×
Ad

ಜಲೀಲ್ ಕೊಲೆ ಪ್ರಕರಣ: ಸಮಗ್ರ ತನಿಖೆಗೆ ಆಗ್ರಹಿಸಿ ಧರಣಿ

Update: 2022-12-28 21:03 IST

ಮಂಗಳೂರು: ಮುಸ್ಲಿಮರನ್ನು ಗುರಿಯಾಗಿಸಿ ನಡೆಯುತ್ತಿರುವ ಹಲ್ಲೆ, ಕೊಲೆ ಕೃತ್ಯಗಳನ್ನು ವಿರೋಧಿಸಿ ಸಿಪಿಐ ಮತ್ತು ಸಿಪಿಐಎಂ  ದ.ಕ.ಜಿಲ್ಲಾ ಸಮಿತಿಗಳ  ವತಿಯಿಂದ ನಗರದ ಮಿನಿವಿಧಾನ ಸೌಧದ ಮುಂಭಾಗ ಬುಧವಾರ ಪ್ರತಿಭಟನೆ ನಡೆಯಿತು.

ಕೃಷ್ಣಾಪುರದ ಜಲೀಲ್ ಕೊಲೆ ಪ್ರಕರಣದ ಸಮಗ್ರ ತನಿಖೆ ನಡೆಸಿ ಸೂಕ್ತ ಪರಿಹಾರ ಒದಗಿಸಲು ಒತ್ತಾಯಿಸಿದರು.

ಈ ಸಂದರ್ಭ ಮಾತನಾಡಿದ ಸಿಪಿಎಂ ಜಿಲ್ಲಾ ಸಮಿತಿಯ ಕಾರ್ಯದರ್ಶಿ ಯಾದವ್ ಶೆಟ್ಟಿ, ಮಸೂದ್, ಫೈಝಲ್ ಮತ್ತು ಜಲೀಲ್ ಹತ್ಯೆ ನಡೆದಾಗ ಜನಪ್ರತಿನಿಧಿಗಳು ಅವರ ಕುಟುಂಬವನ್ನು ಭೇಟಿಯಾಗಿ ಸ್ವಾಂತನ ಹೇಳಲಿಲ್ಲ. ಮುಸ್ಲಿಮ್ ಸಮುದಾಯದ ವ್ಯಕ್ತಿಯ ಕೊಲೆ , ಹಲ್ಲೆ ನಡೆದಾಗ ವೈಯಕ್ತಿಕ ವಿಷಯವಾಗುತ್ತದೆ. ಅದೇ ಹಿಂದೂ  ವ್ಯಕ್ತಿಯ  ಕೊಲೆಯ ಕ್ರಿಮಿನಲ್ ವಿಷಯವಾಗುತ್ತದೆ. ಸಂಘ ಪರಿವಾರ ನಡೆಸಿದ ಹಲ್ಲೆ, ಕೊಲೆ ಪ್ರಕರಣಗಳ ಸಮಗ್ರ ತನಿಖೆ ನಡೆಸಬೇಕು ಎಂದು ಅವರು ಒತ್ತಾಯಿಸಿದರು.

ಸಿಪಿಐ ಜಿಲ್ಲಾ ಕಾರ್ಯದರ್ಶಿ ಶೇಖರ್ ಮಾತನಾಡಿ, ಜನಪ್ರತಿನಿಧಿಗಳ ಪಕ್ಷಪಾತದ ನಿಲುವು ಬದಲಾಗಬೇಕು. ಒಂದು ಸಮುದಾಯದ  ವ್ಯಕ್ತಿಯ ಹತ್ಯೆಯಾದಾಗ ಪರಿಹಾರ , ಇನ್ನೊಂದು ಸಮುದಾಯದ ವ್ಯಕ್ತಿಯ ಹತ್ಯೆಯಾದಾಗ ಪರಿಹಾರ ಇಲ್ಲ. ಇದರಿಂದಾಗಿ ಸರಕಾರ ಮತ್ತು ಜನಪ್ರತಿನಿಧಿಗಳ ನಿಲುವನ್ನು ಜನರು ಸಂಶಯದಿಂದ ನೋಡುವಂತಾಗಿದೆ ಎಂದರು.

ಡಿವೈಎಫ್‌ಐ ರಾಜ್ಯ ಅಧ್ಯಕ್ಷ ಮುನೀರ್ ಕಾಟಿಪಳ್ಳ ಮಾತನಾಡಿ, ಸುರತ್ಕಲ್‌ನಲ್ಲಿ ನಡೆದಿರುವ ಕೊಲೆ ಪ್ರಕರಣಗಳ ಲಾಭ ಪಡೆದು ಬಿಜೆಪಿ ಈ ವರೆಗೆ ಅಧಿಕಾರಕ್ಕೆ ಬಂದಿದೆ. ಸುರತ್ಕಲ್‌ನ ಹಾಲಿ  ಶಾಸಕ ಡಾ. ವೈ ಭರತ್ ಶೆಟ್ಟಿ  ಸಾಧನೆ ಶೂನ್ಯವಾಗಿದೆ.  ಅವರಿಗೆ ನೈತಿಕತೆ ಇದ್ದರೆ ಕೊಲೆಗೀಡಾದ ಜಲೀಲ್ ಅವರ ಮನೆಗೆ ಹೋಗಿ ಮನೆಮಂದಿಗೆ ಸಾಂತ್ವನ ಹೇಳಲಿ ಎಂದರು.

ಸಿಪಿಎಂ ಜಿಲ್ಲಾ ಕಾರ್ಯಕಾರಿ ಸಮಿತಿಯ  ಸುಕುಮಾರ್ , ಸದಾಶಿವದಾಸ್, ಕೃಷ್ಣಪ್ಪ ಸಾಲ್ಯಾನ್, ಸಂತೋಷ್ ಬಜಾಲ್, ಇಮ್ತಿಯಾಝ್, ಸಿಪಿಐ ಜಿಲ್ಲಾ ಸಮತಿಯ ಬಿ.ಶೇಖರ್, ವಿಕುಕ್ಯಾನ್, ಎಂ.ಕರುಣಾಕರ್, ಸುರೇಶ್ ಕುಮಾರ್ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Similar News