ಹೆಸರಿನಿಂದ ಉಸಿರಿಗೆ
ವ್ಯಕ್ತಿಯು ಅನಿರ್ಬಂಧಿತವಾಗಿ ಮುಕುತ ಮನವನ್ನು ಹೊಂದುವುದೆಂದರೆ ತನಗಿರುವ ಗುರುತನ್ನು ಮೀರಿ ಅನಂತತೆಯನ್ನು ತಲುಪುವುದು. ತಾತ್ವಿಕವಾಗಿ ಹೇಳುವುದಾದರೆ ಹೆಸರು ಎಂಬುವುದರಿಂದ ಉಸಿರು ಎಂಬ ಜೀವದೊಂದಿಗೆ ಬೆಸೆದುಕೊಳ್ಳುವುದು. ಗಡಿಗಳು, ಹೆಸರುಗಳು, ವ್ಯವಸ್ಥೆಗಳೆಲ್ಲಾ ನಿರ್ಮಿಸಿಕೊಂಡಿರುವ ಉಪಯುಕ್ತ ರಚನೆಗಳೇನೋ ನಿಜ. ಆದರೆ ಅವು ತಾತ್ಕಾಲಿಕ. ಅಸೀಮ ಎನ್ನುವುದೇ ಅಸ್ತಿತ್ವದಲ್ಲಿ ನಿಜವಾಗಿರುವುದು.
ಜಾಗೃತಗೊಂಡಿರುವ ಮನಸ್ಸು ತಾನು ನಮ್ಮಲ್ಲಿ ಭೆೇದಗಳನ್ನು ತರುವ ಅದು ಇದು ಎಂಬ ಭ್ರಮೆಗಳ ಗುರುತುಗಳನ್ನು ಮೀರಿ ಒಂದು ಸರಳ ಸತ್ಯವನ್ನು ಅರಿತುಕೊಳ್ಳುತ್ತದೆ. ಅದೇನೆಂದರೆ ಅಸ್ತಿತ್ವಕ್ಕೆ ಗಡಿಗಳಿಲ್ಲ. ಅದೇನಿದ್ದರೂ ಆಲೋಚನೆಗಳಿಗೆ ಮಾತ್ರ ಎಂದು.
ಮನಸ್ಸಿನ ಅಸೀಮತೆಯ ಅರಿವು ಒಮ್ಮೆ ದೊರಕಿದ ಮೇಲೆ ವ್ಯಕ್ತಿಯು ತಾನು ವಿಶ್ವಾಸಿಸುವುದಕ್ಕಿಂತ ಅಥವಾ ನಂಬುವುದಕ್ಕಿಂತ ಇರುವಿಕೆಯ ಕಡೆಗೆ ಚಲಿಸುತ್ತಾನೆ. ಹಾಗೆ ಹೀಗೆ ಎಂದು ಅಸ್ತಿತ್ವವನ್ನು ವಿವರಿಸುವ ಬದಲು ಅನುಭವಿಸಲು ಆರಂಭಿಸುತ್ತಾನೆ. ಏಕೆಂದರೆ ನಂಬಿಕೆ ಎನ್ನುವುದು ಸತ್ಯವಲ್ಲ. ಮನಸ್ಸು ಯಾವುದನ್ನು ಪುನರಾವರ್ತಿತವಾಗಿ ಕೇಳುತ್ತಿರುತ್ತದೆಯೋ, ಆಲೋಚಿಸುತ್ತಿರುತ್ತದೆಯೋ ಅದೇ ನಂಬಿಕೆಯಾಗುತ್ತದೆ. ಹಾಗಾಗಿ ಮನಸ್ಸು ಎಂಬುದು ತಾನು ನಂಬುವುದನ್ನು ಮೀರಲು, ತಾನು ಕಟ್ಟಿಕೊಂಡಿರುವ ಚೌಕಟ್ಟಿನಿಂದ ಆಚೆಗೆ ಬರಲು ತಾನೇ ಮನಸ್ಸು ಮಾಡಬೇಕು.
ಮನೋವೈಜ್ಞಾನಿಕವಾಗಿ ಯಾವ ಸೀಮಾತೀತ ಮನಸ್ಸನ್ನು ವಿವರಿಸಲು ಯತ್ನಿಸುತ್ತಿರುವೆವೋ ಅದನ್ನೇ ಆಧ್ಯಾತ್ಮಿಕವಾಗಿ ಜ್ಞಾನೋದಯ ಎನ್ನುವುದು. ಕೈವಲ್ಯ ಅಥವಾ ಕೇವಲ್ ಅಥವಾ ನಿರ್ವಾಣ ಎಂಬುದೂ ಕೂಡಾ ಇಂತಹ ಮುಕ್ತ ಮನಸ್ಥಿತಿಯೇ. ಬಯಲಾಗುವ, ನಿರ್ವಾಣ ಹೊಂದುವ ಪರಿಕಲ್ಪನೆಯಲ್ಲಿ ಅನುಭವಿಗಳಾಗುವ ದಾರ್ಶನಿಕರು ದೇವಸ್ಥಾನ, ಚರ್ಚು, ಮಸೀದಿಗಳ ಗೋಡೆಗಳಿಂದ ಹೊರಗಾಗುವರು, ಧರ್ಮಗ್ರಂಥ, ಧಾರ್ಮಿಕ ಆಚರಣೆಗಳು, ಲಾಂಛನಗಳು ಮತ್ತು ಬಾವುಟಗಳಿಂದ ಅತೀತರಾಗುವರು. ಅವುಗಳನ್ನೆಲ್ಲಾ ಪ್ರಾಥಮಿಕ ಹಂತಗಳ ಸಂಕೇತಗಳನ್ನಾಗಿ ನೋಡುವುದಲ್ಲದೇ ಮೂರ್ತದಿಂದ ಅಮೂರ್ತಕ್ಕೆ ಸಾಗುವರು.
ಯಾವುದೇ ಮೂರ್ತ ಗುರುತುಗಳ ಅವಲಂಬನ ಸೀಮಿತ ಮನಸ್ಥಿತಿ, ಅಮೂರ್ತದ ಅನುಭಾವ ಅಸೀಮ ಮನಸ್ಥಿತಿ. ಮೂರ್ತ ಗುರುತುಗಳಿಗೆ ಅಂಟಿಕೊಳ್ಳುವುದನ್ನು ನಿವಾರಿಸಿಕೊಳ್ಳುವ ಮನಸ್ಸು ತನ್ನ ಅಂತರಾಳವನ್ನು ಏಕತೆಗೆ ತೆರೆದುಕೊಳ್ಳುತ್ತದೆ. ಇಲ್ಲವಾದರೆ ಭೆೇದಗಳ ಗೋಡೆಗಳಲ್ಲಿ ಬಂಧಿತವಾಗಿಯೇ ಇರುತ್ತದೆ.
ಹಾಗಂತ ಇದು ಬಂಡಾಯವೋ ಅಥವಾ ಮೂರ್ತತೆಗಳ ವಿರೋಧವೋ ಅಲ್ಲ. ಇದು ಮರಳುವಿಕೆ. ಸಾಂಸ್ಕೃತಿಕ, ಧಾರ್ಮಿಕ, ಸಾಮಾಜಿಕವೇ ಮೊದಲಾದ ವ್ಯವಸ್ಥೆಗಳೆಲ್ಲದರ ಸಾವಯವ ಬೇರಾದ ಶುದ್ಧ ಪ್ರಜ್ಞೆಗೆ ಮರಳುವಿಕೆ. ಹಾಗೆ ಮರಳಿದ ವ್ಯಕ್ತಿಯ ಬೇರು ಭಾರತವೋ, ಪಾಕಿಸ್ತಾನವೋ, ಅಮೆರಿಕವೋ ಆಗಿರುವುದಿಲ್ಲ, ಹಿಂದೂ, ಮುಸ್ಲಿಮ್ ಅಥವಾ ಕ್ರೈಸ್ತನಾಗಿರುವುದಿಲ್ಲ. ಎಲ್ಲವನ್ನೂ ರೂಪಿಸಿದ ಮೂಲವಾದ ಅಸ್ತಿತ್ವವೇ ವ್ಯಕ್ತಿಯ ಬೇರಾಗಿರುತ್ತದೆ.
ಹಾಗೆಯೇ ಅಸ್ತಿತ್ವದ ಪರಿಕಲ್ಪನೆಯನ್ನು ಹೊಂದಿರದ ವ್ಯಕ್ತಿಯ ವಿಕಸನಗೊಂಡಿಲ್ಲದ ಅಜ್ಞಾನವೇನೂ ಪಾಪವೋ, ದೋಷವೋ ಅಲ್ಲ. ಅದು ಬರಿಯ ಹಾದು ಹೋಗಬೇಕಿರುವ ಹಂತ. ಅಜ್ಞಾನವೋ ಅಥವಾ ಮುಗ್ಧತೆಯೋ ಜೀವವಿಕಾಸದಲ್ಲಿದ್ದಂತೆ ಮನೋವಿಕಾಸದಲ್ಲಿ ಅತ್ಯಂತ ಸ್ವಾಭಾವಿಕ ಮತ್ತು ಅನಿವಾರ್ಯದ ಹಂತ. ಪ್ರಸ್ತುತದ ವಿಕಸಿತ ಹಂತದ ಹಿಂದಿನ ಹಂತಗಳು ವಿಕಾಸಗೊಂಡಿಲ್ಲದೇ ಇರುವುದು ಅತ್ಯಂತ ಸ್ವಾಭಾವಿಕ. ಆದರೆ ಅವಿಕಸಿತ ಹಂತಗಳಿಗೆ ಅಂಟಿಕೊಳ್ಳುವ ಅಥವಾ ಅವುಗಳಿಗೆ ಜೋತುಬೀಳುವ ವ್ಯಕ್ತಿಗಳು ವೈಯಕ್ತಿಕವಾಗಿ ಮತ್ತು ಸಾಮಾಜಿಕವಾಗಿ ಚೌಕಟ್ಟುಗಳನ್ನು ನಿರ್ಮಿಸಿಕೊಂಡು ಅದರಲ್ಲಿಯೇ ಇರಲು ಯತ್ನಿಸುವವರು. ಅವರಿಗೆ ಅಸೀಮವಾಗಿರುವ ಮನಸ್ಥಿತಿಯ ಅನುಭವ ಆಗದು.
ಪ್ರತಿಯೊಂದು ಮಾನವ ಮನಸ್ಸಿಗೆ ತನಗೆ ಗುರುತಿಟ್ಟಿರುವ ಚೌಕಟ್ಟುಗಳ ಸಂರಕ್ಷಣೆಯಿಂದ ತನ್ನ ಇರುವಿಕೆಯ ವಿಸ್ತರಣೆಯನ್ನು ಮಾಡಿಕೊಳ್ಳುವ ಸಾಮರ್ಥ್ಯ ಮತ್ತು ಸಾಧ್ಯತೆಗಳು ಇವೆ. ಕಾಲದಿಂದ ಕಾಲಕ್ಕೆ, ತಲೆಮಾರುಗಳಿಂದ ತಲೆಮಾರುಗಳಿಗೆ ಯಾಂತ್ರಿಕವಾಗಿ ಪುನರಾವರ್ತನೆ ಮಾಡುತ್ತಾ ಬಂದಿರುವ ಪರಿಕಲ್ಪನೆಗಳನ್ನು ಸೃಜನಶೀಲವಾಗಿ ಮತ್ತು ಕ್ರಿಯಾಶೀಲವಾಗಿರುವ ಪ್ರಜ್ಞೆಯನ್ನಾಗಿ ಪರಿವರ್ತಿಸಿಕೊಳ್ಳುವುದರಿಂದ ವ್ಯಕ್ತಿ ವೈಯಕ್ತಿಕವಾಗಿ ಮತ್ತು ಸಾಮಾಜಿಕವಾಗಿ ನಿರಾಳವಾಗಿಯೂ ಮತ್ತು ಸಾಮರಸ್ಯದಿಂದಲೂ ಇರಬಲ್ಲ.
ಆಡಳಿತಕ್ಕಾಗಿ ಗಡಿಗಳು, ದೇಶಗಳು ಎಂದು ಬೇಕಾಗಿರುವುದು. ಮನುಷ್ಯತ್ವಕ್ಕೆ ಅಲ್ಲ. ಸಾಮಾಜಿಕ ಬಾಳ್ವೆಯಲ್ಲಿ ಮತ ಧರ್ಮಗಳನ್ನು ಗುರುತಿಸಬಹುದು. ಆದರೆ ಚೈತನ್ಯವೆಂದು ಬಂದಾಗ ಅದು ನೂರು ಮತದ ಹೊಟ್ಟ ತೂರಿ ಅಸ್ತಿತ್ವದ ಕಾಳನ್ನು ಗುರುತಿಸುತ್ತದೆ. ಯಾವ ಮನಸ್ಸು ತನ್ನೊಳಗೆ ತಾನು ಮತ್ತು ತಾನಿರುವ ಗುರುತುಗಳ ಆಚೆಗೆ ನೋಡಿಕೊಳ್ಳಲು ಸಮರ್ಥವಾಗುತ್ತದೆಯೋ ಆ ಮನಸ್ಸು ಎಲ್ಲಾ ಜೀವಿಗಳ ಮತ್ತು ತನ್ನ ಮಧ್ಯೆ ಸೇತುವೆಯನ್ನು ಕಾಣಲೂ ಸಮರ್ಥವಾಗಿರುತ್ತದೆ. ತಾನು ತನ್ನದು ಎಂಬ ಭಾವಗಳನ್ನು ಮೀರಿ ನಾವು ಎಂಬ ತತ್ವವನ್ನು ತನ್ನದಾಗಿಸಿಕೊಳ್ಳುತ್ತದೆ.
ಮನುಷ್ಯತ್ವದ ಭವಿಷ್ಯವು ರಾಷ್ಟ್ರೀಯತೆಯ ಅಥವಾ ಧಾರ್ಮಿಕತೆಯ ಭಾಷೆಯಲ್ಲಿ ಬರೆದಿರುವುದಿಲ್ಲ, ಬದಲಾಗಿ ಸಾಮಾನ್ಯ ಪ್ರಜ್ಞೆಯ ದನಿಯಲ್ಲಿ ಧ್ವನಿಸುತ್ತದೆ. ನಿಜವಾದ ವಿಕಾಸ ಎಂಬುದು ಆಂತರಿಕವಾದದ್ದು, ಅಂತರಾಳದಲ್ಲಿ ಆಗಬೇಕಾದ್ದು.
ಭಾವೋದ್ರೇಕದಿಂದ ನಿರ್ಮಿಸಿಕೊಂಡಿರುವ ಗಡಿಗಳನ್ನು ಅಳಿಸಿಕೊಂಡು ಪರಾನುಭೂತಿಯನ್ನು ವಿಸ್ತರಿಸಿಕೊಳ್ಳಲು ಮನಸ್ಸಿಗೆ ಸಾಧ್ಯವಾದರೆ ವಿಶ್ವದ ಅಥವಾ ಅಸ್ತಿತ್ವದ ಬೇರಿಗೆ ಮರಳಲು ಸಾಧ್ಯವಾಗುತ್ತದೆ ಮತ್ತು ನಿಷ್ಕಳಂಕ ಪ್ರಜ್ಞೆಯನ್ನು ಹೊಂದಲು ಸಾಧ್ಯವಾಗುತ್ತದೆ.
ಒಳಗಿನ ಅಂತರಾಳದ ಆಳ ಅಗಲ ಅರಿವಿಗೆ ಬಂತೆಂದರೆ ಹೊರಗಿನ ಜಗತ್ತೂ ಪ್ರಶಾಂತವಾಗಿರಲು ಸಾಧ್ಯ.
ಗಡಿಗಳೆಂಬವು, ಚೌಕಟ್ಟುಗಳೆಂಬುದು ನಾಗರಿಕತೆಯ ವಧಾಸ್ಥಾನಗಳು. ಈಗ ಅವುಗಳನ್ನು ತೊರೆಯುವ ಸಮಯ. ನಮ್ಮ ಮನಸ್ಸಿನ ಜಾಗೃತ ಪ್ರಜ್ಞೆ ಎಂಬುದು ನೈಸರ್ಗಿಕವಾದ ಅನಂತತೆಗೆ ತೆರೆದುಕೊಳ್ಳಬೇಕಾಗಿರುವ ಸಮಯವಿದು. ಯಾವುದೇ ಬಗೆಯ ಗಡಿಗಳ ಮತ್ತು ಚೌಕಟ್ಟುಗಳ ಗಟ್ಟಿ ಕವಚಗಳ ಸಂಘರ್ಷ ಭೂಮಿಯ ಸಾವಯವ ಅಸ್ತಿತ್ವಕ್ಕೇ ಮಾರಕ.