×
Ad

ಉಡುಪಿ: ಯಕ್ಷಗಾನ ಕಲಾರಂಗದಿಂದ ಯಕ್ಷನಿಧಿ ಡೈರಿ ಬಿಡುಗಡೆ: ಮೃತ ಕಲಾವಿದರ ಕುಟುಂಬಕ್ಕೆ ಸಾಂತ್ವನ ನಿಧಿ ವಿತರಣೆ

Update: 2022-12-31 18:51 IST

ಉಡುಪಿ: ಯಕ್ಷಗಾನ ಕಲಾರಂಗ ಉಡುಪಿ ಕಳೆದ ಎರಡು ದಶಕಗಳಿಂದ ವೃತ್ತಿ ಮೇಳದ ಕಲಾವಿದರ ವಿಳಾಸ ಮತ್ತು ದೂರವಾಣಿ ಸಂಖ್ಯೆಯನ್ನೊಳಗೊಂಡ ಡೈರಿಯನ್ನು ಪ್ರಕಟಿಸುತಿದ್ದು, ‘ಯಕ್ಷನಿಧಿ ಡೈರಿ - 2023’ರ ಡೈರಿ ಬಿಡುಗಡೆ ಕಾರ್ಯಕ್ರಮವು  ಸಂಸ್ಥೆಯ ಕಚೇರಿಯಲ್ಲಿ ಶುಕ್ರವಾರ ಜರಗಿತು.

ಯಕ್ಷಗಾನ ಅಕಾಡೆಮಿಯ ನಿಕಟಪೂರ್ವ ಅಧ್ಯಕ್ಷ ಡಾ.ಜಿ.ಎಲ್. ಹೆಗಡೆ ಅವರು ಡೈರಿ ಬಿಡುಗಡೆ ಮಾಡಿ ಸಂಸ್ಥೆ ಕಲಾವಿದರ ಕ್ಷೇಮಚಿಂತನೆಗೆ ಮಾಡುತ್ತಿರುವ ಕೆಲಸವನ್ನು ಶ್ಲಾಘಿಸಿದರು. ಯಕ್ಷಗಾನ ಶ್ರೇಷ್ಠ ಕಲೆಯಾಗಿದ್ದು ಇದರ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುವಲ್ಲಿ ಕಲಾವಿದರ ಹೊಣೆಗಾರಿಕೆ ಮಹತ್ವದ್ದು ಎಂದರು.

ಇದೇ ಸಂದರ್ಭದಲ್ಲಿ ಕಳೆದ ತಿಂಗಳು ಅಗಲಿದ ಕಟೀಲು ಮೇಳ ಸಹಿತ ವಿವಿಧ ಮೇಳಗಳಲ್ಲಿ 18 ವರ್ಷಗಳ ಕಾಲ ಭಾಗವತರಾಗಿ ಸೇವೆಸಲ್ಲಿಸಿದ್ದ ಕೀರ್ತನ್ ಆರ್. ಶೆಟ್ಟಿ ಮತ್ತು ಮಂದಾರ್ತಿ ಮೇಳದಲ್ಲಿ ನಾಲ್ಕು ವರ್ಷಗಳ ಕಾಲ ಸ್ತ್ರೀವೇಷಧಾರಿಯಾಗಿ ಸೇವೆ ಸಲ್ಲಿಸಿದ್ದ ಚಂದ್ರ ನಾಯ್ಕ್ ಇವರ ಪತ್ನಿಯರಿಗೆ ಅನುಕ್ರಮವಾಗಿ 75000ರೂ. ಮತ್ತು 50,000 ರೂ.  ಸಾಂತ್ವನನಿಧಿಯನ್ನು ಕಾರ್ಪೊರೇಶನ್ ಬ್ಯಾಂಕ್‌ನ ನಿವೃತ್ತ ಅಧಿಕಾರಿ ವಿಲಾಸಿನಿ ಬಿ.ಶೆಣೈ ವಿತರಿಸಿದರು.

ಇತ್ತೀಚೆಗೆ ಅಪಘಾತಕ್ಕೊಳಗಾದ ಮಂದಾರ್ತಿ ಮೇಳದ ಕಲಾವಿದ ಶಂಕರ ಮರಕಾಲ ಇವರಿಗೆ ವೈದ್ಯಕೀಯ ನೆರವನ್ನು ನೀಡಲಾಯಿತು. ಉದ್ಯಮಿ ವಿದ್ಯಾಪ್ರಸಾದ್, ಕಲಾ ಪೋಷಕರಾದ ಯು.ವಿಶ್ವನಾಥ ಶೆಣೈ, ರಾಜಗೋಪಾಲ ಆಚಾರ್ಯ, ಸಂಸ್ಥೆಯ ಉಪಾಧ್ಯಕ್ಷ ಎಸ್.ವಿ.ಭಟ್, ಪಿ.ಕಿಶನ್ ಹೆಗ್ಡೆ, ಸದಸ್ಯರಾದ ಎಚ್.ಎನ್.ಶೃಂಗೇಶ್ವರ, ಮನೋಹರ ಕೆ., ಬಿ.ಭುವನ ಪ್ರಸಾದ್ ಹೆಗ್ಡೆ, ಮುದ್ರಾಡಿ ವಿಜಯಕುಮಾರ್, ಕಿಶೋರ್ ಸಿ.ಉದ್ಯಾವರ, ಅನಂತರಾಜ ಉಪಾಧ್ಯ ಅವರು ಈ ವೇಳೆ ಉಪಸ್ಥಿತರಿದ್ದರು.

ಸಂಸ್ಥೆಯ ಅಧ್ಯಕ್ಷ ಎಂ.ಗಂಗಾಧರ ರಾವ್ ಸ್ವಾಗತಿಸಿದರು.ಕಾರ್ಯದರ್ಶಿ ಮುರಲಿ ಕಡೆಕಾರ್ ಅವರು ಪ್ರಸ್ತಾವನೆಯ ಮಾತುಗಳೊಂದಿಗೆ ಕಾರ್ಯಕ್ರಮ ನಿರೂಪಿಸಿದರು. ನಾರಾಯಣ ಎಂ. ಹೆಗಡೆ ವಂದಿಸಿದರು. 

Similar News