ಡಿಜಿಟಲ್ ಟ್ರಾಫಿಕ್ ಸೈನ್ ಬೋರ್ಡ್ನಲ್ಲಿ ಕಾಣಿಸಿಕೊಂಡ ನಿಂದನಾತ್ಮಕ ಸಂದೇಶ; ಹ್ಯಾಕರ್ ಗಳ ವಿರುದ್ಧ ಪ್ರಕರಣ ದಾಖಲು

Update: 2022-12-27 10:43 GMT

ಮುಂಬೈ: ಮುಂಬೈ ನಗರದ ಡಿಂಡೋಶಿ ಪ್ರದೇಶದ ಡಿಜಿಟಲ್ ಟ್ರಾಫಿಕ್ ಸೂಚನಾ ಫಲಕವೊಂದರಲ್ಲಿ ನಿಂದನಾತ್ಮಕ ಸಂದೇಶ ಪ್ರದರ್ಶಿತವಾದ ಘಟನೆಯ ನಂತರ ಅಪರಿಚಿತ ಹ್ಯಾಕರ್ಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಸ್ಥಳೀಯಾಡಳಿತವು ಗೋರೆಗಾಂವ್ (ಪೂರ್ವ) ಉಪನಗರಿಯ ಮಾಲ್ ಒಂದರ ಪಕ್ಕದಲ್ಲಿ ಸ್ಮಾರ್ಟ್ ಟ್ರಾಫಿಕ್ ಕಂಬಗಳನ್ನು ಅಳವಡಿಸಿದ್ದರೆ ಗುತ್ತಿಗೆದಾರರೊಬ್ಬರು ಒಂದು ಕಂಬದಲ್ಲಿ ಎರಡು ಎಲ್ಇಡಿ ಪರದೆಗಳನ್ನು ಅಳವಡಿಸಿದ್ದು ಅವುಗಳು ಸಂಚಾರ ಸಂಬಂಧಿತ ಸೂಚನೆಗಳನ್ನು ಪ್ರದರ್ಶಿಸುತ್ತಿದ್ದವು.

ಆದರೆ ಗುರುವಾರ ರಾತ್ರಿ 9.10ರ ಸುಮಾರಿಗೆ ಎಲ್ಇಡಿ ಪರದೆಯಲ್ಲಿ ನಿಂದನಾತ್ಮಕ ಸಂದೇಶ ಪ್ರದರ್ಶಿತಗೊಂಡಿತ್ತು. ಸುಮಾರು ಒಂದು ಗಂಟೆ ಕಾಲ ಈ ಸಂದೇಶ ಪ್ರದರ್ಶನಗೊಂಡಿತ್ತಲ್ಲದೆ ನಂತರ ಈ ಎಲ್ಇಡಿ ಪರದೆಗೆ ವಿದ್ಯುತ್ ಪೂರೈಕೆ ಕಡಿತಗೊಳಿಸಲಾಯಿತು.

ಈ ಘಟನೆ ಬಗ್ಗೆ ತಮಗೆ ತಿಳಿದಿಲ್ಲ ಎಂದು ಎಲ್ಇಡಿ ಪರದೆ ಅಳವಡಿಸಿದ್ದ ಗುತ್ತಿಗೆದಾರರು ಹೇಳಿದ್ದಾರಲ್ಲದೆ ಯಾರೋ ಸಿಸ್ಟಂ ಹ್ಯಾಕ್ ಮಾಡಿ ಇಂತಹ ಸಂದೇಶ ಪ್ರದರ್ಶಿತವಾಗುವಂತೆ ಮಾಡಿರಬಹುದೆಂಬ ಶಂಕೆ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅಪರಿಚಿತ ಹ್ಯಾಕರ್ಗಳ ವಿರುದ್ಧ ಐಪಿಸಿ ಹಾಗೂ ಐಟಿ ಕಾಯಿದೆಯ ವಿವಿಧ ಸೆಕ್ಷನ್ಗಳನ್ವಯ ಪ್ರಕರಣ ದಾಖಲಿಸಲಾಗಿದೆ.

Similar News