ಈ ವರ್ಷ ಗೆದ್ದ ದಕ್ಷಿಣ ಭಾರತದ ಚಿತ್ರಗಳು

Update: 2022-12-27 05:16 GMT

2022ನೇ ವರ್ಷ ಪ್ರಾದೇಶಿಕ ಸಿನೆಮಾಗಳಲ್ಲಿ ಹಲವು ರೀತಿಯಲ್ಲಿ ಟ್ರೆಂಡ್‌ಸೆಟರ್ ತಂದ ವರ್ಷ. ದಕ್ಷಿಣ ಭಾರತದ ಚಲನಚಿತ್ರಗಳು ಹೆಚ್ಚು ಸುದ್ದಿಯಾದವು, ಮಾತ್ರವಲ್ಲ ಬ್ಲಾಕ್‌ಬಸ್ಟರ್‌ಗಳಾಗಿ ಹೊರಹೊಮ್ಮಿದವು. ಉತ್ತರ ಮತ್ತು ದಕ್ಷಿಣ ಭಾರತದ ಚಿತ್ರರಂಗದ ಕುರಿತಂತೆ ಚರ್ಚೆಗೂ ಇವು ನಾಂದಿಯಾದವು. ಬಾಲಿವುಡ್ ಮೀರಿಸುವವರಿಲ್ಲ ಎಂದೇ ಎಲ್ಲರೂ ಅಂದುಕೊಳ್ಳುವಾಗಲೇ, ದಕ್ಷಿಣದ ಹಲವಾರು ಚಿತ್ರಗಳು ದೊಡ್ಡಮಟ್ಟದ ಸದ್ದು ಮಾಡಿದವೆಂಬುದು ಸತ್ಯ.

ಎಸ್.ಎಸ್.ರಾಜಮೌಳಿಯವರ ‘ಆರ್‌ಆರ್‌ಆರ್’, ಯಶ್ ಅಭಿನಯದ ‘ಕೆಜಿಎಫ್-2’, ಕಮಲ್ ಹಾಸನ್ ಅವರ ‘ವಿಕ್ರಮ್’, ರಿಷಬ್ ಶೆಟ್ಟಿಯವರ ‘ಕಾಂತಾರ’ ಮತ್ತು ಮಣಿರತ್ನಂ ಅವರ ‘ಪೊನ್ನಿಯಿನ್ ಸೆಲ್ವನ್-1’ ದಕ್ಷಿಣದ ಐದು ಮುಖ್ಯ ಚಿತ್ರಗಳಾಗಿ ಸುದ್ದಿಯಾದವು, ಬಾಕ್ಸಾಫೀಸ್‌ನಲ್ಲಿಯೂ ಗೆದ್ದು ತೋರಿಸಿದವು.

ನಿರ್ದೇಶಕ ಎಸ್.ಎಸ್. ರಾಜಮೌಳಿ ಅವರ ‘ಆರ್‌ಆರ್‌ಆರ್’ ತೆಲುಗು ಸ್ವಾತಂತ್ರ್ಯ ಹೋರಾಟಗಾರರಾದ ಕೋಮರಂ ಭೀಮ್ ಮತ್ತು ಅಲ್ಲೂರಿ ಸೀತಾರಾಮ ರಾಜು ಅವರ ಪಾತ್ರಗಳಲ್ಲಿ ಇಬ್ಬರು ದೊಡ್ಡ ತೆಲುಗು ಸೂಪರ್‌ಸ್ಟಾರ್‌ಗಳಾದ ಜೂನಿಯರ್ ಎನ್‌ಟಿಆರ್ ಮತ್ತು ರಾಮ್ ಚರಣ್ ಅವರನ್ನು ಒಟ್ಟಿಗೆ ತಂದಿತು. ಚಿತ್ರವು ಬ್ರಿಟಿಷ್ ದರ್ಬಾರಿನ ಹಿನ್ನೆಲೆಯಲ್ಲಿನ ದೃಶ್ಯಗಳಿಂದ ಗಮನ ಸೆಳೆಯಿತು.

ಆರ್‌ಆರ್‌ಆರ್‌ನ ಅಂಥ ಒಂದು ದೃಶ್ಯವೆಂದರೆ, ಜೂನಿಯರ್ ಎನ್‌ಟಿಆರ್‌ನ ಭೀಮ್ ಉಗ್ರ ಪ್ರಾಣಿಗಳೊಂದಿಗೆ ಬ್ರಿಟಿಷ್ ಅರಮನೆಯನ್ನು ಪ್ರವೇಶಿಸುವ ದೃಶ್ಯ. ಅದು ಚಿತ್ರದಲ್ಲಿನ ಇಬ್ಬರು ಸ್ಟಾರ್ ನಟರ ಸ್ನಾಯುಶಕ್ತಿ ಪ್ರದರ್ಶನದ ದೃಶ್ಯವಾಗಿಯೂ ಪ್ರೇಕ್ಷಕರನ್ನು ಸೆಳೆದಿತ್ತು.

ಪ್ರಶಾಂತ್ ನೀಲ್ ನಿರ್ದೇಶನದ ರಾಕಿಂಗ್ ಸ್ಟಾರ್ ಯಶ್ ಅವರ ಕೆಜಿಎಫ್-2 ಕನ್ನಡ ಚಿತ್ರರಂಗದ ಮತ್ತೊಂದು ಬ್ಲಾಕ್‌ಬಸ್ಟರ್ ಆಗಿತ್ತು. ಈ ಚಿತ್ರವು ಅದರಲ್ಲಿನ ಮಾಸ್ ಕ್ಷಣಗಳಿಗಾಗಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿದೆ. ಯಶ್ ಹೇಳುವ ‘ಹಿಂಸೆ..ಹಿಂಸೆ...ಹಿಂಸೆ’ ಡೈಲಾಗ್ ಈ ಚಿತ್ರದಲ್ಲಿ ಪ್ರೇಕ್ಷಕರಲ್ಲಿ ರೋಮಾಂಚನಕ್ಕೆ ಕಾರಣವಾದ ಸನ್ನಿವೇಶ.

ನಿರ್ದೇಶಕ ಲೋಕೇಶ್ ಕನಕರಾಜ್ ಅವರ ‘ವಿಕ್ರಮ್’ ಚಿತ್ರದಲ್ಲಿ ಕಮಲ್ ಹಾಸನ್, ವಿಜಯ್ ಸೇತುಪತಿ ಮತ್ತು ಫಹದ್ ಫಾಸಿಲ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಎಲ್ಲಾ ವಯಸ್ಸಿನ ಜನರು ಇಷ್ಟಪಡುವ ಕಾಂಬಿನೇಷನ್ ಆಗಿದೆ. ವಿಕ್ರಮ್ ಬಾಕ್ಸ್ ಆಫೀಸ್‌ನಲ್ಲಿ 400 ಕೋಟಿ ರೂ. ಗಳಿಸಿದೆ.

ದಿ ಘೋಸ್ಟ್ (ಕಮಲ್ ಹಾಸನ್) ಮಧ್ಯಂತರದಲ್ಲಿ ತನ್ನನ್ನು ತಾನು ಅನಾವರಣಗೊಳಿಸಿದ್ದು ಹೆಚ್ಚು ಪ್ರಚಾರಗೊಂಡ ದೃಶ್ಯಗಳಲ್ಲಿ ಒಂದಾಗಿದೆ. ಅನಿರುದ್ಧ್ ರವಿಚಂದರ್ ಅವರ ಹಿನ್ನೆಲೆ ಸಂಗೀತ ಚಿತ್ರವನ್ನು ಇನ್ನಷ್ಟು ಗಾಢವಾಗಿಸಿದೆ.

ರಿಷಬ್ ಶೆಟ್ಟಿ ಅಭಿನಯದ ‘ಕಾಂತಾರ’ ಮತ್ತೊಂದು ಹಿಟ್ ಚಿತ್ರ. 16 ಕೋಟಿ ರೂಪಾಯಿ ಬಜೆಟ್‌ನಲ್ಲಿ ತಯಾರಾದ ಈ ಚಿತ್ರವು ಗಳಿಸಿದ್ದು ರೂ. 400 ಕೋಟಿಗಿಂತ ಹೆಚ್ಚು. ಚಿತ್ರವು ಕರಾವಳಿ ಕರ್ನಾಟಕದ ವಿಶಿಷ್ಟ ಆಚರಣೆಯಾದ ಭೂತ ಕೋಲ ಸಂಪ್ರದಾಯದ ಹಿನ್ನೆಲೆಯ ಕಥೆಯನ್ನು ಒಳಗೊಂಡಿದೆ.

ಮಣಿರತ್ನಂ ಅವರ ‘ಪೊನ್ನಿಯಿನ್ ಸೆಲ್ವನ್-1’ರಲ್ಲಿ ಐಶ್ವರ್ಯಾ ರೈ ಬಚ್ಚನ್, ಚಿಯಾನ್ ವಿಕ್ರಮ್, ತ್ರಿಶಾ, ಜಯಂ ರವಿ, ಕಾರ್ತಿ ಮತ್ತು ಪ್ರಕಾಶ್ ರಾಜ್ ತೆರೆ ಹಂಚಿಕೊಂಡಿದ್ದಾರೆ. ಈ ಚಿತ್ರವು ಕಲ್ಕಿ ಕೃಷ್ಣಮೂರ್ತಿಯವರು ಬರೆದ ಅದೇ ಹೆಸರಿನ ಕಾದಂಬರಿಯನ್ನು ಆಧರಿಸಿದೆ.

ಐಶ್ವರ್ಯಾ ರೈ ಬಚ್ಚನ್ ಮತ್ತು ತ್ರಿಷಾ ನಡುವಿನ ಮುಖಾಮುಖಿಯು ಎಲ್ಲರೂ ‘ವಾವ್’ ಎನ್ನುವಂತಾಗಲು ಕಾರಣವಾಯಿತು. ಅವರಿಬ್ಬರ ಸೌಂದರ್ಯ ಮತ್ತು ತೀಕ್ಷ್ಣವಾದ ಸಂಭಾಷಣೆಗಳು ಅಸಾಧಾರಣ ಎಂದೇ ವಿಮರ್ಶಕರು ಹೇಳಿದ್ದಾರೆ. ಅದೇ ರೀತಿ, ಚೋಜಾ ಚೋಜಾ ಹಾಡು ಕೂಡ.

Similar News