ಮನೆಯಲ್ಲಿ ಹರಿತ ಚೂರಿ ಇಟ್ಟುಕೊಳ್ಳಿ: ವಿವಾದಕ್ಕೀಡಾದ ಪ್ರಜ್ಞಾ ಠಾಕೂರ್‌ ಹೇಳಿಕೆ

Update: 2022-12-26 12:40 GMT

ಹೊಸದಿಲ್ಲಿ: "ನಿಮ್ಮ  ಮನೆಯಲ್ಲಿ ಶಸ್ತ್ರಗಳನ್ನು ಇಟ್ಟುಕೊಳ್ಳಿ, ಬೇರೇನಾದರೂ ಇಲ್ಲದೇ ಇದ್ದರೆ ಕನಿಷ್ಠ ತರಕಾರಿ ತುಂಡು ಮಾಡುವ ಚೂರಿಗಳಿರಲಿ, ಹರಿತವಾದವು... ಯಾವಾಗ ಯಾವ ಪರಿಸ್ಥಿತಿ ಎದುರಾಗಬಹುದೆಂದು ತಿಳಿದಿಲ್ಲ... ಎಲ್ಲರಿಗೂ ಸ್ವಯಂರಕ್ಷಣೆ ಮಾಡುವ ಹಕ್ಕಿದೆ. ಯಾರಾದರೂ ನಿಮ್ಮ ಮನೆಗೆ ನುಗ್ಗಿದರೆ ಹಾಗೂ ದಾಳಿ ನಡೆಸಿದರೆ, ತಕ್ಕ ಉತ್ತರ ನೀಡುವುದು ನಮ್ಮ ಹಕ್ಕು," ಎಂದು ಹೇಳುವ ಮೂಲಕ ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್‌ ಠಾಕುರ್‌ ಮತ್ತೆ ವಿವಾದಕ್ಕೀಡಾಗಿದ್ದಾರೆ. ಶಿವಮೊಗ್ಗದ ಹರ್ಷ ಕೊಲೆ ಪ್ರಕರಣ ಸಹಿತ ಹಿಂದು ಕಾರ್ಯಕರ್ತರ ಹತ್ಯೆ ಘಟನೆಗಳನ್ನು ಉಲ್ಲೇಖಿಸಿ ಅವರು ಹಿಂದು ಜಾಗರಣ ವೇದಿಕೆಯ ದಕ್ಷಿಣ ಪ್ರಾಂತೀಯ ವಾರ್ಷಿಕ ಸಮಾವೇಶದಲ್ಲಿ ಹೀಗೆ ಹೇಳಿದ್ದಾರೆ.

ಲವ್‌ ಜಿಹಾದ್‌ ಕುರಿತೂ ಮಾತನಾಡಿದ ಭೋಪಾಲ್‌ ಸಂಸದೆಯಾಗಿರುವ ಪ್ರಜ್ಞಾ "ಲವ್‌ ಜಿಹಾದ್‌, ಅವರಿಗೆ ಜಿಹಾದ್‌ ಪದ್ಧತಿಯಿದೆ, ಏನೂ ಇಲ್ಲದೇ ಇದ್ದರೆ ಲವ್‌ ಜಿಹಾದ್‌ ನಡೆಸುತ್ತಾರೆ. ಅವರು ಪ್ರೀತಿಸಿದರೂ ಅದರಲ್ಲಿ ಜಿಹಾದ್‌ ಮಾಡುತ್ತಾರೆ," ನಾವು (ಹಿಂದುಗಳು) ಕೂಡ ಪ್ರೀತಿಸುತ್ತೇವೆ,  ದೇವರನ್ನು ಪ್ರೀತಿಸುತ್ತೇವೆ, ಸನ್ಯಾಸಿ ದೇವರನ್ನು ಪ್ರೀತಿಸುತ್ತಾನೆ," ಎಂದು  ಅವರು ಹೇಳಿದರು.

"ದೇವರು ಸೃಷ್ಟಿಸಿದ ಈ ಜಗತ್ತಿನಲ್ಲಿ ಎಲ್ಲಾ ಶೋಷಕರು ಹಾಗೂ ಪಾಪಿಗಳನ್ನು ಮುಗಿಸಿ, ಇಲ್ಲದೇ ಹೋದರೆ ಪ್ರೀತಿಯ ನಿಜವಾದ ವ್ಯಾಖ್ಯಾನ ಇಲ್ಲಿ ಉಳಿಯುವುದಿಲ್ಲ ಎಂದು ಸನ್ಯಾಸಿ ಹೇಳುತ್ತಾರೆ. ಆದುದರಿಂದ ಲವ್‌ ಜಿಹಾದ್‌ ನಡೆಸುವವರಿಗೂ ಅದೇ ರೀತಿ ಉತ್ತರಿಸಿ, ನಿಮ್ಮ ಹುಡುಗಿಯನ್ನು ರಕ್ಷಿಸಿ, ಅವರಿಗೆ ಸರಿಯಾದ ಮೌಲ್ಯಗಳನ್ನು ಕಲಿಸಿ," ಎಂದು ಹೇಳಿದರು.

ಮಿಷನರಿ ಶಿಕ್ಷಣ ಸಂಸ್ಥೆಗಳಲ್ಲಿ  ಮಕ್ಕಳಿಗೆ ಶಿಕ್ಷಣ ಕೊಡಿಸದಂತೆ ಸಲಹೆ ನೀಡಿದ ಆಕೆ "ಹಾಗೆ ಮಾಡುವುದರಿಂದ ನಾವು ನಮಗಾಗಿ ವೃದ್ಧಾಶ್ರಮಗಳ ಬಾಗಿಲುಗಳನ್ನು ತೆರೆದಂತೆ, (ಮಕ್ಕಳನ್ನು ಮಿಷನರಿ ಶಾಲೆಗಳಲ್ಲಿ ಕಲಿಸಿದರೆ) ಅವರು ನಿಮ್ಮವರು ಹಾಗೂ ನಿಮ್ಮ ಸಂಸ್ಕೃತಿಯವರಾಗುವುದಿಲ್ಲ, ಅವರು ವೃದ್ಧಾಶ್ರಮ ಸಂಸ್ಕೃತಿಯಲ್ಲಿ ಬೆಳೆಯುತ್ತಾರೆ ಹಾಗೂ ಸ್ವಾರ್ಥಿಗಳಾಗುತ್ತಾರೆ," ಎಂದು ಪ್ರಜ್ಞಾ ಠಾಕುರ್‌ ಹೇಳಿದ್ದಾರೆ.

Similar News