ಭಾಷೆಗೂ ಮುಂಚಿನ ಬಣ್ಣ
ಗಮನಿಸಿ ನೋಡಿ, ಸಾಮಾನ್ಯವಾಗಿ ಯಾವುದೇ ಮಗು ಮಾತನಾಡುವ ಮೊದಲು ಅಥವಾ ಅಕ್ಷರ ಬರೆಯುವ ಮೊದಲು ಚಿತ್ರ ಬಿಡಿಸಲು ಶುರುಮಾಡುತ್ತದೆ. ಕಾಗದ, ಬಣ್ಣದ ಪೆನ್ಸಿಲ್ ಅಥವಾ ಬರೆಯುವಂತಹದ್ದು ಏನೇ ಕೈಗೆ ಸಿಕ್ಕರೂ ಕೇವಲ ಕೆಲವು ಕ್ಷಣಗಳಲ್ಲಿ ಅದರ ಎದೆಯ ಲೋಕದ ಚಿತ್ತಾರಗಳು ಹೊರ ಬೀಳುತ್ತದೆ. ಗೋಡೆಯ ಮೇಲೆ, ಕಾಗದದ ಮೇಲೆ; ಎಲ್ಲಿ ಚಿತ್ರ ಬಿಡಿಸಲು ಸಾಧ್ಯವೋ ಅಲ್ಲೆಲ್ಲಾ!
ಇದು ಕೇವಲ ಆಟವಲ್ಲ.
ಇದು ಮಾನವ ಕುಲದ ಆಳವಾದ ನೆನಪು. ನಮ್ಮ ಪೂರ್ವಜರ ಸೃಜನಾತ್ಮಕ ಸ್ವಭಾವದ ಪಳೆಯುಳಿಕೆ, ಪೂರ್ವಜರ ಪ್ರತಿಧ್ವನಿ ಮತ್ತು ನಮ್ಮ ಹುಟ್ಟಿನ ಹಳೆಯ ವಾಸನೆಯ ನೆನಪು.
ನಮ್ಮ ಪೂರ್ವಜರು ಗುಹೆಯ ಗೋಡೆಗಳ ಮೇಲೆ ಇದೇ ರೀತಿ ತಮ್ಮ ಅನುಭವ, ಭಯ, ಜೀವನ, ಸಂತೋಷ; ಹೀಗೆ ತಮ್ಮ ವಿಷಯಗಳನ್ನು ದಾಖಲು ಮಾಡುತ್ತಿದ್ದದ್ದು.
ಭೀಂಬೆಟ್ಕಾ, ಲಾಸ್ಕೊ, ಅಲ್ಟಮಿರಾ; ಎಲ್ಲೆಡೆ ಕಲ್ಲಿನ ಗೋಡೆಯ ಮೇಲೆ ಬರೆದ ಚಿತ್ರಗಳು ಅವರದೇ ಕಥೆಗಳು. ಅವರ ಬೇಟೆ, ಪ್ರೀತಿ, ಭಯ, ಆರಾಧನೆಗಳ ಚಿತ್ರಗಳು.
ಭಾಷೆ ಹುಟ್ಟುವ ಮೊದಲು ಚಿತ್ರ ಹುಟ್ಟಿತು. ಅದು ಮಾನವನ ಮೊದಲ ಕಾವ್ಯ.
ಹೀಗಾಗಿ ಮಗುವಿನ ಚಿತ್ರ ಬಿಡಿಸುವ ಆಸೆ ಎಂದರೆ, ಅದರೊಳಗಿನ ಆದಿಮ ಮಾನವ ಮತ್ತೆ ಜಾಗೃತನಾಗುತ್ತಿರುವ ಕ್ಷಣ.
ಚಿತ್ತಾರದಿಂದ ಅಕ್ಷರದತ್ತ ನಡೆದಿರುವುದೇ ಮಾನವಾಭಿವೃದ್ಧಿಯ ಕ್ರಮ. ಹಾಗೆಯೇ ಮಾನವ ಇತಿಹಾಸದಲ್ಲಿ ಕೂಡ ಇದೇ ಕ್ರಮ: ಚಿತ್ರ- ಸಂಕೇತ-ಅಕ್ಷರ-ಪದ.
ಈಜಿಪ್ಷಿಯನ್ ಹೈರೋಗ್ಲಿಫ್, ಸುಮೇರಿಯನ್ ಕುನಿಫಾರ್ಮ್, ಚೈನೀಸ್ ಲಿಪಿ; ಎಲ್ಲವೂ ಮೊದಲಿಗೆ ಚಿತ್ರಗಳು. ಮಾನವನು ಮೊದಲು ಅರ್ಥವನ್ನು ಬರೆದಿಲ್ಲ, ಅರ್ಥವನ್ನು ಬಿಡಿಸಿದ.
ಹೀಗೆಯೇ ಪ್ರತಿಯೊಂದು ಮಗು ನಮ್ಮ ಕುಲದ ಆ ಇತಿಹಾಸವನ್ನು ಮತ್ತೆ ಪುನರಾವರ್ತಿಸುತ್ತದೆ.
ಇನ್ನು ಜೀವ ವಿಜ್ಞಾನದ ದಿಕ್ಕಿನಿಂದ ನೋಡುವುದಾದರೆ, ಮಗುವಿನ ಮೆದುಳಿನಲ್ಲಿ ಮೊದಲು ಬೆಳೆಯುವುದು ಬಲಭಾಗ. ಚಿತ್ರ, ಭಾವನೆ, ಕಲ್ಪನೆ ಮತ್ತು ದೃಶ್ಯಗಳ ಲೋಕ. ನಂತರ ಎಡಭಾಗ ಬೆಳೆಯುತ್ತದೆ. ಅದು ಶಬ್ದ, ಅಕ್ಷರ, ತರ್ಕದ ನಿರ್ವಹಣೆಯ ಭಾಗ.
ಆದ್ದರಿಂದ ಮಕ್ಕಳು ತಾವು ಮಾತನಾಡುವುದಕ್ಕಿಂತ ಮುಂಚೆ ಚಿತ್ರದ ಮೂಲಕ ಮಾತನಾಡುತ್ತವೆ.
ಅವರ ಬಣ್ಣಗಳು, ವಕ್ರರೇಖೆಗಳು, ಮುಖಗಳು; ಎಲ್ಲವೂ ಅವರ ಭಾವನೆಗಳ ಭಾಷೆ.
ಮನೋವಿಜ್ಞಾನಿಗಳು ಇದನ್ನೇ ಆರ್ಟ್ ಥೆರಪಿ ಎಂದು ಬಳಸುತ್ತಾರೆ. ಮಗು ಮಾತಿನಲ್ಲಿ ಹೇಳಲಾಗದ ಮನದ ಕಹಿಯನ್ನು, ಒಂದು ಪೆನ್ಸಿಲ್ ಅಥವಾ ಕ್ರೇಯಾನ್ ಹೇಳಿಬಿಡುತ್ತದೆ.
ಮನೋವಿಜ್ಞಾನಿ ಕಾರ್ಲ್ ಯುಂಗ್ ಹೇಳಿದಂತೆ, ಇದು ಅಪರಿಚಿತ ಮನಸ್ಸಿನ ಭಾಷೆ. ವ್ಯಕ್ತಿಗಳು ತಾವು ಮಕ್ಕಳಾಗಿರುವಾಗ ಇನ್ನೂ ಪ್ರಕೃತಿಗೆ ಹತ್ತಿರವಾಗಿರುವರು, ಸಾಮಾಜಿಕ ನಿಯಮಗಳಿಗೆ ಅಪರಿಚಿತರಾಗಿರುವರು. ಅವರು ಚಿತ್ರ ಬಿಡಿಸುವಾಗ ಅವರ ಕನಸುಗಳನ್ನು, ಮನಸ್ಸುಗಳನ್ನು, ನೋಡುವ ಬಗೆಗಳನ್ನು ಕಾಗದದ ಮೇಲೆ ಬಿಡಿಸುತ್ತಾರೆ. ಆದ್ದರಿಂದ ಮಗುವಿನ ಆಕಾಶ ಹಸಿರಾಗಿದ್ದರೆ, ಅಥವಾ ನಗುತ್ತಿರುವ ಸೂರ್ಯ ಬಿಡಿಸಿದರೆ; ಅದು ತಪ್ಪಲ್ಲ, ವಿಚಿತ್ರವೂ ಅಲ್ಲ. ಅದು ಅದರ ಅಂತರಾಳದ ನಿಜವಾದ ಭಾವಚಿತ್ರ.
ಹಾಗಾಗಿ ಪೋಷಕರು ಮತ್ತು ಶಿಕ್ಷಕರು ತಿಳಿಯಬೇಕಾಗಿರುವುದೇನೆಂದರೆ, ಮಕ್ಕಳಿಗೆ ಬಣ್ಣದ ಪೆನ್ಸಿಲ್ ಕೊಡುವುದು ಕೇವಲ ಆಟವಲ್ಲ. ಅದು ಅವರನ್ನು ಅವರ ಮೂಲಭಾಷೆಯತ್ತ ಕರೆದೊಯ್ಯುವುದು. ಅವರ ಚಿತ್ರವನ್ನು ತಿದ್ದಬೇಡಿ, ಅದು ಹೀಗಿರಬೇಕು, ಹಾಗಿರಬೇಕು ಎಂದು ಹೇಳಲೇಬೇಡಿ. ಬಿಡಿಸಿರುವುದು ಏನೆಂದು ಅದನ್ನು ಕೇಳಿ ತಿಳಿದುಕೊಳ್ಳಿ.
ಅಲ್ಲಿ ಅವರ ಅಂತರಾಳದ ಗ್ರಹಿಕೆ ಇರುತ್ತದೆ. ಕಲಬೆರಕೆಯಾಗಿ ಕಲುಷಿತಗೊಂಡಿರುವ ನಾವು ಈಗ ಎಂದಿಗೂ ಕಲ್ಪಿಸಿಕೊಳ್ಳಲಾಗದ ಲೋಕ ಅದಾಗಿರುತ್ತದೆ.
ಒಮ್ಮೆ ಗಮನಿಸಿ ನೋಡಿ, ಒಂದು ಮಗು ಗೋಡೆಯ ಮೇಲೆ ಅಥವಾ ಕಾಗದದ ಮೇಲೆ ರೇಖೆ ಎಳೆದಾಗ, ಬಹುಶಃ ಸಾವಿರಾರು ವರ್ಷಗಳ ಹಿಂದೆ ಗುಹೆಯ ಗೋಡೆಯ ಮೇಲೆ ಬೆಂಕಿಯ ಬೆಳಕಿನಲ್ಲಿ ಚಿತ್ರ ಬಿಡಿಸಿದ ನಮ್ಮ ಪೂರ್ವಜರ ಪ್ರತಿಧ್ವನಿಯೇ ಅಲ್ಲಿ ಮೂಡುತ್ತಿದೆ.
ಮಾತುಗಳಿಗಿಂತ ಮುಂಚೆ ಬಣ್ಣಗಳಿದ್ದವು, ಅಕ್ಷರಗಳಿಗಿಂತ ಮುಂಚೆ ಭಾವನೆಗಳಿದ್ದವು.
ನಾವು ಮಾತನಾಡುವ ಮೊದಲು, ನಾವು ಬಿಡಿಸುತ್ತಿದ್ದೆವು ನಾನು ಜೀವಂತ ಎಂದು ಹೇಳಲು.