×
Ad

ಲೋಕಾಯುಕ್ತ ಕಾಯ್ದೆಗೆ ಮಹಾ ವಿಧಾನಸಭೆ ಅಸ್ತು‌

Update: 2022-12-28 20:51 IST

ಮುಂಬೈ, ಡಿ.29: ಮುಖ್ಯಮಂತ್ರಿ ಸೇರಿದಂತೆ ರಾಜ್ಯ ಸರಕಾರದ ಎಲ್ಲಾ ಸಂಪುಟ ಸದಸ್ಯರನ್ನು ಲೋಕಾಯುಕ್ತದ ವ್ಯಾಪ್ತಿಗೆ ತರಲು ಅವಕಾಶ ಕಲ್ಪಿಸುವ ಲೋಕಾಯುಕ್ತ ವಿಧೇಯಕವನ್ನು ಮಹಾರಾಷ್ಟ್ರ ವಿಧಾನಸಭೆಯು ಬುಧವಾರ ಅಂಗೀಕರಿಸಿದೆ.

ಲೋಕಾಯುಕ್ತ ಕಾಯ್ದೆಯನ್ನು ಜಾರಿಗೊಳಿಸಿದ ದೇಶದ ಪ್ರಪ್ರಥಮ ರಾಜ್ಯ ಮಹಾರಾಷ್ಟ್ರವೆಂದು ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ತಿಳಿಸಿದ್ದಾರೆ. ಪ್ರತಿಪಕ್ಷಗಳ ಗೈರುಹಾಜರಿಯಲ್ಲಿ ಯಾವುದೇ ಚರ್ಚೆಗಳಿಲ್ಲದೆ ವಿಧೇಯಕವನ್ನು ಅಂಗೀಕರಿಸಲಾಯಿತೆಂದು ಮೂಲಗಳು ತಿಳಿಸಿವೆ.

ಸಚಿವರ ವಿರುದ್ಧ ಯಾವುದೇ ತನಿಖೆಯನ್ನು ಆರಂಭಿಸುವ ಮೊದಲು ಸದನದ ಅನುಮೋದನೆಯನ್ನು ಕೋರುವ ಅಗತ್ಯವನ್ನು ವಿಧೇಯಕದ ನಿಯಮಾವಳಿಗಳು ಸೂಚಿಸುತ್ತವೆ. ಸಚಿವರ ವಿರುದ್ದದ ಭ್ರಷ್ಟಾಚಾರ ಪ್ರಕರಣದ ತನಿಖೆ ನಡೆಸುವುದಕ್ಕೆ ಸದನದ ಮೂರನೆ ಎರಡರಷ್ಟು ಶಾಸಕರ ಅನುಮೋದನೆಯ ಅಗತ್ಯವಿದೆಯೆಂದು ವಿಧೇಯಕದಲ್ಲಿ ಹೇಳಲಾಗಿದೆ.

ಆದಾಗ್ಯೂ ಆಂತರಿಕ ಭದ್ರತೆ ಹಾಗೂ ಸಾರ್ವಜನಿಕ ಸುವ್ಯವಸ್ಥೆಗೆ ಸಂಬಂಧಿಸಿದ ವಿಷಯಗಳಲ್ಲಿ ಮುಖ್ಯಮಂತ್ರಿ ವಿರುದ್ಧ ಭ್ರಷ್ಟಾಚಾರದ ಆರೋಪಗಳ ತನಿಖೆಯನ್ನು ಲೋಕಾಯುಕ್ತ ನಡೆಸುವುದಿಲ್ಲವೆಂದು ಅವರು ತಿಳಿಸಿದ್ದಾರೆ.

‘‘ಲೋಕಾಯುಕ್ತ ತನಿಖೆಯನ್ನು ವಿಡಿಯೋದಲ್ಲಿಯೂ ದಾಖಲಿಸಬಹುದಾಗಿದೆ. ಒಂದು ವೇಳೆ ದೂರು ತಿರಸ್ಕೃತವಾಗಲು ಯೋಗ್ಯವೆಂದು ಲೋಕಾಯುಕ್ತಕ್ಕೆ ಮನವರಿಕೆಯಾದಲ್ಲಿ ತನಿಖೆಯ ದಾಖಲೆಗಳನ್ನು ಪ್ರಕಟಿಸಲಾಗುವುದಿಲ್ಲ ಹಾಗೂ ಅದನ್ನು ಯಾರಿಗೂ ಒದಗಿಸಲಾಗುವುದಿಲ್ಲ’’ ಎಂದು ವಿಧೇಯಕದಲ್ಲಿ ತಿಳಿಸಲಾಗಿದೆ.

ಮುಖ್ಯಮಂತ್ರಿ, ಸಂಪುಟ ಸಚಿವರು ಹಾಗೂ ಚುನಾಯಿತ ಪ್ರತಿನಿಧಿಗಳ ವಿರುದ್ಧದ ತನಿಖೆಯು ದೂರು ಸಲ್ಲಿಕೆಯಾದ ದಿನಾಂಕದಿಂದ ಹಿಡಿದು ಒಂದು ವರ್ಷದೊಳಗೆ ಪೂರ್ಣಗೊಳ್ಳಬೇಕೆಂದು ವಿಧೇಯಕದಲ್ಲಿ ಸೂಚಿಸಲಾಗಿದೆ.

ಲೋಕಾಯುಕ್ತ ಸದಸ್ಯರನ್ನು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಅಸೆಂಬ್ಲಿ ಸ್ಪೀಕರ್, ವಿಧಾನಪರಿಷತ್ ಅಧ್ಯಕ್ಷರು, ವಿಧಾನಸಭೆಯಲ್ಲಿನ ಪ್ರತಿಪಕ್ಷ ನಾಯಕರು ಹಾಗೂ ಭಾರತದ ಮುಖ್ಯ ನ್ಯಾಯಮೂರ್ತಿ ಅಥವಾ ಬಾಂಬೆ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಅವರನ್ನೊಳಗೊಂಡ ಸಮಿತಿಯು ಆಯ್ಕೆ ಮಾಡಲಿದೆ.

ಲೋಕಾಯುಕ್ತ ವಿಧೇಯಕವನ್ನು ರೂಪಿಸುವ ಮುನ್ನ ಖ್ಯಾತ ಸಾಮಾಜಿಕ ಕಾರ್ಯಕರ್ತ, ಭ್ರಷ್ಟಾಚಾರ ವಿರೋಧಿ ಹೋರಾಟಗಾರ ಅಣ್ಣಾ ಹಝಾರೆ ಜೊತೆ ಚರ್ಚಿಸಲಾಗಿತ್ತು ಹಾಗೂ ಕರಡು ವಿಧೇಯಕದ ಕುರಿತಂತೆ ಸಲಹೆ ಹಾಗೂ ಆಕ್ಷೇಪಗಳ ಪರಾಮರ್ಶೆಗಾಗಿ ಸಮಿತಿಯೊಂದನ್ನು ರಚಿಸಲಾಗಿತ್ತು ಎಂದು ದೇವೇಂದ್ರ ಫಡ್ನವೀಸ್ ತಿಳಿಸಿದ್ದಾರೆ.

Similar News