ಲೈಂಗಿಕ ಕಿರುಕುಳ ಆರೋಪ: ಉಮ್ಮನ್‌ ಚಾಂಡಿಗೆ ಸಿಬಿಐ ಕ್ಲೀನ್‌ಚಿಟ್

Update: 2022-12-28 15:41 GMT

ತಿರುವನಂತಪುರಂ, ಡಿ.28: ಕೇರಳದಲ್ಲಿ ಕೋಲಾಹಲ ಸೃಷ್ಟಿಸಿದ ಸೋಲಾರ್ ಹಗರಣದ ಪ್ರಮುಖ ಆರೋಪಿ ಮಹಿಳೆಯೊಬ್ಬರು ಹೊರಿಸಿದ್ದ ಲೈಂಗಿಕ ಶೋಷಣೆಯ ಆರೋಪದಲ್ಲಿ ಮಾಜಿ ಮುಖ್ಯಮಂತ್ರಿ ಉಮ್ಮನ್‌ ಚಾಂಡಿಗೆ ಕೇಂದ್ರೀಯ ತನಿಖಾ ದಳ (ಸಿಬಿಐ) ಕ್ಲೀನ್ ಚಿಟ್ ನೀಡಿದೆ.

ಈ ಬಗ್ಗೆ ಸಿಬಿಐ ಮಂಗಳವಾರ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಕೋರ್ಟ್ಗೆ ವರದಿಯೊಂದನ್ನು ಸಲ್ಲಿಸಿರುವುದಾಗಿ ಅಧಿಕೃತ ಮೂಲಗಳು ತಿಳಿಸಿವೆ. ಸೋಲಾರ್ ಹಗರಣದ ಆರೋಪಿ ಮಹಿಳೆಯು ಹೊರಿಸಿದ್ದ ಲೈಂಗಿಕ ಶೋಷಣೆಯ ಆರೋಪಕ್ಕೆ ಸಂಬಂಧಿಸಿ ಕೇಂದ್ರೀಯ ತನಿಖಾ ದಳವು ಉಮ್ಮನ್‌ ಚಾಂಡಿ, ಮಾಜಿ ಕೇಂದ್ರ ಸಚಿವ ಕೆ.ಸಿ.ವೇಣುಗೋಪಾಲ್ ಹಾಗೂ ಇತರ ಕೆಲವು ರಾಜಕಾರಣಿಗಳ ವಿರುದ್ಧ ಕಳೆದ ವರ್ಷ ಮೊಕದ್ದಮೆ ದಾಖಲಿಸಿತ್ತು.
 
ಯುಡಿಎಫ್ ಸರಕಾರದ ಅವಧಿಯಲ್ಲಿ ನಡೆದಿದೆಯೆನ್ನಲಾದ ಬಹುಕೋಟಿ ಸೌರಫಲಕ ಹಗರಣದಲ್ಲಿ ಆರೋಪಿಯಾಗಿರುವ ಮಹಿಳೆಯೊಬ್ಬರುತನ್ನನ್ನು 2012ರಲ್ಲಿ ಊಮನ್ ಚಾಂಡಿ ಸೇರಿದಂತೆ ಆರು ಮಂದಿ ಲೈಂಗಿಕವಾಗಿ ಶೋಷಿಸಿದ್ದಾರೆಂದು ದೂರು ನೀಡಿದ್ದರು. ಆಕೆಯ ನೀಡಿದ ದೂರನ್ನು ಆಧರಿಸಿ ಕೇರಳ ಪೊಲೀಸರು ಈ ಆರು ಮಂದಿಯ ವಿರುದ್ಧ ಪ್ರಕರಣ ದಾಖಲಿಸಿ, ತನಿಖೆ ನಡೆಸಿದ್ದರು. 2021ರ ಆರಂಭದಲ್ಲಿ ಸಿಪಿಎಂ ನೇತೃತ್ವದ ಕೇರಳ ಸರಕಾರವು ಈ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸುವಂತೆ ಶಿಫಾರಸು ಮಾಡಿತ್ತು.

ಪ್ರಕರಣದ ತನಿಖೆ ನಡೆಸಿದ ಸಿಬಿಐ ಚಾಂಡಿ ವಿರುದ್ಧ ಮಹಿಳೆಯು ಹೊರಿಸಿದ ಆರೋಪಕ್ಕೆ ಯಾವುದೇ ಆಧಾರವಿಲ್ಲವೆಂದು ತನಿಖೆಯಿಂದ ತಿಳಿದುಬಂದಿರುವದಾಗಿ ತಿಳಿಸಿದೆ. ಅಲ್ಲದೆ ನಿರ್ದಿಷ್ಟ ದಿನಾಂಕದಂದು ಮಹಿಳೆಯು ಮುಖ್ಯಮಂತ್ರಿಯವರ ಅಧಿಕೃತ ನಿವಾಸಕ್ಕೆ ತೆರಳಿದ್ದಾರೆಂಬುದನ್ನು ಸಾಬೀತುಪಡಿಸುವಂತಹ ಯಾವುದೇ ಪುರಾವೆ ಇಲ್ಲವೆಂದು ಸಿಬಿಐ ಹೇಳಿದೆ. ಅಲ್ಲದೆ ಇದೊಂದು ಕಪೋಲಕಲ್ಪಿತ ಪ್ರಕರಣವೆಂಬುದನ್ನು ಕೂಡಾ ತಾನು ಪತ್ತೆಹಚ್ಚಿರುವುದಾಗಿ ಸಿಬಿಐ ತಿಳಿಸಿದೆ.

Similar News