×
Ad

ಮೂಡಬಿದಿರೆ: ಹಿರಿಯ ಸಿವಿಲ್ ಮತ್ತು ಜೆಎಂಎಫ್ಸಿ ನ್ಯಾಯಾಲಯ ಹಾಗೂ ನೂತನ ವಕೀಲರ ಭವನ ಲೋಕಾರ್ಪಣೆ

Update: 2022-12-30 19:50 IST

ಮಂಗಳೂರು: ದ.ಕ. ಜಿಲ್ಲಾ ನ್ಯಾಯಾಂಗ, ಲೋಕೋಪಯೋಗಿ ಇಲಾಖೆ ಹಾಗೂ ಮೂಡಬಿದಿರೆ ವಕೀಲರ ಸಂಘ(ರಿ)ದ ಸಂಯುಕ್ತಾಶ್ರಯದಲ್ಲಿ ಮೂಡಬಿದಿರೆಯ ನ್ಯಾಯಾಲಯದ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ ಹಿರಿಯ ಸಿವಿಲ್ ಮತ್ತು ಜೆಎಂಎಫ್ ಸಿ ನ್ಯಾಯಾಲಯ ಹಾಗೂ ವಕೀಲರ ಭವನವನ್ನು ಶುಕ್ರವಾರ ಸುಪ್ರೀಂ ಕೋರ್ಟ್ ನ ನ್ಯಾಯಮೂರ್ತಿ ಎಸ್. ಅಬ್ದುಲ್ ನಝೀರ್ ಹಾಗೂ ರಾಜ್ಯ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ. ವರಾಳೆ ಲೋಕಾರ್ಪಣೆಗೈದರು.

ಸಭಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಸುಪ್ರೀಂ ಕೋರ್ಟ್ ನ ನ್ಯಾಯಮೂರ್ತಿ ಎಸ್. ಅಬ್ದುಲ್ ನಝೀರ್ ಮೂಡಬಿದಿರೆ ತಾಲೂಕಿನಲ್ಲಿ ಶ್ರೀಮಂತ ಕಕ್ಷಿದಾರರ ಸಂಖ್ಯೆ ಕಡಿಮೆ ಇದೆ. ಬಹುತೇಕ ಕಕ್ಷಿದಾರರು ಆರ್ಥಿಕವಾಗಿ ಹಿಂದುಳಿದವರೇ ಆಗಿದ್ದಾರೆ. ಹಾಗಾಗಿ ಅತ್ಯಂತ ಕಡಿಮೆ ವೆಚ್ಚದಲ್ಲಿ ತ್ವರಿತಗತಿಯಲ್ಲಿ ನ್ಯಾಯ ಸಿಗುವಂತಹ ವ್ಯವಸ್ಥೆಯಾಗಬೇಕು ಎಂದು ತಿಳಿಸಿದರು.

ಸಮಾಜದಲ್ಲಿ ಶಾಂತಿ ನೆಲೆಸಬೇಕಾದರೆ ವ್ಯಾಜ್ಯವಿರಬಾರದು. ಅದರಲ್ಲೂ ಸಿವಿಲ್ ವ್ಯಾಜ್ಯದ ಸುಳಿಯೊಳಗೆ ಸಿಕ್ಕರೆ ಅದರಿಂದ ಅಷ್ಟು ಸುಲಭದಿಂದ ಹೊರಬರಲು ಸಾಧ್ಯವಿಲ್ಲ. ಸಮಸ್ಯೆ ಸೃಷ್ಟಿಯಾದ ತಕ್ಷಣ ಅದರ ಪರಿಹಾರಕ್ಕೆ ಮುಂದಾಗಬೇಕು. ಪರಿಹಾರ ಕಲ್ಪಿಸದೆ ಸಮಸ್ಯೆಯನ್ನು ಬಿಗಡಾಯಿಸಲು ಬಿಟ್ಟರೆ ಅಶಾಂತಿ ಸೃಷ್ಟಿಯಾಗುವ ಸಾಧ್ಯತೆ ಇದೆ ಎಂದು ನ್ಯಾಯಮೂರ್ತಿ ಎಸ್. ಅಬ್ದುಲ್ ನಝೀರ್ ಅಭಿಪ್ರಾಯಪಟ್ಟರು.

ಈ ಸಂದರ್ಭ ರಾಜ್ಯ ಹೈಕೋರ್ಟ್ ನ್ಯಾಯಮೂರ್ತಿ ಹಾಗೂ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷ ಬಿ. ವೀರಪ್ಪ, ನ್ಯಾಯಮೂರ್ತಿಗಳಾದ  ಎಸ್.ಜಿ. ಪಂಡಿತ್, ಪ್ರದೀಪ್ ಸಿಂಗ್ ಯೆರೂರ್, ಎಸ್.ವಿಶ್ವಜಿತ್ ಶೆಟ್ಟಿ, ಸಿ.ಎಂ. ಜೋಶಿ, ಟಿ.ಜಿ. ಶಿವಶಂಕರೇಗೌಡ ಉಪಸ್ಥಿತರಿದ್ದರು.

ಶಾಸಕ ಉಮಾನಾಥ ಎ. ಕೋಟ್ಯಾನ್, ದ.ಕ. ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ರವೀಂದ್ರ ಎಂ ಜೋಷಿ, ರಾಜ್ಯ ಹೈಕೋರ್ಟ್ ಮಹಾ ಲೇಖನಾಧಿಕಾರಿ ಮುರಳೀಧರ ಪೈ ಬಿ., ರಾಜ್ಯ ವಕೀಲರ ಪರಿಷತ್ತಿನ ಸದಸ್ಯ ಪಿ.ಪಿ.ಹೆಗ್ಡೆ, ಮೂಡಬಿದಿರೆ ವಕೀಲರ ಸಂಘದ ಸಂಸ್ಥಾಪಕ ಅಧ್ಯಕ್ಷ  ಎಂ. ಬಾಹುಬಲಿ ಪ್ರಸಾದ್ ಭಾಗವಹಿಸಿದ್ದರು.

Similar News