ಭಾರತೀಯ ಕೈದಿಗಳ ತ್ವರಿತ ಬಿಡುಗಡೆಗೆ ಪಾಕಿಸ್ತಾನಕ್ಕೆ ಮನವಿ

Update: 2023-01-01 16:31 GMT

ಹೊಸದಿಲ್ಲಿ,ಜ.1: ಪಾಕ್ ಜೈಲುಗಳಲ್ಲಿರುವ 631 ಭಾರತೀಯ ಮೀನುಗಾರರು ಮತ್ತು  ಇಬ್ಬರು ನಾಗರಿಕರನ್ನು ತ್ವರಿತವಾಗಿ ಬಿಡುಗಡೆಗೊಳಿಸಿ ಸ್ವದೇಶಕ್ಕೆ ರವಾನಿಸುವಂತೆ ಭಾರತವು ರವಿವಾರ ಪಾಕಿಸ್ತಾನಕ್ಕೆ ಮನವಿ ಮಾಡಿಕೊಂಡಿದೆ. ಈ ಕೈದಿಗಳು ತಮ್ಮ ಜೈಲುಶಿಕ್ಷೆಯನ್ನು ಪೂರ್ಣಗೊಳಿಸಿದ್ದು,ಅವರ ರಾಷ್ಟ್ರೀಯತೆಯನ್ನು ದೃಢಪಡಿಸಿ ಪಾಕಿಸ್ತಾನಕ್ಕೆ ತಿಳಿಸಲಾಗಿದೆ.

ಪಾಕ್ ವಶದಲ್ಲಿರುವ,ಭಾರತೀಯರು ಎನ್ನಲಾಗಿರುವ 30 ಮೀನುಗಾರರು ಮತ್ತು 22 ನಾಗರಿಕರಿಗೆ ತಕ್ಷಣ ರಾಯಭಾರ ಕಚೇರಿಯನ್ನು ಸಂಪರ್ಕಿಸಲು ಅವಕಾಶವನ್ನು ಒದಗಿಸುವಂತೆಯೂ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಪಾಕಿಸ್ತಾನವನ್ನು ಕೇಳಿಕೊಂಡಿದೆ.

ರಾಯಭಾರ ಕಚೇರಿ ಸಂಪರ್ಕಕ್ಕೆ ಅವಕಾಶ ಕುರಿತು 2008ರ ಒಪ್ಪಂದದಂತೆ ಈ ಮನವಿಗಳನ್ನು ಮಾಡಿಕೊಳ್ಳಲಾಗಿದೆ. ಈ ಒಪ್ಪಂದದಡಿ ಭಾರತ ಮತ್ತು ಪಾಕಿಸ್ತಾನಗಳು ಪ್ರತಿ ವರ್ಷ ಜ.1 ಮತ್ತು ಜು.1ರಂದು ತಮ್ಮ ವಶದಲ್ಲಿರುವ ನಾಗರಿಕ ಕೈದಿಗಳು ಮತ್ತು ಮೀನುಗಾರರ ಪಟ್ಟಿಯನ್ನು ಪರಸ್ಪರ ವಿನಿಮಯ ಮಾಡಿಕೊಳ್ಳುತ್ತವೆ.

ಪ್ರಸ್ತುತ ತನ್ನ ವಶದಲ್ಲಿರುವ ಪಾಕಿಸ್ತಾನದ 339 ನಾಗರಿಕರು ಮತ್ತು 95 ಮೀನುಗಾರರ ಪಟ್ಟಿಯನ್ನು ಭಾರತವು ಹಂಚಿಕೊಂಡಿದೆ. ಇದೇ ರೀತಿ ಪಾಕಿಸ್ತಾನವು ತನ್ನ ವಶದಲ್ಲಿರುವ ಭಾರತೀಯ ಅಥವಾ ಭಾರತೀಯರು ಎಂದು ನಂಬಲಾಗಿರುವ 51 ನಾಗರಿಕರು ಮತ್ತು 654 ಮೀನುಗಾರರ ಪಟ್ಟಿಯನ್ನು ಹಂಚಿಕೊಂಡಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ರವಿವಾರ ತಿಳಿಸಿದೆ.

ಮೀನುಗಾರರು ಸೇರಿದಂತೆ 71 ಪಾಕ್ ಕೈದಿಗಳ ರಾಷ್ಟ್ರೀಯತೆಯನ್ನು ದೃಢೀಕರಿಸಲು ತ್ವರಿತ ಅಗತ್ಯ ಕ್ರಮವನ್ನು ಕೈಗೊಳ್ಳುವಂತೆಯೂ ಭಾರತ ಸರಕಾರವು ಪಾಕಿಸ್ತಾನ ಸರಕಾರವನ್ನು ಆಗ್ರಹಿಸಿದೆ. ಈ ಕೈದಿಗಳ ರಾಷ್ಟ್ರೀಯತೆ ಕುರಿತು ಪಾಕಿಸ್ತಾನದಿಂದ ದೃಢೀಕರಣದ ವಿಳಂಬದಿಂದಾಗಿ ಅವರ ವಾಪಸಾತಿಯು ಬಾಕಿಯುಳಿದಿದೆ.

ಎಲ್ಲ ಭಾರತೀಯ ಅಥವಾ ಭಾರತೀಯರೆಂದು ನಂಬಲಾಗಿರುವ ನಾಗರಿಕ ಕೈದಿಗಳು ಮತ್ತು ಮೀನುಗಾರರ ಬಿಡುಗಡೆ ಮತ್ತು ಸ್ವದೇಶಕ್ಕೆ ಅವರ ವಾಪಸಾತಿ ಬಾಕಿಯುಳಿದಿರುವಂತೆ ಅವರ ಸುರಕ್ಷತೆ,ಭದ್ರತೆ ಮತ್ತು ಯೋಗಕ್ಷೇಮವನ್ನು ಖಚಿತಪಡಿಸಿಕೊಳ್ಳುವಂತೆಯೂ ಪಾಕಿಸ್ತಾನವನ್ನು ಕೋರಿಕೊಳ್ಳಲಾಗಿದೆ ಎಂದು ಸಚಿವಾಲಯವು ತಿಳಿಸಿದೆ.

Similar News