕೊಳ್ಳಲು ಒಮ್ಮೆಯಾದರೂ ಪ್ರತಿಭಟನಾನಿರತ ಉದ್ಯೋಗಿಗಳನ್ನು ಭೇಟಿಯಾಗಿ ಎಂದು ಆಗ್ರಹಿಸಿದ್ದಾರೆ