ಪೋಪ್ ಹದಿನಾರನೇ ಬೆನಡಿಕ್ಟ್ ನಿಧನಕ್ಕೆ ಉಡುಪಿ ಬಿಷಪ್ ಸಂತಾಪ

Update: 2022-12-31 14:43 GMT

ಉಡುಪಿ: ಇಪ್ಪತ್ತೊಂದನೇ ಶತಮಾನದ ಪ್ರಮುಖ ಹಾಗೂ ಪ್ರಭಾವಿ ನಾಯಕರಲ್ಲಿ ಒಬ್ಬರಾದ ಪೋಪ್ ಹದಿನಾರನೇ ಬೆನೆಡಿಕ್ಟ್  ದೈವಾಧೀನರಾದ ಸುದ್ಧಿ ನಮ್ಮನ್ನು ಅತೀವ ದುಃಖದಲ್ಲಿ ಮುಳುಗಿಸಿದೆ. ದಿವಂಗತರ ಆತ್ಮಕ್ಕೆ ಭಗವಂತ ಶಾಂತಿ ನೀಡಲು ಪ್ರಾರ್ಥಿಸುತ್ತೇನೆ ಎಂದು ಧರ್ಮಪ್ರಾಂತದ ಧರ್ಮಾಧಿಕಾರಿ ಅ.ವಂ.ಡಾ.ಜೆರಾಲ್ಡ್ ಐಸಾಕ್ ಲೋಬೊ ತಮ್ಮ ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.

ಜರ್ಮನ್ ಮೂಲದ ಜೊಸೆಫ್ ರಾಟಿಝಿಂಗರ್ ಮಹಾಮುತ್ಸದ್ಧಿ, ದೇವಶಾಸ್ತ್ರಜ್ಞ ಮತ್ತು ಅಪ್ರತಿಮ ಆಡಳಿತಗಾರರಾಗಿದ್ದರು. ಪೋಪ್ ಆಗಿ ಚುನಾಯಿತರಾಗುವ ಮೊದಲೇ ಮಹಾಧರ್ಮಾಧ್ಯಕ್ಷರಾಗಿ, ಕಾರ್ಡಿನಲ್ ಆಗಿ ವ್ಯಾಟಿಕನ್ ಆಡಳಿತ ಮಾತ್ರವಲ್ಲ, ಕಥೋಲಿಕ ಧರ್ಮಸಭೆಯ ವಿಶ್ವಾಸ ಹಾಗೂ ಬೋಧನೆಯಲ್ಲಿ ತಮ್ಮನ್ನೇ ಆಳವಾಗಿ ತೊಡಗಿಸಿಕೊಂಡಿದ್ದರು. ಅವರು ಬರೆದ ಹತ್ತಾರು ಗ್ರಂಥಗಳು ಅವರ ಪಾಂಡಿತ್ಯಕ್ಕೆ ಸಾಕ್ಷಿಯಾಗಿ ಉಳಿದಿವೆ. ಮಹಾನ್ ಪೋಪ್ ಎರಡನೇ ಜಾನ್ ಪಾಲ್‌ರ ನಿಧನದ ಬಳಿಕ, 2005 ರಲ್ಲಿ ಪೋಪ್ ಆಗಿ ಸರ್ವಾನುಮತದಿಂದ ಚುನಾಯಿತರಾಗಿ ‘ಹದಿನಾರನೇ ಬೆನೆಡಿಕ್ಟ್’ ಎಂಬ ಹೆಸರನ್ನು ಪಡೆದು, ಎಂಟು ವರ್ಷಗಳ ಕಾಲ ಕಥೋಲಿಕ ಧರ್ಮಸಭೆಯ ನೂರಾರು ಕೋಟಿ ಕ್ರೈಸ್ತ ವಿಶ್ವಾಸಿಗಳ ಕಣ್ಮಣಿಯಾದರು. ಅನಾರೋಗ್ಯದ ನಿಮಿತ್ತ, 2013ರಲ್ಲಿ ಧರ್ಮಸಭೆಯ 600 ವರ್ಷಗಳ ಚರಿತ್ರೆಯಲ್ಲಿ ಮೊತ್ತ ಮೊದಲ ಬಾರಿಗೆ ಪೋಪ್ ಪದಕ್ಕೆ ರಾಜೀನಾಮೆಯಿತ್ತು ವಿಶ್ರಾಂತಿಯ ಜೀವನವನ್ನು ನಡೆಸಿದರು ಎಂದು ಬಿಷಪ್ ಸಂದೇಶದಲ್ಲಿ ಹೇಳಿದ್ದಾರೆ.

ಸರಳತೆ, ಸಜ್ಜನಿಕೆ, ಮಿತಭಾಷಿ ಹಾಗೂ ಆಳವಾದ ಪಾಂಡಿತ್ಯದ ಪೋಪ್ ಹದಿನಾರನೇ ಬೆನೆಡಿಕ್ಟ್ ವಿಶ್ವದಾದ್ಯಂತ ಕ್ರೈಸ್ತ ವಿಶ್ವಾಸವನ್ನು ಬಲಪಡಿಸಿದರು. ತಮ್ಮ ಎಂಟು ವರ್ಷಗಳ ಚುಟುಕು ಆಡಳಿತ ಅವಧಿಯಲ್ಲಿ ಭಾರತಕ್ಕೆ ಆಗಮಿಸಲು ಅವರಿಗೆ ಅವಕಾಶ ಸಿಗಲಿಲ್ಲವಾದರೂ, ಭಾರತ ದೇಶದ ಬಗ್ಗೆ ಉನ್ನತ ಅಭಿಮಾನ ಅವರಿಗಿತ್ತು. 2012ರಲ್ಲಿ ಉಡುಪಿ ಹೊಸ ಧರ್ಮಕ್ಷೇತ್ರ ವನ್ನು ಅವರೇ ಘೋಷಿಸಿದ್ದರು. ಉಡುಪಿ ಧರ್ಮಕ್ಷೇತ್ರದ ಬಗ್ಗೆ ಅವರಿಗೆ ಬಹಳ ಕಾಳಜಿ ಹಾಗೂ ಆಸಕ್ತಿಯಿತ್ತು ಎಂದರು. 

ನಿವೃತ್ತ ಪೋಪ್ ಜಗದ್ಗುರುಗಳು ಅಸ್ತಂಗತರಾದುದು ಇಡೀ ಕ್ರೈಸ್ತ ಸಮುದಾಯಕ್ಕೆ ಅತ್ಯಂತ ದುಃಖಕರ ವಿಷಯ. ಮೃತರಿಗಾಗಿ ಉಡುಪಿ ಧರ್ಮಕ್ಷೇತ್ರದ ಎಲ್ಲಾ ದೇವಾಲಯಗಳು ಹಾಗೂ ಧಾರ್ಮಿಕ ನಿವಾಸಗಳಲ್ಲಿ ಡಿ.31 ಹಾಗೂ ಜನವರಿ 1ರಂದು ವಿಶೇಷ ಪ್ರಾರ್ಥನೆಗಳನ್ನು ನಡೆಸಲಾಗುವುದು. ದೈವಾಧೀನರಾದ ಪೋಪ್ ಹದಿನಾರನೇ ಬೆನಡಿಕ್ಟ್ ರವರನ್ನು ದಯಾಮಯ ಭಗವಂತನು ತಮ್ಮ ದಿವ್ಯ ಸನ್ನಿಧಿಗೆ ಬರಮಾಡಿಕೊಳ್ಳಲಿ ಎಂದು ನಮ್ಮೆಲ್ಲರ ಪ್ರಾರ್ಥನೆ ಎಂದು ಅ.ವಂ. ಡಾ.ಲೋಬೊ ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.

Similar News