ಪಾಕ್ ಡ್ರೋನ್ ಗಳು:‌ ಗಡಿಯಲ್ಲಿನ ‘ಹಿಟ್’ ತಂಡಗಳಿಗೆ ಬಿಎಸ್ಎಫ್ ನಿಂದ ಒಂದು ಲಕ್ಷ ರೂ. ಬಹುಮಾನ

Update: 2022-12-30 17:32 GMT

ಹೊಸದಿಲ್ಲಿ,ಡಿ.30: ತನ್ನ ‘ಹಿಟ್’ ತಂಡಗಳಿಗೆ ಒಂದು ಲ.ರೂ.ನಗದು ಬಹುಮಾನ, ಜಾಮರ್ಗಳು ಮತ್ತು ಸ್ಪೂಫರ್ಗಳ ನಿಯೋಜನೆ ಮತ್ತು ಭದ್ರತಾ ಸಿಬ್ಬಂದಿಗಳಿಂದ ಬಹುಹಂತಗಳ ಗಸ್ತುಗಳು; ಇವು ಪಾಕಿಸ್ತಾನದಿಂದ ಭಾರತಕ್ಕೆ ಮಾದಕದ್ರವ್ಯಗಳು ಮತ್ತು ಶಸ್ತ್ರಾಸ್ತ್ರಗಳನ್ನು ಸಾಗಿಸುವ ಡ್ರೋನ್ ಗಳ ನುಸುಳುವಿಕೆಯನ್ನು ತಡೆಯಲು ಗಡಿ ರಕ್ಷಣಾ ಪಡೆ (ಬಿಎಸ್ಎಫ್)ಯು ಕೈಗೊಂಡಿರುವ ಕೆಲವು ಪ್ರಮುಖ ಕ್ರಮಗಳಾಗಿವೆ.

ಎರಡು ದೇಶಗಳ ನಡುವೆ ಸುಸಜ್ಜಿತ ಗಡಿಬೇಲಿಯಿದ್ದರೂ ಡ್ರೋನ್ ಗಳ ದಾಳಿಯು ಹೆಚ್ಚುತ್ತಿದೆ,ಹೆಚ್ಚಿನ ಡ್ರೋನ್ ಗಳು ಪಂಜಾಬ್ ನಲ್ಲಿ ಕಾಣಿಸಕೊಳ್ಳುತ್ತಿವೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಹೆಚ್ಚು ಡ್ರೋನ್ ಗಳನ್ನು ಹೊಡೆದುರುಳಿಸಲಾಗಿದೆ ಎಂದು ಅಧಿಕೃತ ದತ್ತಾಂಶಗಳು ತೋರಿಸಿವೆ.

‌ಡ್ರೋನ್ ಪಿಡುಗಿನ ವಿರುದ್ಧ ಹೋರಾಡಲು ಯೋಧರನ್ನು ಪ್ರೇರೇಪಿಸಲು ಪಡೆಯು ಕೆಲ ಸಮಯದ ಹಿಂದೆ ಅಳವಡಿಸಿಕೊಂಡಿರುವ ನೀತಿಯಂತೆ ರೈಫಲ್ ಫೈರಿಂಗ್ ಅಥವಾ ಜಾಮಿಂಗ್ ತಂತ್ರಜ್ಞಾನದ ಮೂಲಕ ಡ್ರೋನ್ ಪತನಗೊಳಿಸುವ ಗಡಿಯಲ್ಲಿನ ಪ್ರತಿ ‘ಹಿಟ್’ತಂಡಕ್ಕೂ ಒಂದು ಲ.ರೂ.ಗಳ ನಗದು ಪ್ರೋತ್ಸಾಹ ಧನವನ್ನು ನೀಡಲಾಗುವುದು ಎಂದು ಹಿರಿಯ ಬಿಎಸ್ಎಫ್ ಅಧಿಕಾರಿಯೋರ್ವರು ಸುದ್ದಿಸಂಸ್ಥೆಗೆ ತಿಳಿಸಿದರು.

ಎಪ್ರಿಲ್ ನಲ್ಲಿ ಜಲಂಧರ್ನ ಪಂಜಾಬ್ ಮುಂಚೂಣಿ ಪಡೆಯೂ ಪಾಕಿಸ್ತಾನದಿಂದ ಮಾದಕ ದ್ರವ್ಯಗಳು ಮತ್ತು ಶಸ್ತ್ರಾಸ್ತ್ರಗಳನ್ನು ಪಡೆಯಲು ಡ್ರೋನ್ ಗಳನ್ನು ಬಳಸುವವರ ಕುರಿತು ಮಾಹಿತಿಗಳನ್ನು ನೀಡುವ ಸ್ಥಳೀಯರಿಗೆ ಅಥವಾ ಸಾರ್ವಜನಿಕರಿಗೆ ಇಷ್ಟೇ ಮೊತ್ತದ ಬಹುಮಾನವನ್ನು ಪ್ರಕಟಿಸಿತ್ತು ಎಂದರು.

ಈ ವರ್ಷದ ಡಿ.25ರವರೆಗೆ ಬಿಎಸ್ಎಫ್ 22 ಡ್ರೋನ್ ಗಳನ್ನು ಹೊಡೆದುರುಳಿಸಿದೆ ಮತ್ತು ಡಝನ್ಗೂ ಹೆಚ್ಚಿನ ಹಿಟ್ ತಂಡಗಳಿಗೆ ತಲಾ ಒಂದು ಲ.ರೂ. ಬಹುಮಾನವನ್ನು ನೀಡಲಾಗಿದೆ.

ಈ ವರ್ಷ ಎಲ್ಲ 22 ಡ್ರೋನ್ ಪತನಗಳು ಪಂಜಾಬ ಗಡಿಯಲ್ಲಿ ನಡೆದಿವೆ. 2020 ಮತ್ತು 2021ರಲ್ಲಿ ಜಮ್ಮುವಿನಲ್ಲಿ ಮತ್ತು ಪಂಜಾಬ್ ನಲ್ಲಿ ತಲಾ ಒಂದು ಡ್ರೋನ್ ಗಳನ್ನು ಹೊಡೆದುರುಳಿಸಲಾಗಿತ್ತು ಎಂದು ದತ್ತಾಂಶಗಳು ತೋರಿಸಿವೆ.

ಭಾರತ-ಪಾಕ್ ನಡುವಿನ 2,289 ಕಿ.ಮೀ.ಉದ್ದದ ಗಡಿಯಲ್ಲಿ 2020ರಲ್ಲಿ 77 ಡ್ರೋನ್ಗಳು ಕಾಣಿಸಿಕೊಂಡಿದ್ದು,ಅವುಗಳ ಸಂಖ್ಯೆ ಕಳೆದ ವರ್ಷ 104ಕ್ಕೆ ಮತ್ತು ಈ ವರ್ಷ (ಡಿ.23ರವರೆಗೆ) 311ಕ್ಕೆ ಏರಿಕೆಯಾಗಿದೆ. ಈ ಪೈಕಿ ಶೇ.75ರಷ್ಟು ಡ್ರೋನ್ಗಳು ಪಂಜಾಬನಲ್ಲಿ ಕಾಣಿಸಿಕೊಂಡಿದ್ದವು.

ಈ ಡ್ರೋನ್ ಗಳ ತರಂಗಾಂತರಗಳು ಮತ್ತು ಪಯಣ ಪಥವನ್ನು ನಿರ್ಬಂಧಿಸಲು ಬಿಎಸ್ಎಫ್ ಗಡಿಯಲ್ಲಿ ಜಾಮರ್ಗಳು ಮತ್ತು ಸ್ಪೂಫರ್ಗಳನ್ನೂ ನಿಯೋಜಿಸಿದೆ. 

Similar News