ಆದರ್ಶವಾದಿಗಳು

Update: 2023-01-01 05:14 GMT

ಅನೇಕ ಜನ ಶಿಕ್ಷಕರು ತಮ್ಮ ತರಗತಿ ಹೀಗಿರಬೇಕೆಂದು ಬಯಸುತ್ತಾರೆ. ಮಕ್ಕಳು ಗಲಾಟೆ ಮಾಡದೆ ಕುಳಿತುಕೊಳ್ಳಬೇಕು. ಕ್ಲಾಸಲ್ಲಿ ಪಿನ್ ಡ್ರಾಪ್ ಸೈಲೆನ್ಸ್ ಇರಬೇಕು. ಶಿಕ್ಷಕರು ಹೇಳುವುದನ್ನೆಲ್ಲಾ ಕೇಳಿಕೊಳ್ಳಬೇಕು. ಎಲ್ಲರೂ ಚೆನ್ನಾಗಿ ಕಲಿತುಕೊಳ್ಳಬೇಕು. ಎಲ್ಲರೂ ನೂರಕ್ಕೆ ನೂರು ಅಂಕಗಳನ್ನು ತೆಗೆಯುವಷ್ಟು ಜಾಣರಾಗಿರಬೇಕು. ಹಾಡು, ಕುಣಿತ, ನಾಟಕ, ಓದು; ಹೀಗೆ ಎಲ್ಲದರಲ್ಲೂ ಮುಂದಿರಬೇಕು. ಎಲ್ಲರ ಹ್ಯಾಂಡ್ ರೈಟಿಂಗ್ ಚೆನ್ನಾಗಿರಬೇಕು. ಎಲ್ಲರೂ ಗುರು ಹಿರಿಯರಲ್ಲಿ ಭಯ ಭಕ್ತಿ ಇಟ್ಟುಕೊಂಡಿರಬೇಕು. ಹುಡುಗರೆಲ್ಲಾ ಹುಡುಗಿಯರನ್ನು ಸೋದರಿಯರಂತೆಯೂ, ಹುಡುಗಿಯರೆಲ್ಲಾ ಹುಡುಗರನ್ನು ಸೋದರರಂತೆಯೂ ಕಾಣಬೇಕು. ತಲೆ ಹರಟೆ ಎಂದಿಗೂ ಮಾಡಬಾರದು ಇತ್ಯಾದಿ. ಆದರೆ ಅಂತಹ ತರಗತಿಯನ್ನೆಂದೂ ಅವರು ನೋಡಿರುವುದೇ ಇಲ್ಲ. ಜೊತೆಗೆ ಅವರೂ ತಮ್ಮ ಶಾಲಾ ದಿನಗಳಲ್ಲಿ ಅಂತಹ ತರಗತಿಯಲ್ಲೇನೂ ಓದಿಕೊಂಡು ಬಂದಿರುವುದಿಲ್ಲ. ಆದರೂ ಅಂತಹದ್ದೊಂದು ಆದರ್ಶಮಯ ಅಥವಾ ಮಾದರಿ ತರಗತಿಯನ್ನು ಅವರು ಬಯಸುತ್ತಿರುತ್ತಾರೆ.

ನಿಜ ಹೇಳುವುದಾದರೆ ಅವರು ಮಾದರಿ ಶಿಕ್ಷಕರೇ ಅಲ್ಲ. ತರಗತಿಯ ತುಂಬಾ ತುಂಟ ಮಕ್ಕಳು. ಹೇಳಿದ ಮಾತನ್ನೆಂದೂ ಕೇಳದವರು. ಏನೂ ಓದದವರು. ಕಲಿಕೆಯಲ್ಲಿ ಹಿಂದುಳಿದವರು. ಪಠ್ಯೇತರ ಚಟುವಟಿಕೆಗಳ ಪರಿಚಯವೇ ಇಲ್ಲದವರು. ಶಿಕ್ಷಕರನ್ನೇ ಗೋಳಾಡಿಸಲು, ಛೇಡಿಸಲು ಪಣ ತೊಟ್ಟು ನಿಂತವರು; ಹೀಗೆ ಎಲ್ಲಾ ಹಡಾವಿಡಿಗಳ ಗೂಡಾಗಿರುವ ತರಗತಿಯನ್ನು ತಹಬಂದಿಗೆ ತಂದು ತಮ್ಮ ಕೌಶಲ್ಯ, ಜ್ಞಾನ, ಸಹನೆ ಮತ್ತು ಕರುಣೆಯಿಂದ ಮಕ್ಕಳಿಗೆ ಅಗತ್ಯವಿರುವ ಶಿಕ್ಷಣ ಮತ್ತು ವ್ಯಕ್ತಿತ್ವ ವಿಕಾಸವನ್ನು ಒದಗಿಸುವುದರಲ್ಲಿ ಜವಾಬ್ದಾರಿ ನಿರ್ವಹಿಸುವುದರ ಮೂಲಕ ಗೆಲುವು ಸಾಧಿಸಿದರೆ, ನೋಡಪ್ಪಾ, ಅವರು ಮಾದರಿ ಶಿಕ್ಷಕರು ಅಥವಾ ಆದರ್ಶಪ್ರಾಯ ಶಿಕ್ಷಕರಾಗುತ್ತಾರೆ. ಒಂದು ಆದರ್ಶವಾದಿಯಾಗಿರುವ ಪಲಾಯನವಾದಿಗಳಿಗೆ ಹಲವಾರು ಅನುಕೂಲಗಳಿವೆ. ಮೊದಲನೆಯದಾಗಿ ಅವರ ಆದರ್ಶಮಯವಾದ ತರಗತಿ, ದೇಶ, ಸಮಾಜ, ಕುಟುಂಬ ಒಂದು ಕಾಲ್ಪನಿಕವಾಗಿದ್ದು, ಅದರಲ್ಲಿ ಎಲ್ಲವೂ ಸುಮಧುರವಾಗಿ, ಸುಲಲಿತವಾಗಿ, ಸುಂದರವಾಗಿ, ಸುವ್ಯವಸ್ಥೆಯಿಂದ ಕೂಡಿರುತ್ತದೆ. ಎಲ್ಲರೂ ನಿರೀಕ್ಷಿತ ರೀತಿಯಲ್ಲಿಯೇ ಕ್ರಿಯೆಗಳನ್ನು ನಡೆಸುತ್ತಾರೆ, ಪ್ರತಿಕ್ರಿಯೆಗಳನ್ನು ನೀಡುತ್ತಾರೆ.

ಸಿದ್ಧ ಮಾದರಿಯ ವರ್ತನೆಗಳನ್ನೇ ತೋರುತ್ತಾರೆ. ಹಾಗೆ ತಮ್ಮ ತರಗತಿ, ದೇಶ, ಸಮಾಜ, ಸಮುದಾಯ ಇಲ್ಲದ ಕಾರಣ ತಾವೇನೂ ಮಾಡಲಾಗುತ್ತಿಲ್ಲ ಎಂದು ಈ ಆದರ್ಶವಾದಿಗಳು ಅಸಹಾಯಕತೆ ತೋರುತ್ತಾರೆ. ಹಾಗೆಯೇ ಆದರ್ಶವಾದಿಯ ಸುಂದರ ಮಾತುಗಳು ಸುಂದರ ಚಿತ್ರಣಗಳನ್ನು ಕಟ್ಟಿಕೊಡುವುದರಿಂದ ಅವರೂ ಅದನ್ನು ಒಪ್ಪುತ್ತಾರೆ. ಇವರನ್ನು ದೂರುವುದಿಲ್ಲ. ಸಾಕ್ಷಾತ್ ಭಗವಂತನ ಸ್ವರೂಪವಾದ ನಮ್ಮ ಪ್ರಧಾನ ಮಂತ್ರಿಗಳೊಬ್ಬರು ಏನು ಮಾಡಲು ಸಾಧ್ಯವಾಗುತ್ತದೆ? ಅವರ ಕನಸಿನಂತೆ ಈ ದೇಶವನ್ನು ರೂಪಿಸಲು ಇತರ ಎಡಪಂಥೀಯರು, ಪ್ರತಿಪಕ್ಷದವರು, ಇತರ ಸಿದ್ಧಾಂತವಾದಿಗಳು ಬಿಡರು. ವೈವಿಧ್ಯತೆ, ಭಿನ್ನ ಮನಸ್ಥಿತಿಗಳು, ತರಹೇವಾರಿ ಚಟುವಟಿಕೆಗಳು; ಇವನ್ನೆಲ್ಲಾ ನಿಭಾಯಿಸಲು ಅಥವಾ ನಿರ್ವಹಿಸಲು ಸಾಧ್ಯವಾಗದೆ ಹೋದಾಗ ಆದರ್ಶವಾದವನ್ನೇ ಗಟ್ಟಿಯಾಗಿ ಪುನರುಚ್ಛರಿಸುತ್ತಾ ಹೋಗುವುದು. ಅದು ಕಾಲ್ಪನಿಕವೂ, ಭ್ರಾಮಕವೂ, ಸುಂದರ ಪ್ರತಿಮೆಯೂ ಆಗಿರುವುದರಿಂದ ಇತರರಿಗೆ ಅದು ಆಪ್ಯಾಯಮಾನವಾಗಿಯೇ ಕಾಣುವುದು. ಅದನ್ನು ಸಾಕಾರಗೊಳಿಸಲು ಸಾಧ್ಯವಾಗದ ಪರಿಸರವನ್ನು ದೂರುವುದರಲ್ಲಿ ಅವರೂ ನಿರತರಾಗುವರು. ಇದರಿಂದಾಗಿ ವಾಸ್ತವವನ್ನು ದೂಷಿಸುತ್ತಾ ಆದರ್ಶವನ್ನು ಭ್ರಮಿಸುತ್ತಾ ತಾವು ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗುವುದು.

ವಾದಿಗಳ ಕೆಲಸವೆಂದರೇನೇ ವಾದ ಮಾಡುವುದು. ತಾವು ಯಾವುದನ್ನು ಪ್ರತಿನಿಧಿಸುತ್ತಾರೋ ಅದು ವಾಸ್ತವವೋ, ಅವಾಸ್ತವವೋ, ಅಗತ್ಯವೋ, ಅನಗತ್ಯವೋ; ಒಟ್ಟಾರೆ ಅದರೊಂದಿಗೆ ತಮ್ಮ ಹೆಸರು ತಳಕು ಹಾಕಿಕೊಂಡಿರುವ ಕಾರಣ ಅದರ ಬಗ್ಗೆ ಶತಾಯಗತಾಯ ವಾದ ಮಾಡುವುದು. ಆದರ್ಶವಾದಿಗಳದ್ದೂ ಇದೇ ಕತೆ. ತಾವು ಕಟ್ಟಿಕೊಂಡಿರುವ ಅಥವಾ ಗುರುತಿಸಿಕೊಂಡಿರುವ ಆದರ್ಶವನ್ನು ಮುಂದಿಟ್ಟುಕೊಂಡು ಅದಕ್ಕಾಗಿಯೇ ಹೆಣಗುತ್ತಾ ಹೈರಾಣಾಗಿ ತಮ್ಮ ಸಮಯ, ಸಂಪನ್ಮೂಲ, ಶ್ರಮವನ್ನು ವ್ಯಯ ಮಾಡಿ ಬದುಕನ್ನೇ ಮುಗಿಸಿಬಿಡುವುದು. ಅವರು ಸತ್ತು ಮಣ್ಣಾಗಿ ಹೋಗುವರು. ಅವರು ಕನಸಿದ ಆದರ್ಶದ ತರಗತಿ, ಕುಟುಂಬ, ವ್ಯಕ್ತಿ, ದೇಶ, ಸಮಾಜವನ್ನು ಅವರು ಕಾಣುವುದೇ ಇಲ್ಲ. ಆದರೆ ಅವರು ಮಾಡುವ ದೊಡ್ಡ ವ್ಯಕ್ತಿ ದ್ರೋಹ ಮತ್ತು ಸಾಮಾಜಿಕ ದ್ರೋಹವೆಂದರೆ ಈ ಆದರ್ಶದ ಗೀಳನ್ನು ತಮ್ಮ ಮುಂದಿನ ಪೀಳಿಗೆಗೆ ಸೋಂಕಿಸುವುದು. ಅವರೂ ಅದನ್ನೇ ಕನಸುತ್ತಾ, ಕನವರಿಸುತ್ತಾ ಹಾಗೇ ಮಣ್ಣಾಗುವುದು. ಅದು ಆಗಬೇಕಾಗಿರುವ ರಾಮರಾಜ್ಯವೋ, ಬರಲಿರುವ ಸ್ವರ್ಣಯುಗವೋ, ಅಚ್ಚುಕಟ್ಟಾದ ತರಗತಿಯೋ, ಕುಟುಂಬವೋ ಏನಾದರೂ ಆಗಬಹುದು. ಇವರು ಸದಾ ದುಃಖಿಗಳು.

ಈಗಿರುವ ತರಗತಿ ಸರಿ ಇಲ್ಲ, ಈಗಿರುವ ಕುಟುಂಬ ಹೀಗಿರಕೂಡದು, ಈಗಿರುವ ಸಮಾಜವು ಯೋಗ್ಯವಲ್ಲ, ಈಗಿರುವ ಜನರೇ ಅಯೋಗ್ಯರು, ವಾತಾವರಣ, ಪರಿಸರ, ದೇಶ, ಸಮಾಜ; ಯಾವುದೂ ಸರಿಯಿಲ್ಲ! ಒಂದೋ ಹಿಂದೆ ಹಾಗಿತ್ತು, ಈಗ ಹಾಗಾಗಲಿ ಎಂದು ತಾವೆಂದೂ ಜೀವಿಸದ ಅವಧಿಯ ಸಮಾಜದ ವರ್ಣನೆಗಳನ್ನು ಕನವರಿಸುತ್ತಿರುತ್ತಾರೆ ಅಥವಾ ಮುಂದೊಂದು ದಿನ ಅಂತಹದ್ದೊಂದು ಸಮಾಜ ನಿರ್ಮಾಣವಾಗಲಿ ಅಥವಾ ಸುವರ್ಣಯುಗ ಪ್ರಾರಂಭವಾಗಲಿ ಎಂದು ಕನಸುತ್ತಿರುತ್ತಾರೆ. ಅಸತೋಮ ಸದ್ಗಮಯ, ತಮಸೋಮ ಜ್ಯೋತಿರ್ಗಮಯ ಎನ್ನುವ ಅವರಿಗೆ ತಾವಿರುವ ಸಮಯ ಮತ್ತು ಸ್ಥಿತಿ ಎಂದಿಗೂ ತಮಸ್ಸೇ. ಹಾಗಾಗಿ ಕರುಣಾಳು ಬಾ ಬೆಳಕೆ ಮುಸುಕಿದೀ ಮಬ್ಬಿನಲಿ ಕೈ ಹಿಡಿದು ನಡೆಸೆನ್ನನು ಎಂಬ ಉಟೋಪಿಯನ್ ಪ್ರಾರ್ಥನೆ ಮಾಡುತ್ತಿರುತ್ತಾರೆ. ನಾಳೆಯ ದಿನ ರಕ್ಷಕನೊಬ್ಬ ಅವತರಿಸುತ್ತಾನೆ. ಈ ಕಲಿಯುಗದಲ್ಲಿ ಅಧರ್ಮ ತಾಂಡವವಾಡುತ್ತಿರುವಾಗ ಭಗವಂತ ಅವತಾರ ತಾಳುತ್ತಾನೆ; ಹೀಗೇ ಆದರ್ಶವಾದಿಗಳ ಕನವರಿಕೆಗಳು ಹತ್ತು ಹಲವು ರೂಪಗಳನ್ನು ಪಡೆದುಕೊಳ್ಳುತ್ತಾ ಹೋಗುತ್ತದೆ.

Similar News

ಮಧುರ ವಿಷ
ಮನೋಭವನ
ಕಿವಿಗೊಡೋಣ
ಜಡತೆಯ ರೋಗ