×
Ad

ಬೇರುಗಳು

Update: 2025-11-23 11:07 IST

ನಿರ್ಬಂಧಕ್ಕೆ ಒಳಗಾಗಿರುವುದರಿಂದ ತನ್ನ ನಿಜವಾದ ತನ್ನತನದ ಕಡೆಗೆ ನಡೆಯುವುದೇ ಒಬ್ಬ ವ್ಯಕ್ತಿಯ ವ್ಯಕ್ತಿತ್ವದ ಪ್ರಯಾಣ ಆಗಿರುತ್ತದೆ ಎಂದು ಕಾರ್ಲ್ ಯುಂಗ್ ವಿವರಿಸುತ್ತಾರೆ. ವ್ಯಕ್ತಿಯ ಪ್ರಜ್ಞೆಯು ತನಗೆ ಅಂಟಿಕೊಂಡಿರುವ ಎಲ್ಲಾ ಗುರುತುಗಳ ಹಣೆಪಟ್ಟಿಗಳನ್ನು ತೊಡೆದುಕೊಂಡು ಮುಕ್ತವಾಗಿ ಹರಿಯುವುದೇ ಅದಾಗಿರುತ್ತದೆ.

ಐಡೆಂಟಿಟಿ ಅಥವಾ ಗುರುತು ಎಂಬುದು ಮನೋಮಾದರಿಯಾಗಿ ಪ್ರಾರಂಭಿಕ ನಕಾಶೆಯಾಗಿರುವುದು ಏಕೆಂದರೆ ವಿಸ್ತಾರವಾದ ಮತ್ತು ಅಸೀಮವಾದ ಜೀವನದಲ್ಲಿ ಎಲ್ಲೋ ಕಳೆದು ಹೋಗದಿರಲು. ಆದರೆ ಪ್ರಜ್ಞೆಯು ಪಕ್ವವಾಗುತ್ತಿದ್ದಂತೆ ದೊರಕಿರುವ ಅಥವಾ ಆರೋಪಿಸಿಕೊಂಡಿರುವ ಗುರುತುಗಳಿಗೇ ಅಂಟಿಕೊಂಡಿರುವುದು ವಿಶಾಲವಾದ ಆಕಾಶದಲ್ಲಿ ಹಾರಾಡಲು ಸಾಧ್ಯವಿರುವ ಪಕ್ಷಿಯನ್ನು ಪಂಜರದಲ್ಲಿಯೇ ಬಂಧಿಸಿಟ್ಟಿರುವ ಹಾಗೆ.

ನಿಜವಾದ ಬೆಳವಣಿಗೆ ಎಂಬುದು ಪ್ರಾರಂಭವಾಗುವುದೇ ನಮ್ಮದೇ ಗುರುತುಗಳನ್ನು ಪ್ರಶ್ನಿಸಿಕೊಳ್ಳಲು ಆರಂಭಿಸಿದಾಗ. ಈ ನಾನು ಎಂಬುದು ಬರಿಯ ರಾಷ್ಟ್ರವೇ, ಧರ್ಮವೇ, ಕುಟುಂಬವೇ, ಸಂಸ್ಕೃತಿಯೇ?

ನಮಗೆ ದೇಶವೇ ಮೊದಲು, ನಮ್ಮ ಧರ್ಮವೇ ಶ್ರೇಷ್ಠ, ಕುಟುಂಬಕ್ಕಾಗಿ ತ್ಯಾಗ, ನಮ್ಮ ಹಳೆಯ ಸಂಸ್ಕೃತಿಗೆ ಮರಳಿ; ಎಂದೆಲ್ಲಾ ಹೇಳುತ್ತಾ, ನಮ್ಮ ಬೇರುಗಳಿಗೆ ನಾವು ಮರಳಬೇಕು ಎಂಬ ಕರೆಯನ್ನು ಬಹಳಷ್ಟು ಕೇಳುತ್ತಿರುತ್ತೇವೆ. ಬೇರುಗಳು ಎಂದು ಹೇಳುವಾಗ ತಮ್ಮ ಹಳೆಯ ಧಾರ್ಮಿಕತೆಗೋ, ಸಂಸ್ಕೃತಿಗೋ, ಪರಂಪರೆಗೋ ಆರೋಪಿಸುತ್ತಿರುತ್ತಾರೆ.

ಆದರೆ ಬೇರುಗಳು ಎಂದು ಕರೆಯಲಾಗುವ ಅವು ನಮ್ಮ ಮನುಷ್ಯ ಸಮಾಜದಲ್ಲಿ ನಿಜಕ್ಕೂ ಏನು? ಮನುಷ್ಯನ ಪ್ರಜ್ಞೆಯ ಸಾವಯವ ಸತ್ವವನ್ನು ಬೇರೆಂದು ಕರೆಯುವ ಬದಲು ಐತಿಹಾಸಿಕ ಗ್ರಹಿಕೆಗಳನ್ನು ಬೇರುಗಳು ಎಂದು ಬಹಳಷ್ಟು ವಿವರಣೆಗಳು ಭ್ರಮೆಯನ್ನು ಹುಟ್ಟಿಸಿವೆ. ಅದರಲ್ಲಿಯೂ ಆ ಐತಿಹಾಸಿಕ ಗ್ರಹಿಕೆಗಳೋ ಮನುಷ್ಯನ ಬುದ್ಧಿಮತ್ತೆ ಸೀಮಿತದಲ್ಲಿದ್ದು, ವೈಚಾರಿಕ ವ್ಯಾಪ್ತಿ ಚೌಕಟ್ಟುಗಳಲ್ಲಿದ್ದು, ಜ್ಞಾನವೆಂಬುದು ಮಿತಿಯಲ್ಲಿದ್ದು ತಾವಿರುವ ಪ್ರಪಂಚವನ್ನೇ ಚಿಕ್ಕದಾಗಿಸಿಕೊಂಡಿದ್ದ ಕಾಲಗಳದ್ದು.

ಆದಿಮ ಕಾಲದ ಬುಡಕಟ್ಟಿನ ಜನರ ಸಮುದಾಯಕ್ಕೆ ಅವರ ಕಣ್ಣಳತೆಯ ಮತ್ತು ಗ್ರಹಿಕೆಯ ಇತಿಮಿತಿಯಲ್ಲಿರುವುದಷ್ಟೇ ಇಡೀ ಪ್ರಪಂಚವಾಗಿರುತ್ತಿತ್ತು. ಆಗ ಆ ಬುಡಕಟ್ಟಿನ ಬೇರು ಎನ್ನುವುದಕ್ಕೊಂದು ಅರ್ಥವಿದೆ. ಯಾವಾಗ ಒಂದು ವ್ಯಕ್ತಿ ಅಥವಾ ಸಮೂಹಕ್ಕೆ ಧರ್ಮ ಎನ್ನುವ ಒಡಂಬಡಿಕೆಯೊಂದೇ ನೈತಿಕ ದಿಕ್ಸೂಚಿಯಾಗಿತ್ತೋ, ಆಗ ಧಾರ್ಮಿಕತೆಯ ಬೇರು ಎನ್ನುವುದು ಅಗತ್ಯವೇ ಆಗಿತ್ತು. ಆದರೀಗ ನಮ್ಮ ಮನೋಕಾಶ ಅಥವಾ ಮಾನಸ ಪ್ರಪಂಚ ವಿಸ್ತಾರಗೊಂಡಿದೆ.

ಮನಶಾಸ್ತ್ರೀಯವಾಗಿ ಹೇಳುವುದಾದರೆ, ಹಳೆಯ ಬೇರುಗಳಿಗೆ ಅಂಟಿಕೊಂಡಿರುವುದು ಹೇಗೆಂದರೆ, ನಮ್ಮ ಪೂರ್ವಿಕರು ಅಂಬೆಗಾಲಿಟ್ಟು ನಡೆದರೆಂದು ಈಗ ನಾವು ನಡೆಯಲು ಅಥವಾ ಓಡುವುದನ್ನು ನಿರಾಕರಿಸುವುದು ಎಂದರ್ಥ.

ತಾತ್ವಿಕವಾಗಿಯೂ ಕೂಡಾ ವಿಶ್ಲೇಷಿಸುವುದಾದರೆ, ನಿಜವಾದ ಬೇರುಗಳೆಂದರೆ ಸಾಂಸ್ಕೃತಿಕವೋ, ಜನಾಂಗೀಯವೋ ಅಥವಾ ಧಾರ್ಮಿಕವೋ ಅಲ್ಲ. ಅದು ಅಸ್ತಿತ್ವದ್ದಾಗಿರುವುದು. ನಮ್ಮ ನಿಜವಾದ ಬೇರು ಯಾವುದೇ ಹಣೆಪಟ್ಟಿಗಳನ್ನು ಕಟ್ಟಿಕೊಂಡಿರದಂತಹ ಶುದ್ಧವಾದ ಪ್ರಜ್ಞೆಯಲ್ಲಿದೆ. ಅದು ತಾನಿರುವ ಸ್ಥಿತಿಯಲ್ಲಿಯೇ ಎಲ್ಲಾ ಮನುಷ್ಯರಲ್ಲಿಯೂ ಬೇರುಬಿಟ್ಟಿದೆ. ಸಾಂಸ್ಕೃತಿಕವೋ, ಜನಾಂಗೀಯವಾಗಿಯೋ, ಧಾರ್ಮಿಕವಾಗಿಯೋ ಅಲ್ಲದೆ ಆ ಪ್ರಜ್ಞೆಯ ಸೂಕ್ಷ್ಮವಿಜ್ಞಾನವು ಪ್ರತಿಯೊಬ್ಬರಲ್ಲಿಯೂ ಕಳ್ಳುಬಳ್ಳಿಯಂತೆ ಪರಸ್ಪರ ಬೆಸೆದುಕೊಂಡಿದೆ.

ಯಾವಾಗ ವ್ಯಕ್ತಿಯು ತನ್ನ ಬೇರುಗಳನ್ನು ಹೊರಗಿನ ಗುರುತುಗಳಿಂದ ತನ್ನ ಅಂತರಾಳದ ಮೂಲದೊಂದಿಗೆ ಗುರುತಿಸಿಕೊಳ್ಳುತ್ತಾನೆಯೋ ಆಗ ಆ ವ್ಯಕ್ತಿ ತನ್ನರಿವ ದೃಷ್ಟಿಯಿಂದ, ಸಾಮಾಜಿಕವಾಗಿ, ಹಾಗೆಯೇ ಆಧ್ಯಾತ್ಮಿಕವಾಗಿಯೂ ಕೂಡಾ ರೂಪಾಂತರ ಹೊಂದಲಾಗುವುದು.

ಜೀವ ಮತ್ತು ಜೀವನ ವಿಕಾಸವಾದಂತೆ ಬೇರುಗಳೆಂಬ ಗ್ರಹಿಕೆಯೂ ಕೂಡಾ ವಿಕಾಸವಾದಾಗಲೇ ಹಣೆಪಟ್ಟಿಗಳ ಭಾರವಿಲ್ಲದೆ ಮನಸ್ಸು ಆರೋಗ್ಯವಾಗಿರಲು ಸಾಧ್ಯ.

ಮಾನವಶಾಸ್ತ್ರೀಯವಾಗಿ ನೋಡುವುದಾದರೂ ನಮ್ಮ ಹಿಂದಿನ ಜನಕ್ಕೆ ತಾವು ಅಸ್ತಿತ್ವದಲ್ಲಿ ಉಳಿಯಲು ಗಟ್ಟಿಮುಟ್ಟಾದ ಗಡಿಗಳನ್ನು ಹೊಂದಿರಬೇಕಿತ್ತು. ಬುಡಕಟ್ಟಿನ ಬಂಧುತ್ವ, ರಾಷ್ಟ್ರೀಯತೆ, ಧಾರ್ಮಿಕತೆ ಎಲ್ಲವೂ ಒಬ್ಬರಿಗೊಬ್ಬರು ಆಗಲೇ ಬೇಕಾಗಿರುವಂತಹ ಸೀಮಿತ ಒಗ್ಗಟ್ಟಿನ ಆಧಾರವಾಗಿತ್ತು. ಆಗ ಯಾವ ಆ ಎಲ್ಲಾ ಒಗ್ಗಟ್ಟಿನ ಸಾಮಾಜಿಕ ಸಾಧನಗಳು ಅಗತ್ಯವಿತ್ತೋ, ಅವು ಇಂದು ವಿವಿಧ ಧರ್ಮಗಳು, ಸಂಸ್ಕೃತಿಗಳು ಮತ್ತು ಪರಿಕಲ್ಪನೆಗಳೆಲ್ಲವೂ ಸಹಜ ಪ್ರಜ್ಞೆಯ ಮಾನವರ ಒಗ್ಗಟ್ಟನ್ನು ಒಡೆಯುತ್ತಿದೆ.

ಆಗಿನ ಬುಡಕಟ್ಟಿನ ಜನರು ಆಹಾರಕ್ಕಾಗಿ ಪೈಪೋಟಿಗಿಳಿಯುವಂತಹ ಸ್ಥಿತಿ ನಮ್ಮಲ್ಲಿ ಇಲ್ಲ. ಮಾನವನ ತಳಿಗಳೊಂದೇ ಪ್ರಜ್ಞೆಯ ದಿಕ್ಸೂಚಿಯಲ್ಲಿ ಮುನ್ನಡೆಯುತ್ತಿರುವುದು. ಈಗ ಮನುಷ್ಯನಿಗೆ ಇರುವುದು ವಿಶ್ವಾತ್ಮಕ ಪ್ರಜ್ಞೆ ಅಥವಾ ಇಳೆಯರಿವಿನ ಜಾಗೃತಿ. ಬುಡಕಟ್ಟಿನ ಸಾಮುದಾಯಿಕ ಹಿರಿಮೆಯಲ್ಲ.

ಭೌತಿಕ ವಿಕಾಸಕ್ಕೆ ತೆರೆದುಕೊಂಡಿರುವ ಮನುಷ್ಯನ ಸದ್ಯದ ವೈಯಕ್ತಿಕ ಮತ್ತು ಸಾಮಾಜಿಕ ಮಾನಸಿಕ ಸಮಸ್ಯೆಗಳಿಗೆ ಬಹುದೊಡ್ಡ ಕಾರಣವೇ ಮಾನಸಿಕ ವಿಕಾಸಕ್ಕೆ ತೆರೆದುಕೊಂಡು ಪರಾನುಭೂತಿ (ಎಂಪತಿ) ಮತ್ತು ಸೂಕ್ಷ್ಮಪ್ರಜ್ಞೆಗಳನ್ನು ಹೊಂದುತ್ತಾ ಮನುಷ್ಯ ನಿರ್ಮಿತ ಗಡಿಗಳನ್ನು ದಾಟದೇ ಇರುವುದು.

ಧರ್ಮಗಳು, ರಾಜಕೀಯ, ಆರ್ಥಿಕತೆ, ರಾಷ್ಟ್ರೀಯತೆ, ದೇಶಭಕ್ತಿ ಇವೆಲ್ಲವೂ ಕೂಡಾ ಆಡಳಿತಾತ್ಮಕವಾದ ಅನುಕೂಲಕ್ಕೆ ಅಗತ್ಯವಿರುವ ಒಡಂಬಡಿಕೆಗಳು. ಅವುಗಳನ್ನು ವಿನ್ಯಾಸಗೊಳಿಸಿರುವ ಉದ್ದೇಶವೇ ಪರಸ್ಪರ ಸಹಕಾರಕ್ಕಾಗಿಯೇ ಹೊರತು ಮನುಷ್ಯನ ಜೀವನವನ್ನು ಮತ್ತು ಮಾನಸಿಕ ಬೆಳವಣಿಗೆಯನ್ನು ಸೀಮಿತಗೊಳಿಸಲು ಅಲ್ಲ. ವ್ಯಕ್ತಿಗಳು ಯಾವಾಗ ಅವುಗಳಿಗೆ ವೈಯಕ್ತಿಕವಾಗಿ ಮತ್ತು ಭಾವೋದ್ರೇಕದಿಂದ ವ್ಯಾಮೋಹಕ್ಕೆ ಒಳಗಾಗಿ ಅಂಟಿಕೊಳ್ಳುತ್ತಾರೋ ಆಗ ಅದರಿಂದ ಸಂಕುಚಿತ ದೃಷ್ಟಿಕೋನಗಳೂ ಮತ್ತು ಸಂಘರ್ಷಗಳೂ ಉಂಟಾಗುತ್ತವೆ.

ಸಾಮಾಜಿಕವಾದ ಪ್ರಬುದ್ಧತೆಯನ್ನು ಹೊಂದುವುದರಿಂದಲೂ ವ್ಯಕ್ತಿಯ ಮಾನಸಿಕ ಆರೋಗ್ಯವು ಉತ್ತಮ ರೀತಿಯಲ್ಲಿ ಇರಲು ಸಾಧ್ಯ. ಧರ್ಮ, ದೇಶ, ಸಂಸ್ಕೃತಿ ಮತ್ತು ಇತರ ಹಳೆಯ ಸಾಮಾಜಿಕ ಯಂತ್ರಗಳನ್ನು ವಿವೇಕದಿಂದ ಬಳಸುತ್ತಾ, ಅದನ್ನು ಮೋಹಿತರಾಗಿ ಆರಾಧಿಸದಿದ್ದರೆ ಮನಸ್ಸುಗಳು ಮತ್ತು ಮನುಷ್ಯರ ಸಮೂಹಗಳು ಸಂಘರ್ಷರಹಿತವಾಗಿ ಇರಲು ಸಾಧ್ಯ. ಮನುಷ್ಯನದ್ದೇ ಸೃಷ್ಟಿಯಾಗಿರುವ ಧಾರ್ಮಿಕತೆ, ರಾಷ್ಟ್ರೀಯತೆ ಮತ್ತು ಸಾಂಸ್ಕೃತಿಕ ಪರಂಪರೆಗಳಿಗಿಂತ ಮಾನವತೆಯನ್ನು ಗೌರವಿಸುವ ಮತ್ತು ಅಪ್ಪಿಕೊಳ್ಳುವುದಾದರೆ ಸಮಾಜದ ನಿಜವಾದ ಮತ್ತು ಮೂಲ ಚೈತನ್ಯವನ್ನು ಒಪ್ಪಿಕೊಂಡಂತಾಗುತ್ತದೆ ಮತ್ತು ಅದರೊಟ್ಟಿಗೆ ಗುರುತಿಸಿಕೊಂಡಂತಾಗುತ್ತದೆ. ಧಾರ್ಮಿಕತೆ, ರಾಷ್ಟ್ರೀಯತೆಗಳಂತೆ ಮಾನವತೆಯೂ ಕೂಡಾ ಮನುಷ್ಯನ ಸೃಷ್ಟಿಯೇ! ತನ್ನದೇ ಸೃಷ್ಟಿಗಳಲ್ಲಿ ತಾನು ಯಾವುದನ್ನು ಆಯ್ದುಕೊಳ್ಳಬೇಕು ಮತ್ತು ಗುರುತಿಸಿಕೊಳ್ಳಬೇಕು ಎಂಬುದು ವ್ಯಕ್ತಿಯ ವಿವೇಕದ ಆಯ್ಕೆಯಾಗಬೇಕು.

ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ಸಾಮಾಜಿಕ, ಸಾಂಸ್ಕೃತಿಕ ಮತ್ತು ಧಾರ್ಮಿಕತೆಯ ಭಿನ್ನ ಭಿನ್ನ ಗುರುತುಗಳಿದ್ದರೂ ಅವುಗಳನ್ನು ಪಕ್ಕಕ್ಕೆ ಸರಿಸಿ ರಾಷ್ಟ್ರೀಯತೆಯ ಗುರುತಿನಲ್ಲಿ ಬೆರೆತುಕೊಂಡದ್ದು ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು. ಬೇರುಗಳು ಎಂಬ ಗುರುತುಗಳನ್ನು ಸಮಯಕ್ಕನುಸಾರವಾಗಿ, ಜೀವನ್ಮುಖಿಯಾಗಿ ಮತ್ತು ವಿಕಾಸಪರವಾಗಿ ಬದಲಾಯಿಸಿಕೊಳ್ಳುವುದು ಕೂಡಾ ಮನೋವಿಕಾಸದ ಭಾಗವೂ ಹೌದು, ಮನೋರಕ್ಷಣಾ ತಂತ್ರವೂ ಹೌದು.

ಆಲೋಚನೆಗಳಿಗಷ್ಟೇ ಎಲ್ಲೆಗಳಿರುವುದು, ಅಸ್ತಿತ್ವಕ್ಕಲ್ಲ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಯೋಗೇಶ್ ಮಾಸ್ಟರ್

contributor

Similar News

ಬಯಕೆಗಳು

ಒಂಟಿ

ತಿರುಗುಪಾಳಿ