ಮೂಗಿನ ಮೂಲಕ ನೀಡುವ ಕೋವಿಡ್ ಲಸಿಕೆಗೆ ದರ ನಿಗದಿಪಡಿಸಿದ ಬಯೋಟೆಕ್

Update: 2022-12-27 16:22 GMT

ಹೈದರಾಬಾದ್, ಡಿ. 27: ಕೋವಿಡ್ ವಿರುದ್ಧ ಮೂಗಿನ ಮೂಲಕ ನೀಡುವ ಲಸಿಕೆ ಇನ್ಕೋವ್ಯಾಕ್(Incovacc) ಗೆ ಭಾರತ್ ಬಯೋಟೆಕ್ ಇಂಟರ್ನ್ಯಾಷನಲ್ ಲಿಮಿಟೆಡ್ ದರ ನಿಗದಿಪಡಿಸಿದೆ. ಇನ್ಕೋವ್ಯಾಕ್ ಕೋವಿಡ್ ಲಸಿಕೆಗೆ ಖಾಸಗಿಯವರಿಗೆ ಸರಬರಾಜಿಗೆ 800 ರೂ. (ಜಿಎಸ್ಟಿ ಹೊರತುಪಡಿಸಿ)ಹಾಗೂ ಸರಕಾರಕ್ಕೆ ಸರಬರಾಜಿಗೆ 350 ರೂ. (ಜಿಎಸ್ಟಿ ಹೊರತುಪಡಿಸಿ) ನಿಗದಿಪಡಿಸಲಾಗಿದೆ ಎಂದು ಭಾರತ್ ಬಯೋಟೆಕ್ ಮಂಗಳವಾರ ಹೊರಡಿಸಿದ ಪ್ರಕಟನೆಯಲ್ಲಿ ತಿಳಿಸಿದೆ.

ಇನ್ಕೋವ್ಯಾಕ್ ಲಸಿಕೆಯನ್ನು ಬೂಸ್ಟರ್ ಡೋಸ್ ಆಗಿ ಬಳಕೆ ಮಾಡಲು ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ (CDSCO)ಯಿಂದ ಭಾರತ್ ಬಯೋಟೆಕ್ ಈ ತಿಂಗಳ ಆರಂಭದಲ್ಲಿ ಅನುಮತಿ ಪಡೆದುಕೊಂಡಿದೆ. 2023 ಜನವರಿ ನಾಲ್ಕನೇ ವಾರದಲ್ಲಿ ಈ ಮೂಗಿನ ಮೂಲಕ ನೀಡುವ ಕೋವಿಡ್ ಲಸಿಕೆಯನ್ನು ಬಿಡುಗಡೆ ಮಾಡಲಾಗುವುದು. ಈ ನಿಟ್ಟಿನಲ್ಲಿ ಲಸಿಕೆಗಾಗಿ ಕೋವಿನ್ ಪೋರ್ಟಲ್ ನಲ್ಲಿ ಸ್ಲಾಟ್ ಬುಕ್ ಮಾಡಬಹುದಾಗಿದೆ ಎಂದು ಭಾರತ್ ಬಯೋಟೆಕ್ ತಿಳಿಸಿದೆ.

ವಿಶ್ವದ ಮೊದಲ ಮೂಗಿನ ಮೂಲಕ ನೀಡುವ ಕೋವಿಡ್ ಲಸಿಕೆಯಾಗಿರುವ ಇನ್ಕೊವ್ಯಾಕ್ ವಾಷಿಂಗ್ಟನ್ ಯೂನಿವರ್ಸಿಟಿ ಸೇಂಟ್ ಲೂಯಿ ಸಹಭಾಗಿತ್ವದಲ್ಲಿ ಭಾರತ್ ಬಯೋಟೆಕ್ ಕಂಪೆನಿ ತಯಾರಿಸಿದೆ. ಈಗಾಗಲೇ ಕೋವ್ಯಾಕ್ಸಿನ್ ಮತ್ತು ಕೋವಿಶೀಲ್ಡ್ ಲಸಿಕೆಗಳ ಎರಡೂ ಡೋಸ್ ಪಡೆದ 18 ವರ್ಷಕ್ಕಿಂತ ಮೇಲ್ಪಟ್ಟವರು ಈ ಮೂಗಿನ ಮೂಲಕ ತೆಗೆದುಕೊಳ್ಳುವ ಲಸಿಕೆಯನ್ನು ಬೂಸ್ಟರ್ ಡೋಸ್ ಆಗಿ ಪಡೆಯಬಹುದಾಗಿದೆ.

ಮೂಗಿನ ಮೂಲಕ ನೀಡುವ ಜಗತ್ತಿನ ಮೊದಲ ಕೋವಿಡ್ ಲಸಿಕೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಭಾರತ್ ಬಯೋಟೆಕ್ ಸಂಸ್ಥೆಯ ಇನ್ಕೋವ್ಯಾಕ್ ಲಸಿಕೆಗೆ ದರ ನಿಗದಿ ಮಾಡಲಾಗಿದ್ದು, ಖಾಸಗಿಯವರಿಗೆ ಪ್ರತಿ ಡೋಸ್ ಗೆ 800 ರೂ. (ಜಿಎಸ್ಟಿ ಹೊರತುಪಡಿಸಿ) ಹಾಗೂ ಸರಕಾರಕ್ಕೆ ಪ್ರತಿ ಡೋಸ್ ಗೆ 350 ರೂ. (ಜಿಎಸ್ಟಿ ಹೊರತುಪಡಿಸಿ) ನಿಗದಿಪಡಿಸಲಾಗಿದೆ. 

Similar News