ಅಸಮರ್ಪಕ ವಿತ್ತೀಯ ನಿರ್ವಹಣೆಯಿಂದ ರೂ. 58 ಕೋಟಿ ಆರ್ಥಿಕ ನಷ್ಟ: ವಿದೇಶಾಂಗ ಸಚಿವಾಲಯಕ್ಕೆ ಸಿಎಜಿ ತರಾಟೆ

Update: 2022-12-28 14:49 GMT

 ಹೊಸದಿಲ್ಲಿ: ತನ್ನ ಇತ್ತೀಚೆಗೆ ಬಿಡುಗಡೆಗೊಳಿಸಲಾದ ಆಡಿಟ್‌ ವರದಿಯಲ್ಲಿ ಕಂಟ್ರೋಲರ್‌ ಎಂಡ್‌ ಆಡಿಟರ್‌ ಜನರಲ್‌ (ಸಿಎಜಿ)  ಆರ್ಥಿಕ ನಷ್ಟಗಳು ಮತ್ತು ಅಸಮರ್ಪಕ  ವಿತ್ತೀಯ ನಿರ್ವಹಣೆಗೆ ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯವನ್ನು ತರಾಟೆಗೆ ತೆಗೆದುಕೊಂಡಿದೆ.

ಓವರ್‌ಸೀಸ್‌ ಸಿಟಿಜನ್‌ಶಿಪ್‌ ಆಫ್‌ ಇಂಡಿಯಾ ಕಾರ್ಡ್‌ ಯೋಜನೆಯ ಮೇಲಿನ ಶುಲ್ಕವನ್ನು ತಪ್ಪಾಗಿ ಅನ್ವಯಿಸಿದ ಪರಿಣಾಮ ಬೊಕ್ಕಸಕ್ಕೆ ರೂ 58.32 ಕೋಟಿ ನಷ್ಟ ಉಂಟಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಇದರ ಹೊರತಾಗಿ ವಾಷಿಂಗ್ಟನ್‌ ಮತ್ತು ಪ್ಯಾರಿಸ್‌ನಲ್ಲಿ ಇಂಡಿಯನ್‌ ಕಲ್ಚರಲ್‌ ಸೆಂಟರ್‌ಗಳ ಸ್ಥಾಪನೆಯಲ್ಲಿ ಉಂಟಾಗಿರುವ ಆವ್ಯವಹಾರಗಳತ್ತವೂ ವರದಿ ಬೆಳಕು ಚೆಲ್ಲಿದೆ. 

ಈ ಕೇಂದ್ರಗಳ ಸ್ಥಾಪನೆಗೆ ಎರಡು ರಾಜಧಾನಿ ನಗರಗಳಲ್ಲಿ ಆಸ್ತಿಗಳ ಖರೀದಿಗೆ ಬಹಳಷ್ಟು ವೆಚ್ಚ ಮಾಡಲಾಗಿದ್ದರೂ ಈ ಕೇಂದ್ರಗಳು ಕಳೆದೊಂದು ದಶಕಗಳಿಂದ ಬಳಕೆಯಾಗುತ್ತಿಲ್ಲ ಎಂದು ವರದಿ ಆಕ್ಷೇಪ ವ್ಯಕ್ತಪಡಿಸಿದೆ. ಈ ಕೇಂದ್ರಗಳ ಸ್ಥಾಪನೆಗೆ ಆಯ್ಕೆಮಾಡಿದ ಆಸ್ತಿಗಳ ಕುರಿತೂ ವರದಿಯು ಪ್ರಶ್ನಿಸಿದೆ ವಾಷಿಂಗ್ಟನ್‌ನಲ್ಲಿ ಆಯ್ಕೆ ಮಾಡಿದ  ಜಮೀನಿನಲ್ಲಿ ಸಾಕಷ್ಟು ನ್ಯೂನತೆಗಳಿದ್ದರೂ ಸಚಿವಾಲಯ ಅದನ್ನು ಖರೀದಿಸಿದೆ ಎಂದು ಹೇಳಿದೆ.

ಪ್ಯಾರಿಸ್‌ನಲ್ಲಿ ಬಳಕೆಯಾಗದ ಕಟ್ಟಡದಿಂದಾಗಿ ಸರ್ಕಾರಕ್ಕೆ ರೂ 30 ಕೋಟಿಗೂ ಅಧಿಕ ನಷ್ಟವಾಗಿದೆ ಇದರ ಹೊರತಾಗಿ ಇಲ್ಲಿನ ಕಟ್ಟಡಕ್ಕೆ ಭದ್ರತೆ ಏಜನ್ಸಿ ನಿಯೋಜಿಸಲೂ ರೂ 14.89 ಕೋಟಿ ವೆಚ್ಚ ಮಾಡಿರುವುದನ್ನು ವರದಿ ಉಲ್ಲೇಖಿಸಿದೆ.

Similar News