ಪೂರ್ವಿಕರ ಜೀವಂತ ಪ್ರವೃತ್ತಿಗಳು
ಬಹಳಷ್ಟು ಜನ ಗಂಡಸರು ಹೇಳುತ್ತಿರುತ್ತಾರೆ, ‘‘ನನ್ನ ಹೆಂಡತಿ ತುಂಬಾ ಪ್ರಶ್ನೆಗಳನ್ನು ಕೇಳ್ತಾಳೆ. ನಾನು ಹೊರಗಡೆ ಹೋದಾಗ ಪದೇ ಪದೇ ಪೋನ್ ಮಾಡಿ, ಎಲ್ಲಿದ್ದೀರಾ? ಏನು ಮಾಡ್ತಿದ್ದೀರಾ? ಎಷ್ಟು ಹೊತ್ತಿಗೆ ಬರ್ತೀರಾ? ಯಾರ್ಯಾರು ಜೊತೆಗಿದ್ದೀರಾ?’’ ಅಂತ. ಅಷ್ಟೇ ಅಲ್ಲ, ಫೋನಿಗೆ ಉತ್ತರಿಸಲಿಲ್ಲ ಅಂದರೆ ಅಥವಾ ತಾವು ಅವರಿಗೆ ಪೋನ್ ಮಾಡಲಿಲ್ಲ ಎಂದರೆ ಕೋಪಿಸಿಕೊಳ್ಳುತ್ತಾರೆ ಎಂದು ಹೊರಗಡೆ ಹೋಗಿದ್ದಾಗ ವಿಷಯವೇನೂ ಇರದ್ದರೂ ಹೆಂಡತಿಗೆ ಫೋನ್ ಮಾಡಿ, ‘‘ಅಬ್ಬಾ, ನನ್ನ ಕರ್ತವ್ಯ ಮುಗೀತು’’ ಎನ್ನುವವರಿದ್ದಾರೆ. ಕೆಲವೊಮ್ಮೆ ಹೆಂಡತಿಯರು ಪೋಲಿಸರ ವಿಚಾರಣೆ, ತನಿಖೆ, ವಕೀಲರ ವಾದ ಎಲ್ಲಾ ಮಾಡಿ, ನ್ಯಾಯಮೂರ್ತಿಯಾಗಿ ತೀರ್ಮಾನ ಕೂಡಾ ಕೊಡುವರು.
ಯಾಕೆ ಇವರು ಹೀಗೆ ಎಂದು ಅವರವರ ಹೆಂಡತಿಯರ ಬಗ್ಗೆ ಯೋಚಿಸುವುದಕ್ಕಿಂತ ನಾವು ಶಿಲಾಯುಗದ ಸಮಯಕ್ಕೆ ಹೋಗಬೇಕಾಗುವುದು.
ಆಗ, ವ್ಯವಸಾಯವನ್ನೂ ಆರಂಭಿಸುವ ಮುನ್ನ ಬೇಟೆ ಮತ್ತು ತಿನ್ನಲಾಗುವ ಕಂದಮೂಲ, ಹಣ್ಣು ಹಂಪಲುಗಳನ್ನು ಆಯುವುದೇ ಆಹಾರದ ಮೂಲ. ಗಂಡಸರು ಬೇಟೆಗೆಂದು ಹೋಗುತ್ತಿದ್ದರು. ಬೇಟೆಯನ್ನು ಬೆನ್ನಟ್ಟಿ ಅರಣ್ಯದ ವಿವಿಧ ಭಾಗಗಳಿಗೆ, ಪರ್ವತಗಳಿಗೆ, ನದಿ ಕೆರೆಗಳ ಕಡೆಗೆ ಹೋಗುತ್ತಿದ್ದರು. ಹೆಂಗಸರೂ ಬೇಟೆಯಾಡುತ್ತಿದ್ದರು. ಆದರೆ ಅವರು ಅದನ್ನೊಂದೇ ಮಾಡಿಕೊಂಡು ಇರಲಾಗುತ್ತಿರಲಿಲ್ಲ. ಮಕ್ಕಳು ಮರಿಗಳಾದಾಗ ತಾವಿರುವ ಆಶ್ರಯ ತಾಣಗಳಲ್ಲೇ ನೆಲೆಸಬೇಕಾಗಿತ್ತು. ಸಾಲದ್ದಕ್ಕೆ ಕೃಷಿಯನ್ನೂ ಕೂಡಾ ಅವರೇ ಅನ್ವೇಷಿಸಿದ್ದು. ಆ ವ್ಯವಸಾಯವೂ ಕೂಡಾ ಅವರದ್ದೇ ಕೆಲಸ. ಧಾನ್ಯ ಸಂಗ್ರಹ ಮತ್ತದರ ರಕ್ಷಣೆಯೂ ಅವ ರದ್ದೇ ಹೊಣೆ. ಹೀಗೆ ಒಟ್ಟಾರೆ ಕುಟುಂಬ ಮತ್ತು ಸಮುದಾಯವನ್ನು ಕಾಪಾಡುವುದು ನಿಧಾನವಾಗಿ ಅವರ ಹೆಗಲಿಗೇರತೊಡಗಿತು.
ಇಂದಿಗೂ ಹೆಂಗಸರು ಬಹುಕಾರ್ಯ ನಿಭಾಯಿಸುವರು, ಗಂಡಸರು ಒಂದು ಕೆಲಸದ ಬಳಿಕ ವಿಶ್ರಾಂತಿ ಹುಡುಕುವರು.
ಹೆಂಗಸರು ಆಶ್ರಯ ತಾಣದ ಬಳಿ ಇರುವ ಸಂಗ್ರಾಹಕರು ಮತ್ತು ಕಾಪಾಡುವವರು. ಅವರು ಒಂದೇ ಸಮಯದಲ್ಲಿ ಬೆಂಕಿ ನೋಡಿಕೊಳ್ಳಬೇಕು, ಮಕ್ಕಳನ್ನು ನೋಡಬೇಕು, ಆಹಾರವನ್ನು ಕಲೆ ಹಾಕಬೇಕು, ಹಾವುಗಳು ಅಥವಾ ಪ್ರಾಣಿಗಳಿಂದ ಕಾಪಾಡಬೇಕು. ಒಟ್ಟಿಗೇ ಎಲ್ಲವನ್ನೂ ನೋಡಬೇಕು! ಹೀಗೆ ಸಾವಿರಾರು ವರ್ಷಗಳ ಕಾಲ ಅವರ ಮೆದುಳುಗಳು ತಮ್ಮ ತಮ್ಮ ಕೆಲಸಕ್ಕೆ ತಕ್ಕಂತೆ ರೂಪುಗೊಂಡವು.
ಒಲೆಯ ಮೇಲೆ ಇಟ್ಟಿರುವ ಕುಕ್ಕರ್ ಎಷ್ಟು ಸೀಟಿ ಹೊಡೆಯಿತು, ಇನ್ನೊಂದು ಒಲೆಯ ಮೇಲೆ ಇಟ್ಟಿರುವ ಹಾಲು ಉಕ್ಕೀತೇ? ನೆಲವನ್ನು ಮಾಪ್ ಮಾಡುತ್ತಾ, ಫೋನಿನಲ್ಲಿ ಮಾತಾಡುತ್ತಾ, ತನ್ನ ಗಂಡ ಬೇರೆಯವರೊಂದಿಗೆ ಫೋನಿನಲ್ಲಿ ಮಾತಾಡುವುದನ್ನೂ ಕೇಳಿಸಿಕೊಳ್ಳುತ್ತಾ, ಮಕ್ಕಳು ಏನು ಮಾಡುತ್ತಿದ್ದಾರೆ ಎಂದೂ ನೋಡುತ್ತಾ ಇರುವ ಸಾಮರ್ಥ್ಯದ ಸಿದ್ಧಿ ಹೆಂಗಸಿಗೆ.
ಗಂಡಸರ ಮೆದುಳು ಒಂದೇ ಗುರಿಗೆ ಗಮನ. ಹೆಂಗಸರ ಮೆದುಳು ಅನೇಕ ದಿಕ್ಕುಗಳಲ್ಲಿ ಜಾಗೃತ ಮತ್ತು ಸಂವೇದನಾಶೀಲ. ಒಬ್ಬರು ಆಳವಾಗಿ ನೋಡುವರು, ಇನ್ನೊಬ್ಬರು ವ್ಯಾಪಕವಾಗಿ ನೋಡುವರು. ಇವೆರಡೂ ಬದುಕಿಗೆ ಅಗತ್ಯವಾದ ಬುದ್ಧಿಯ ರೂಪಗಳು.
ಆಧುನಿಕ ನರಶಾಸ್ತ್ರವೂ ಈ ವಿಚಾರವನ್ನು ದೃಢಪಡಿಸುತ್ತದೆ: ಕೋರ್ಪಸ್ ಕಾಲೊಸಮ್ (Corpus Callosum) - ಮೆದುಳಿನ ಎಡ ಮತ್ತು ಬಲ ಭಾಗಗಳನ್ನು ಸಂಪರ್ಕಿಸುವ ಸೇತುವೆ ಹೆಂಗಸರಲ್ಲಿ ಹೆಚ್ಚು ಬಲಿಷ್ಠವಾಗಿರುವುದರಿಂದ, ಅವರು ಒಂದೇ ವೇಳೆ ಅನೇಕ ಕ್ರಿಯೆಗಳನ್ನು ನಿರ್ವಹಿಸಬಲ್ಲರು. ಹಾಗೆಯೇ ಪ್ರಿಫ್ರಂಟಲ್ ಕಾರ್ಟೆಕ್ಸ್; ಹೆಂಗಸರಲ್ಲಿ ಹಲವಾರು ಭಾಗಗಳು ಒಂದೇ ವೇಳೆ ಸಕ್ರಿಯವಾಗುತ್ತವೆ. ಆದರೆ ಗಂಡಸರಲ್ಲಿ ಒಂದೇ ಭಾಗ ಹೆಚ್ಚು ಚುರುಕಾಗಿರುತ್ತದೆ. ಹಾಗೆಯೇ ಈಸ್ಟ್ರೋಜನ್ (Estrogen) ಹಾರ್ಮೋನು ಹೆಂಗಸರ ಮೆದುಳಿನ ಸಂವೇದನೆ ಮತ್ತು ಸಂವಹನವನ್ನು ಬಲಪಡಿಸುತ್ತದೆ, ಅದರಂತೆ ಟೆಸ್ಟೋಸ್ಟೆರೋನ್ (Testosterone) ಗಂಡಸರ ಒಂದು ಕಡೆಯ ಗಮನವನ್ನು ಉತ್ತೇಜಿಸುತ್ತದೆ. ಹೀಗೆ ಪ್ರಕೃತಿಯೇ ಇಬ್ಬರಿಗೂ ವಿಭಿನ್ನ ತಂತ್ರ ನೀಡಿದೆ.
ಶಿಲಾಯುಗಕ್ಕೆ ಮರಳೋಣ. ತಮ್ಮ ಬೇಟೆಗಾರ ಸಂಗಾತಿಗಳು ಹಿಂದಿರುಗಿ ಬಂದಾಗ ಆಶ್ರಯ ತಾಣದಲ್ಲಿದ್ದ ಮಹಿಳೆಯರು ಸಹಜವಾಗಿ ಕೇಳುತ್ತಿದ್ದರು.
‘‘ಎಲ್ಲಿ ಹೋದೆ? ಏನು ಕಂಡೆ? ಅಲ್ಲಿ ಏನಾದರೂ ಅಪಾಯ ಇದ್ದೀತಾ? ಏನಾದರೂ ತಂದೆಯಾ?’’
ಇವು ಕೇವಲ ಕುತೂಹಲದ ಪ್ರಶ್ನೆಗಳಲ್ಲ. ಇವು ಬದುಕಿನ ರಕ್ಷಣೆಗೆ ಸಂಬಂಧಿಸಿದ ಪ್ರಶ್ನೆಗಳು. ಆ ವಿಚಾರಣೆಯ ಮೂಲಕವೇ ಅವರು ತಾವು ಹೋಗಿ ಕಾಣದ ಹೊರಗಿನ ಲೋಕದ ಚಿತ್ರವನ್ನು ಕಟ್ಟಿಕೊಳ್ಳುತ್ತಿದ್ದರು.
ಆದರೆ ಗಂಡಸರು ಹೆಚ್ಚು ಮಾತಾಡುತ್ತಿರಲಿಲ್ಲ. ಮಾತಾಡುವ ಹಾಗೂ ಇರಲಿಲ್ಲ. ಬೇಟೆಯಾಡುವುದು ಎಂದರೆ ಅಬ್ಬರಿಸಿಕೊಂಡು ಬೇಟೆಯ ಪ್ರಾಣಿಯನ್ನು ಅಟ್ಟಿಸಿಕೊಂಡು ಹೋಗುವುದಲ್ಲ. ಎಷ್ಟೋ ಸಲ ಬೇಟೆ ಹಿಡಿಯಲು ಗಂಟೆಗಳ ಕಾಲ ನಿಶ್ಚಲವಾಗಿ, ಮೌನವಾಗಿ ಕಾದು ಕುಳಿತಿರಬೇಕಾಗಿತ್ತು. ಒಂದು ಕ್ಷಣ ಗಮನ ಚಂಚಲವಾದರೂ ಹಸಿವೇ ಗತಿಯಾಗುತ್ತಿತ್ತು. ಕೆಲವೊಮ್ಮೆ ತಾವು ಅಪಾಯಕ್ಕೆ ಒಳಗಾಗಬೇಕಿತ್ತು. ಅರಣ್ಯದಲ್ಲಿ, ಅದರಲ್ಲೂ ಪ್ರಾಣಿಗಳಿಂದ ತಪ್ಪಿಸಿಕೊಂಡು, ಪ್ರಾಣಿಗಳಿಗಾಗಿಯೇ ಬೇಟೆ ಯಾಡಲು ಹೊಂಚು ಹಾಕುವಾಗ ಮೌನ, ತಮ್ಮ ಜೊತೆಗಾರರಲ್ಲಿ ಕೇವಲ ಸನ್ನೆಗಳಷ್ಟೇ ಅತ್ಯವಶ್ಯಕ. ನಿರ್ಧಾರಗಳನ್ನು ಕೂಡಾ ತಟ್ಟನೆ ತೆಗೆದುಕೊಳ್ಳಬೇಕು.
ಹೆಂಗಸರು ವಾದ ಮಾಡಲು ಶುರು ಮಾಡಿದರೆ, ಗಂಡಸರು ತಟ್ಟನೆ ಕೈ ಮಾಡಿಬಿಟ್ಟಾರು. ಆದರೆ ಪ್ರತಿವಾದ ಮಾಡಲು ಬಲು ಕಷ್ಟ ಪಡುತ್ತಾರೆ. ಅವಳಿಗೆ ಬಾಯಿ ಮುಂದು, ಇವನಿಗೆ ಕೈ ಮುಂದು. ಆದರೆ ಇವನಿಗೆ ಕೈ ಮುಂದಾಗಲು ಆಗದೆ ಹೋದಾಗ ಅವಳ ಬಾಯಿಗೆ ಬಾಯಿ ಕೊಡಲಾಗದೇ ಪಲಾಯನ ಮಾಡುತ್ತಾನೆ. ಹೊರಗೆ ಓಡುತ್ತಾನೆ.
ಗಂಡಸರು ಸಮಸ್ಯೆ ಬಂದಾಗ ಸಾಮಾನ್ಯವಾಗಿ ತಮ್ಮಲ್ಲಿ ತಾವೇ ಹೆಚ್ಚು ಯೋಚಿಸುತ್ತಾರೆ. ಆದರೆ ಹೆಂಗಸರು ಅದನ್ನು ಇತರರಲ್ಲಿ ಚರ್ಚಿಸುತ್ತಾರೆ. ಅವಳಿಗೆ ಹೇಳದಿದ್ದರೆ ಆಗುವುದಿಲ್ಲ.
ನರವಿಜ್ಞಾನ ಹೇಳುವುದೇನೆಂದರೆ ಗಂಡಸರ ಮೆದುಳು ಒತ್ತಡದಲ್ಲಿದ್ದಾಗ ಸಮಸ್ಯೆ ಪರಿಹಾರ ಮತ್ತು ದಿಕ್ಕು ಗುರುತಿಸುವ ಭಾಗ ವನ್ನು ಹೆಚ್ಚು ಬಳಕೆಮಾಡಿದರೆ, ಹೆಂಗಸರ ಮೆದುಳು ಭಾವನೆ, ಭಾಷೆ ಮತ್ತು ನೆನಪಿನ ಭಾಗಗಳನ್ನು ಹೆಚ್ಚು ಸಕ್ರಿಯಗೊಳಿಸುತ್ತದೆ.
ಗಂಡಸು ಹೊರ ಪ್ರಪಂಚವನ್ನೇ ಹೆಚ್ಚು ರೂಢಿ ಮಾಡಿಕೊಂಡಿದ್ದ. ಗಂಡಸರು ದಾಳಿ ಮಾಡಲು, ಯುದ್ಧಕ್ಕೆ, ಭೂ ಭಾಗಗಳ ಅನ್ವೇಷಣೆಗಳಿಗೆ, ವ್ಯಾಪಾರಕ್ಕೆಂದು ವರ್ತಕರ ತಂಡದಲ್ಲಿ ಹೋಗುತ್ತಿದ್ದರು. ಹೆಂಗಸರು ಮನೆಯಲ್ಲಿಯೇ ಉಳಿದಿರುತ್ತಿದ್ದರು. ಇದರ ವೈಪರೀತ್ಯ ಎಲ್ಲಿಯವರೆಗೆ ಮುಟ್ಟಿತೆಂದರೆ ಹೆಂಡತಿಯರನ್ನು ಬಿಟ್ಟು ತಮ್ಮ ಕೆಲಸ, ಯುದ್ಧ ಅಥವಾ ಇನ್ನಾವುದೋ ಕಾರಣಗಳಿಗೆ ಗಂಡಂದಿರು ಹೋಗಿದ್ದು ಅವರು ಬದುಕಿದ್ದಾರೋ ಸತ್ತಿದ್ದಾರೋ ಎಂಬ ಮಾಹಿತಿಯೇ ಇರದಷ್ಟು. ಬ್ರಿಟಿಷ್ ರಾಜ್ ಸಮಯದಲ್ಲಿ ಮತ್ತು ಅನೇಕ ಇಂಗ್ಲಿಷ್ ಸಾಹಿತ್ಯದಲ್ಲಿ, ರೂಢಿಯಲ್ಲಿಯೂ ಕೂಡಾ ಅಂತಹ ಹೆಂಗಸರನ್ನು ಗ್ರಾಸ್ ವಿಡೋ ಎನ್ನುತ್ತಿದ್ದರು.
ಗಂಡಸರು ತಮ್ಮ ಬಗ್ಗೆ ಹೆಂಗಸರಲ್ಲಿ ಪ್ರಶ್ನೆಗಳನ್ನು ಉಳಿಸುವುದರಲ್ಲಿ ನಿಸ್ಸೀಮರು. ಸಾವಿರಾರು ವರ್ಷಗಳ ಅಭ್ಯಾಸ, ಇಂದೂ ನಮ್ಮ ಮಹಿಳೆಯರಲ್ಲಿ ಪೂರ್ವಜರ ಪ್ರವೃತ್ತಿಯು ತಲೆ ಎತ್ತುವುದು ಏನೂ ವಿಶೇಷ ಅಲ್ಲ.
ವಿಕಾಸಾತ್ಮಕ ಮನೋವಿಜ್ಞಾನವು ಕೂಡಾ ಈ ಅಂಶವನ್ನು ಎತ್ತಿ ಹಿಡಿಯುತ್ತದೆ. ಹೆಂಗಸರಲ್ಲಿ ಸಾಮಾಜಿಕ ಬಾಂಧವ್ಯ ಮತ್ತು ವಾಕ್ಚಾತುರ್ಯ ಅಭಿವೃದ್ಧಿಹೊಂದಿತು. ಅವರ ಬದುಕು ಪರಸ್ಪರ ಸಂಬಂಧಗಳ ಮೇಲೆ ನಿಂತಿತ್ತು. ಸಂಬಂಧಗಳ ಸೂಕ್ಷ್ಮತೆಯೂ ಕೂಡಾ ಹೆಚ್ಚು ಗಾಢ ಹೆಂಗಸರಲ್ಲಿ.
ಗಂಡಸರು ಕಾರ್ಯ ಕೇಂದ್ರಿತ ಸಂವಹನವನ್ನು ಬೆಳೆಸಿಕೊಂಡರು. ಗುರಿ, ದಿಕ್ಕು, ಮತ್ತು ಚಟುವಟಿಕೆಗಳತ್ತ ಹೆಚ್ಚು ಹೆಚ್ಚು ಕೇಂದ್ರೀಕರಿಸಿಕೊಂಡರು.
ಒಂದೆಡೆ, ಹೆಂಗಸರು ಸಂಬಂಧಗಳನ್ನು ಮಾತಿನ ಮೂಲಕ ಕಟ್ಟಿದರು. ಮತ್ತೊಂದೆಡೆ, ಗಂಡಸರು ಜಗತ್ತನ್ನು ಕ್ರಿಯೆಯ ಮೂಲಕ ಅಳೆದರು.
ಎಷ್ಟೇ ಮುಂದುವರಿದರೂ ಪೂರ್ವಜರ ಪ್ರವೃತ್ತಿ ಇಂದೂ ಅದೇ ಕಥೆ ಬಹಳಷ್ಟು ಪುನರಾವರ್ತನೆಯಾಗು ತ್ತದೆ. ಗಂಡ ಕೆಲಸ ಮುಗಿಸಿಕೊಂಡು ಮನೆಗೆ ಬಂದಾಗ, ಹೆಂಡತಿ ಕೇಳುತ್ತಾಳೆ ‘‘ಎಲ್ಲಿಗೆ ಹೋಗಿದ್ದೆ? ಯಾರ ಜೊತೆಗೆ? ಯಾಕೆ ಫೋನ್ ತೆಗೆದಿಲ್ಲ?’’ ಇತ್ಯಾದಿ.
ಗಂಡಸಿಗೆ ಅದು ತನಿಖೆಯಂತೆ ತೋರಿದರೆ, ಹೆಂಗಸಿಗೆ ಅದು ಸಂಬಂಧದ ದೃಢೀಕರಣ. ‘ನಿನ್ನ ಜಗತ್ತು ನನ್ನೊಳಗೂ ಇರಲಿ’ ಎಂಬುದು ಅವಳ ಬದುಕಿನ ಕಾಳಜಿ.
ಇಂದಿಗೂ ಬಹುಪಾಲು ಗಂಡಸರು ಹೊರಗಿನಿಂದ ಬಂದಕೂಡಲೇ ಗುಹೆಯೊಳಗೆ ಹೋಗಿಬಿಡುತ್ತಾರೆ. ಹೆಂಗಸರು ಗುಹೆಯ ಒಳಗೆ ಮತ್ತು ಹೊರಗೆ ದೀಪ ಹಚ್ಚುತ್ತಾರೆ. ಈಗ ನಾವು ಪರಸ್ಪರರ ಲೋಕಗಳಿಗೆ ಭೇಟಿ ಕೊಡುವಂತಹ ಕಾಲಘಟ್ಟದಲ್ಲಿ ಇದ್ದೇವೆ.