ರಜೆಯಲ್ಲೂ ಕೆಲಸ ಸಂಬಂಧಿ ಸಂದೇಶ, ಕರೆಗಳ ಮೂಲಕ ಕಿರಿಕಿರಿ ಮಾಡುವ ಸಹೋದ್ಯೋಗಿಗಳಿಗೆ ರೂ. 1 ಲಕ್ಷ ದಂಡ!
ಹೊಸದಿಲ್ಲಿ: ರಜಾ ದಿನಗಳಲ್ಲಿ ಯಾವುದೇ ಉದ್ಯೋಗಿಗೆ ಕೆಲಸ ಸಂಬಂಧಿತ ಕರೆ, ಸಂದೇಶ, ಇಮೇಲ್ ಮೂಲಕ ಕಿರಿಕಿರಿ ಉಂಟುಮಾಡುವ ಸಹೋದ್ಯೋಗಿಗಳಿಗೆ (colleagues) ರೂ. 1 ಲಕ್ಷ ದಂಡ ವಿಧಿಸಲು 'ಡ್ರೀಮ್ 11' ಸಂಸ್ಥೆ ಮುಂದಾಗಿದೆ ಎಂದು CNBC ಸುದ್ದಿ ಸಂಸ್ಥೆ ವರದಿ ಮಾಡಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಡ್ರೀಮ್ 11 (Dream11) ಸಂಸ್ಥಾಪಕರಾದ ಹರ್ಷ ಜೈನ್ ಮತ್ತು ಭವಿತ್ ಸೇಠ್, "ಕಂಪನಿಯಲ್ಲಿ ದುಡಿಯುತ್ತಿರುವ ಪ್ರತಿ ಉದ್ಯೋಗಿಯೂ ಆತನ ಹುದ್ದೆ, ಉದ್ಯೋಗಕ್ಕೆ ಸೇರ್ಪಡೆಯಾದ ದಿನಾಂಕ ಮತ್ತಿತರ ವಿಚಾರಗಳನ್ನು ಹೊರತುಪಡಿಸಿಯೂ ವಿಶ್ರಾಂತ ಸಮಯಕ್ಕೆ ಅರ್ಹನಾಗಿದ್ದಾನೆ. ವಿಶ್ರಾಂತ ಸಮಯ ಕಳೆಯುತ್ತಿರುವ ಯಾವುದೇ ಉದ್ಯೋಗಿಯನ್ನು ಮತ್ತೊಬ್ಬ ಉದ್ಯೋಗಿಯು ಕೆಲಸದ ಸಂಬಂಧ ಸಂಪರ್ಕಿಸಲು ಯತ್ನಿಸಿದರೆ ಅಂತಹ ವ್ಯಕ್ತಿಗಳು ಒಂದು ಲಕ್ಷ ರೂಪಾಯಿ ದಂಡ ತೆರಬೇಕಾಗುತ್ತದೆ. ಕಂಪನಿಯು ಯಾವುದೇ ಉದ್ಯೋಗಿಯನ್ನು ಅವಲಂಬಿಸಿಲ್ಲ ಎಂಬುದನ್ನು ಖಾತ್ರಿಗೊಳಿಸಲು ಈ ನೂತನ ನೀತಿಯನ್ನು ಜಾರಿಗೆ ತರಲಾಗುತ್ತಿದೆ" ಎಂದು ತಿಳಿಸಿದ್ದಾರೆ.
ಕಂಪನಿಯ ನೂತನ ನೀತಿಯಿಂದ ಉದ್ಯೋಗಿಗಳು ಸಂತಸಗೊಂಡಿದ್ದಾರೆ ಎಂದು ವರದಿಯಾಗಿದ್ದು, "ಕಂಪನಿಯ ಎಲ್ಲ ವ್ಯವಸ್ಥೆ ಮತ್ತು ಗುಂಪುಗಳಿಂದ ವಿರಾಮ ಪಡೆಯುವ ಅವಕಾಶ ಒದಗಿಸುವುದು ಯಾವುದೇ ಉದ್ಯೋಗಿಯ ಪಾಲಿಗೆ ಒಂದು ಉಡುಗೊರೆ. ವಾರಪೂರ್ತಿ ಉದ್ಯೋಗ ಸಂಬಂಧಿ ಕರೆಗಳು, ಇಮೇಲ್‌ಗಳು, ಸಂದೇಶಗಳು ಅಥವಾ ವಾಟ್ಸ್ ಆ್ಯಪ್‌ನಲ್ಲಿ ತೊಡಗಿಸಿಕೊಳ್ಳಲು ನಮಗೆ ಯಾವುದೇ ಚಿಂತೆ ಇಲ್ಲ. ಆದರೆ, ಈ ನೀತಿಯಿಂದ ನಾವು ಇಷ್ಟಪಡುವ ಕೆಲಸಗಳಲ್ಲಿ ಕೆಲ ಗುಣಮಟ್ಟದ ಸಮಯದೊಂದಿಗೆ ತೊಡಗಿಸಿಕೊಳ್ಳಲು ನೆರವಾಗುತ್ತದೆ. ಮತ್ತು ನಾನು ಈ ಸಮಯದಲ್ಲಿ ಪರ್ವತಗಳತ್ತ ಮುಖ ಮಾಡಲು ಬಯಸುತ್ತೇನೆ. ಈ ಸಂದರ್ಭದಲ್ಲಿ ದೂರವಾಣಿ ಸಂಪರ್ಕ ಸಿಗುವುದಿಲ್ಲ ಎಂಬ ಬಗ್ಗೆ ನನಗೆ ಯಾವುದೇ ಅಳುಕಿಲ್ಲ. ವಿಶ್ರಾಂತ ಸಮಯ ಕಳೆಯಲು ಅದು ಬಹು ಪ್ರಶಸ್ತವಾದ ಜಾಗ. ಈ ಸಂಪರ್ಕರಹಿತ ಸಮಯ ಯಾವುದೇ ವ್ಯಕ್ತಿಯ ಪಾಲಿಗೆ ಪುನಶ್ಚೇತನ, ವಿಶ್ರಾಂತಿ ಪಡೆದು, ತಾಜಾತನ, ಸಂತಸ ಹಾಗೂ ಹೊಸ ಶಕ್ತಿಯೊಂದಿಗೆ ಕೆಲಸಕ್ಕೆ ಮರಳಲು ನೆರವಾಗುತ್ತದೆ. ಇದರಿಂದ ಆ ವ್ಯಕ್ತಿ ಕೆಲಸದಲ್ಲಿ ತನ್ನ ಅತ್ಯುತ್ತಮವಾದುದನ್ನು ನೀಡಲು ಸಾಧ್ಯವಾಗುತ್ತದೆ" ಎಂದು ಡ್ರೀಮ್ 11 ಉದ್ಯೋಗಿಯೊಬ್ಬರು ಅಭಿಪ್ರಾಯ ಪಟ್ಟಿದ್ದಾರೆ.
ಲಿಂಕ್ಡ್‌ಇನ್ ಖಾತೆಯಲ್ಲಿ ತನ್ನ ನೂತನ ವಿಶ್ರಾಂತ ಸಮಯ ನೀತಿಯನ್ನು ಪ್ರಕಟಿಸಿರುವ ಡ್ರೀಮ್ 11 ಸಂಸ್ಥೆ, "ತಮ್ಮ ಪ್ರೀತಿಪಾತ್ರರೊಂದಿಗೆ ಗುಣಮಟ್ಟದ ಸಮಯ ಕಳೆಯುವುದು ಅಥವಾ ರಜೆ ಸಮಯದಲ್ಲಿ ವಿಶ್ರಾಂತಿ ಪಡೆಯುವುದರಿಂದ ಅವರ ಒಟ್ಟಾರೆ ಮನಸ್ಥಿತಿ, ಜೀವನದ ಗುಣಮಟ್ಟ, ಸಾಮಾನ್ಯ ಉತ್ಪಾದಕತೆ ಮತ್ತಿತರ ಅಂಶಗಳು ಸುಧಾರಿಸಲಿವೆ" ಎಂದು ಹೇಳಿದೆ.