ಪ್ರಧಾನಿ ಮೋದಿ-ಉಕ್ರೇನ್ ಅಧ್ಯಕ್ಷರ ನಡುವೆ ದೂರವಾಣಿ ಮಾತುಕತೆ

Update: 2022-12-26 17:01 GMT

ಹೊಸದಿಲ್ಲಿ,ಡಿ.26: ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ(Volodymyr Zelensky) ಅವರು ಸೋಮವಾರ ಪ್ರಧಾನಿ ನರೇಂದ್ರ ಮೋದಿ(Narendra Modi)ಯವರ ಜೊತೆ ದೂರವಾಣಿಯಲ್ಲಿ ಮಾತುಕತೆ ನಡೆಸಿದ್ದು,ಯಶಸ್ವಿ ಜಿ20 ಅಧ್ಯಕ್ಷತೆಗಾಗಿ ಭಾರತಕ್ಕೆ ಶುಭ ಹಾರೈಸಿದರು. ಈ ಸಂದರ್ಭ ಉಕ್ರೇನ್ ಮತ್ತು ರಶ್ಯಾ ನಡುವಿನ ಎಲ್ಲ ಹಗೆತನಗಳನ್ನು ತಕ್ಷಣ ಅಂತ್ಯಗೊಳಿಸುವಂತೆ ಕರೆ ನೀಡಿದ ಮೋದಿ,ಉಭಯ ದೇಶಗಳು ಮಾತುಕತೆ ಮತ್ತು ರಾಜತಾಂತ್ರಿಕತೆಯ ಮೂಲಕ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕು ಎಂದು ಹೇಳಿದರು.

‘ಪ್ರಧಾನಿ ಮೋದಿಯವರಿಗೆ ದೂರವಾಣಿ ಕರೆ ಮಾಡಿ ಯಶಸ್ವಿ ಜಿ20 ಅಧ್ಯಕ್ಷತೆಗೆ ಶುಭ ಹಾರೈಸಿದ್ದೇನೆ. ಇದೇ ವೇದಿಕೆಯಲ್ಲಿ ನಾನು ಶಾಂತಿ ಸೂತ್ರವನ್ನು ಪ್ರಕಟಿಸಿದ್ದೆ ಮತ್ತು ಈಗ ಅದರ ಅನುಷ್ಠಾನದಲ್ಲಿ ಭಾರತದ ಪಾಲ್ಗೊಳ್ಳುವಿಕೆಯನ್ನು ನಂಬಿಕೊಂಡಿದ್ದೇನೆ. ಮಾನವೀಯ ನೆರವು ಮತ್ತು ವಿಶ್ವಸಂಸ್ಥೆಯಲ್ಲಿ ಬೆಂಬಲಕ್ಕಾಗಿ ನಾನು ಕೃತಜ್ಞತೆಗಳನ್ನೂ ಸಲ್ಲಿಸಿದ್ದೇನೆ ’ ಎಂದು ಝೆಲೆನ್ಸ್ಕಿ ಟ್ವೀಟಿಸಿದ್ದಾರೆ.

ಮಾತುಕತೆಗಳ ಸಂದರ್ಭ ಮೋದಿ ಆಹಾರ ಮತ್ತು ಇಂಧನ ಭದ್ರತೆಯಂತಹ ವಿಷಯಗಳಲ್ಲಿ ಅಭಿವೃದ್ಧಿಶೀಲ ದೇಶಗಳು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಕಳವಳಗಳನ್ನು ವ್ಯಕ್ತಪಡಿಸಿದರು ಎಂದು ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ.

Similar News