×
Ad

ಬಯಕೆಗಳು

Update: 2025-09-28 07:41 IST

ಮನಸ್ಸಿನ ಹಲವು ಗುಣಗಳಲ್ಲಿ ಒಂದು ಪ್ರಮುಖ ಗುಣವೆಂದರೆ, ತನಗೆ ತೋರುವುದನ್ನು ಸತ್ಯವೆಂದು ನಂಬುವುದು ಮತ್ತು ಅದನ್ನು ನಿರೂಪಿಸಲು ಅಥವಾ ಸಾಧಿಸಲು ಯತ್ನಿಸುವುದು. ಹಾಗಾಗಿ ಮನುಷ್ಯನ ಜೀವನದ ನಿರ್ವಹಣೆಯ ವಿಷಯಗಳಲ್ಲಿ ಮನಸ್ಸು ವಾಸ್ತವವನ್ನು ಒಪ್ಪಿಕೊಳ್ಳಲು ಸಿದ್ಧವಿಲ್ಲದೆ ಬಹಳಷ್ಟು ಎಡವಟ್ಟುಗಳನ್ನು ಮಾಡುವುದು. ಹಾಗೆಯೇ, ತನಗೆ ಆಗುವ ಗೊಂದಲ ಮತ್ತು ಗೋಜಲುಗಳನ್ನೆಲ್ಲಾ ತನ್ನ ನಡೆ ನುಡಿಗಳ ಮೂಲಕ ಪ್ರದರ್ಶಿಸಿಬಿಡುವುದು. ಅದಕ್ಕೊಂದು ಆರೋಗ್ಯಕರ ತಡೆಯನ್ನೊಡ್ಡಿಕೊಳ್ಳುವ ಸ್ವಾಭಾವಿಕ ಗುಣ ಮನಸ್ಸಿಗೆ ಇಲ್ಲ. ವರ್ತನೆಗಳು ವಿಕಿರಣಕಾರಿ. ಅಂದರೆ ಮನಸ್ಸು ತನ್ನ ಗುಣವನ್ನು ತಾನಾಗಿಯೇ ಅಡೆತಡೆ ಇಲ್ಲದೆ ಪ್ರದರ್ಶಿಸುವ ಪ್ರಕ್ರಿಯೆಯ ಸ್ವಭಾವವನ್ನು ಹೊಂದಿದೆ. ಆದರೆ ಅದಕ್ಕೆ ತಡೆಯೊಡ್ಡುವುದು ತರಬೇತಿಯಿಂದ ಸಾಧ್ಯ. ಕೆಲವೊಮ್ಮೆ ಸಮಸ್ಯಾತ್ಮಕವಾದ ನ್ಯೂನತೆಯಿಂದ ತಡೆದುಕೊಳ್ಳುತ್ತದೆ, ಆದರೆ ಅದು ಪ್ರಜ್ಞಾವಂತಿಕೆಯ ಅಥವಾ ಉದ್ದೇಶ ಪೂರ್ವಕವಾದ ತಡೆಯಲ್ಲ. ಅದು ಬರಿದೇ ಒತ್ತರಿಸಿಕೊಳ್ಳುವ ಅಥವಾ ಅದುಮಿಟ್ಟುಕೊಳ್ಳುವ ಗುಣವಷ್ಟೇ.

ಮನಸ್ಸು ಹಲವು ವಿಷಯಗಳನ್ನು ವಿವೇಚನೆಯಿಂದ ವಿಶ್ಲೇಷಿಸಲು ಆಗದೇ ಗೊಂದಲಗಳನ್ನು ಉಂಟುಮಾಡಿಕೊಳ್ಳುವುದುಂಟು. ಅಂತಹ ವಿಷಯಗಳಲ್ಲಿ ಪ್ರಮುಖವಾದದ್ದು ಬಯಕೆ. ಬಯಕೆಯ ಮೂಲ ಉದ್ದೇಶ ತೃಪ್ತಿಗೊಳ್ಳುವುದು ಅಥವಾ ತಣಿಯುವುದು.

ಮಾನಸಿಕ ಪ್ರಚೋದನೆಯು ವಿಷಯಗಳಿಗಾಗಿ ಹಂಬಲಿಸಿ ಅದನ್ನು ಪಡೆಯುವ ಮೂಲಕ ಮಾನಸಿಕ ತೃಪ್ತಿಯನ್ನು ಪಡೆಯುವುದೇ ಬಯಕೆಯ ಗುರಿ. ಬಯಕೆಯು ತನ್ನ ಗುರಿ ಮುಟ್ಟುವುದರಲ್ಲಿ ನಾನಾ ತಂತ್ರಗಳನ್ನು ಬಳಸಿಕೊಳ್ಳುತ್ತದೆ. ತೃಪ್ತಿ ಎಂಬುದಕ್ಕೆ ಎಂದಿಗೂ ದೀರ್ಘಕಾಲದ ಆಯಸ್ಸು ಇರುವುದಿಲ್ಲ. ಕೆಲವು ಬಗೆಯ ತೃಪ್ತಿ ತಕ್ಷಣವೇ ಕೊನೆಗೊಳ್ಳುತ್ತದೆ. ಕೆಲವೊಂದರ ಸಾವು ನಿಧಾನ. ಮತ್ತೆ ಕೆಲವು ತೃಪ್ತಿಗಳು ನೆನಪುಗಳ ರೂಪ ತಾಳಿದರೂ ಮತ್ತಷ್ಟು ನಿಧಾನವಾಗಿಯಾದರೂ ಇಲ್ಲವಾಗುತ್ತದೆ. ಒಟ್ಟಾರೆ ತೃಪ್ತಿಗೆ ಬಹುಕಾಲದ ಬದುಕಿಲ್ಲ. ಆದರೆ ಬಯಕೆ ಮಾತ್ರ ದೀರ್ಘಾಯುಷ್ಯ ಉಳ್ಳದ್ದು.

ಒಟ್ಟಾರೆ ತಿಳಿಯಬೇಕಾಗಿರುವುದು ಬಯಕೆ ಎಂಬುದು ತೃಪ್ತಿಯನ್ನು ಹೊಂದಲು ಇರುವಂತಹ ಮನಸ್ಸಿನ ಮೂಲಭೂತ ಒತ್ತಾಯ ಅಥವಾ ಸೆಳೆತ. ಅದು ಒತ್ತಾಯ ಅಥವಾ ಸೆಳೆತ ಆಗಿರುವುದರಿಂದಲೇ ಬಯಕೆಯು ನಾನಾ ರೂಪಗಳನ್ನು ತಳೆದು ಮನುಷ್ಯನಲ್ಲಿ ಗೊಂದಲವನ್ನು ಸೃಷ್ಟಿಸುತ್ತದೆ. ಇದೊಂದು ಬಹಳ ಅಗತ್ಯವಾದ ಅರಿವು. ಈ ಅರಿವು ಮನುಷ್ಯನಿಗೆ ಬಯಕೆ, ಅಗತ್ಯ, ಕಾಮನೆ, ಗೀಳು, ವ್ಯಸನಗಳೇ ಮುಂತಾದವನ್ನು ಪದರ ಪದರವಾಗಿ ಬೇರ್ಪಡಿಸಲು ನೆರವಾಗುತ್ತದೆ. ಇಲ್ಲದಿದ್ದರೆ ಈ ಎಲ್ಲಾ ಪದರಗಳೂ ಒಟ್ಟಾಗಿ, ಗಟ್ಟಿಯಾಗಿ, ಒಂದೇ ರೀತಿಯಾಗಿ ಬರಿದೇ ಬಯಕೆ ಎಂದೇ ತೋರುತ್ತದೆ.

ಗಮನಿಸಿ ನೋಡಿ; ಅಗತ್ಯ, ಕಾಮನೆ, ಗೀಳು, ವ್ಯಸನ ಎಲ್ಲವೂ ಮನಸ್ಸಿನ ಬಯಕೆಗಳ ವಿವಿಧ ಪದರಗಳೇ ಆಗಿರುತ್ತವೆ. ಅಗತ್ಯವಿರುವ ಪದರವನ್ನು ಅನಗತ್ಯವಾದ ಪದರವು ಆವರಿಸಿ ಅಗತ್ಯದ ಬಯಕೆಯನ್ನೇ ನಾಶಪಡಿಸುವಷ್ಟು ಕಡುಬಯಕೆ (ಕ್ರೇವಿಂಗ್) ಆಗಿ ಬದಲಾಗಿಬಿಡುತ್ತದೆ. ಸೆಳೆತದಂತಹ ಸೆಳೆಯುವ ಬಲ, ಅಮಲಿನಂತಹ ಉನ್ಮತ್ತತೆ ಅಥವಾ ಮೈಮರೆಯುವಿಕೆಯು ಕೂಡಾ ಬಯಕೆಯ ಶಕ್ತಿಯಾಗಿ ಕೆಲಸ ಮಾಡುತ್ತವೆ.

ಎಚ್ಚರಿಕೆ ಮತ್ತು ವಿವೇಚನೆಯಿಂದ ಮನೋತಂತ್ರಗಳಾಗಿರುವ ಈ ಪದರಗಳನ್ನು ಸೀಳಿ ನೋಡುವ ಅರಿವು ನಮಗೆ ಬೇಕಿದೆ. ಇದೊಂದು ಮಾನಸಿಕ ಸರಪಳಿ. ಈ ಸರಪಳಿಯ ಕೊಂಡಿಗಳು ಬೆಸೆದಿರುವ ರಚನೆಯನ್ನು ಅರಿಯುವ ಮೂಲಕ ಎಚ್ಚರಿಕೆಯ ಸಂಕೇತಗಳನ್ನು, ತಂತ್ರಗಾರಿಕೆಗಳನ್ನು, ದೃಷ್ಟಿಕೋನ ಮತ್ತು ನಡವಳಿಕೆಗಳ ಸ್ವರೂಪಗಳನ್ನು ಹಾಗೂ ಪರಿಣಾಮಕಾರಿಯಾಗಿರುವ ಫಲಿತಗಳನ್ನು ಗುರುತಿಸಬಹುದಾಗಿದೆ.

ಬಯಕೆಯ ಮೊದಲನೆಯ ಪದರವನ್ನಾಗಿ ಅಗತ್ಯ ಎಂಬುದನ್ನು ಗುರುತಿಸೋಣ. ಭೌತಿಕವಾಗಿ ಮತ್ತು ಭಾವನಾತ್ಮಕವಾಗಿರುವ ಯಾವುದೇ ಜೀವಿಯ ಆಹಾರ, ನಿದ್ರೆ, ಆಶ್ರಯ ಮತ್ತು ಸಂಬಂಧಗಳ ಅನಿವಾರ್ಯತೆಯನ್ನೇ ಅಗತ್ಯ ಎನ್ನುವುದು. ಈ ಅಗತ್ಯವು ಪೂರೈಕೆಯಾಗದಿದ್ದರೆ ಸಂಕಟ ಅಥವಾ ಯಾತನೆಯಾಗಿ ಅದರಿಂದ ಬಳಲಿಕೆ ಉಂಟಾಗುವುದು. ಈ ಬಳಲಿಕೆ ಜೀವಿಯನ್ನು ದುರ್ಬಲಗೊಳಿಸುವುದೇ ಅಲ್ಲದೆ ಕೆಲವೊಮ್ಮೆ ನಾಶಕ್ಕೂ ಕಾರಣವಾಗಬಹುದು.

ಬಯಕೆಯ ಎರಡನೆಯ ಪದರವಾಗಿ ಆಸೆಗಳನ್ನು ಗುರುತಿಸಬಹುದು. ಇವು ಇರುವ ಅಗತ್ಯವನ್ನೇ ವೈಭವೀಕರಿಸುವ ವಿಷಯಗಳಾಗಿವೆ. ಕೆಲವೊಮ್ಮೆ ಇವು ಭೋಗದ ವಿಷಯಗಳು. ಇವು ಉಳಿಯುವಿಕೆ ಎಂಬ ಕಾರಣಕ್ಕಾಗಿ ಅಷ್ಟು ಇಂಬು ಕೊಡುವಂತಹುದ್ದೇನಲ್ಲ. ಉದಾಹರಣೆಗೆ ಉಡುಗೆ ಎಂಬುದು ಇಂತಹ ಬ್ರಾಂಡ್ ಅಥವಾ ಇಂತಹ ಸಿರಿವಂತಿಕೆಯ ವಸ್ತುವಿನಿಂದ ತಯಾರಾಗಿರುವುದು ಎಂಬ ಹೆಗ್ಗಳಿಕೆ. ಒಂದು ರೀತಿಯಲ್ಲಿ ಹೇಳುವುದಾದರೆ ಆಸೆ ಎಂಬುದು ಸಹಜ ಅಲ್ಲದಿದ್ದರೂ ಸಾಮಾನ್ಯವಾದದ್ದು ಮತ್ತು ಕೆಡುಕೇನೂ ಉಂಟುಮಾಡದಿರುವಂತಹ ತಟಸ್ಥ ಗುಣವುಳ್ಳದ್ದು.

ಕಾಮನೆ ಅಥವಾ ಗೀಳು ಎಂಬುದು ಬಯಕೆಯ ಮೂರನೆಯ ಪದರ. ತಾನಾಗಿ ಪುನರಾವರ್ತಿತವಾಗುವ ಆಲೋಚನೆಗಳು, ಕಡುಬಯಕೆಗಳು ಉಂಟಾಗುತ್ತಾ ಒತ್ತಡ ಮತ್ತು ಆತಂಕ ಉಂಟುಮಾಡುವುದು ಇದರ ಕೆಲಸ. ಅಂತಹ ಒತ್ತಡದಿಂದ ಹೊರಗೆ ಬರಲು ಮತ್ತು ಆತಂಕವನ್ನು ನಿವಾರಿಸಿಕೊಳ್ಳಲು ಕೆಲವೊಂದು ಪುನರಾವರ್ತಿತ ನಡವಳಿಕೆಗಳು ತಲೆದೋರುತ್ತವೆ. ಇದನ್ನೇ ಕಾಮನೆ (ಲಸ್ಟ್) ಅಥವಾ ಗೀಳು (ಒಬ್ಸೆಷನ್) ಎನ್ನುವುದು. ಇದರಲ್ಲಿ ಅಪಾಯಕ್ಕೆ ಕಾರಣವಾಗುವಂತಹ ಸಾಧ್ಯತೆಗಳು ಇರುತ್ತವೆ.

ಇನ್ನು ಬಯಕೆಯ ಕೊನೆಯ ಮತ್ತು ಅಪಾಯಕಾರಿಯಾಗುವ ಎಲ್ಲಾ ಸಾಧ್ಯತೆಗಳನ್ನು ಹೊಂದಿರುವ ಪದರವೆಂದರದು ವ್ಯಸನ ಅಥವಾ ಅಡಿಕ್ಷನ್. ವ್ಯಕ್ತಿಯು ತನ್ನ ತೃಪ್ತಿಗಾಗಿ ವಸ್ತುವನ್ನು ಅಥವಾ ವರ್ತನೆಗಳನ್ನು ವಿಪರೀತವಾಗಿ ಅವಲಂಬಿಸುವುದು ಈ ವ್ಯಸನದ ಮುಖ್ಯ ಗುಣ. ಮಾದಕವಸ್ತುಗಳು, ಲೈಂಗಿಕತೆ, ಜೂಜು, ಅಹಂಕಾರದ ನಡವಳಿಕೆಗಳು; ಹೀಗೆ ಹಲವು ವಿಷಯಗಳು ಇದರ ವ್ಯಾಪ್ತಿಯಲ್ಲಿ ಬರುತ್ತವೆ. ಇದು ಕಾಮನೆ ಅಥವಾ ಗೀಳಿನ ವಿಕಸಿತ ಮತ್ತು ಅಂತಿಮ ರೂಪ. ಇದು ಮೆದುಳು ಮತ್ತು ನರಗಳ ಮೇಲೆಲ್ಲಾ ಪ್ರಭಾವ ಬೀರಿ, ಅವುಗಳ ಮೂಲಕವೇ ರೂಢಿಗೊಂಡು, ತನ್ನನ್ನು ತಾನೇ ನಾಶಪಡಿಸಿಕೊಳ್ಳುವಷ್ಟರ ಮಟ್ಟಿಗೆ ತನ್ನ ಇರುವನ್ನು ಗಟ್ಟಿಗೊಳಿಸಿಕೊಳ್ಳುವುದು.

ಒಬ್ಬ ವ್ಯಕ್ತಿಯು ತನ್ನ ಅರಿವಿನ ಪರಿಧಿಯಲ್ಲಿ ಮಾಡಬೇಕಾಗಿರುವ ಮೊದಲನೆಯ ಕೆಲಸವೇ ತನ್ನಲ್ಲಿ ಉಂಟಾಗಿರುವ ಬಯಕೆ ಯಾವ ಪದರದಲ್ಲಿ ಹೊಕ್ಕಿದೆ ಎಂದು ನೋಡಿಕೊಳ್ಳುವುದು. ಈ ವಿವೇಚನೆ ಉಂಟಾದರೆ ಎಷ್ಟೋ ಪ್ರಮಾದಗಳನ್ನು ತಡೆಯಬಹುದಾಗಿರುತ್ತದೆ ಮತ್ತು ಅನಗತ್ಯವಾದ ಒಳ ಹೊರಗಿನ ಸಂಘರ್ಷವನ್ನು ಇಲ್ಲವಾಗಿಸಿಕೊಳ್ಳಬಹುದಾಗುತ್ತದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Contributor - ಯೋಗೇಶ್ ಮಾಸ್ಟರ್,

contributor

Similar News

ಬೇರುಗಳು

ಒಂಟಿ

ತಿರುಗುಪಾಳಿ