ಜಾರ್ಖಂಡ್: ಜಾನುವಾರು ಕಳವು ಆರೋಪ; ವ್ಯಕ್ತಿಯನ್ನು ಥಳಿಸಿ ಹತ್ಯೆಗೈದ ಗುಂಪು

Update: 2023-01-01 16:44 GMT

ಗಿರಿಡಿಹ, ಜ. 1: ಜಾನುವಾರು ಕಳವುಗೈದ ಆರೋಪದಲ್ಲಿ ವ್ಯಕ್ತಿಯೋರ್ವನನ್ನು ಗುಂಪೊಂದು ಥಳಿಸಿ ಹತ್ಯೆಗೈದ ಘಟನೆ ಜಾರ್ಖಂಡ್ ನ ಗಿರಿಡಿಹ ಜಿಲ್ಲೆಯ ಸಾದಿ ಗವಾರೊದಲ್ಲಿ ನಡೆದಿದೆ.

ಮೃತಪಟ್ಟ ವ್ಯಕ್ತಿಯನ್ನು ವಿನೋದ್ ಚೌಧರಿ ಎಂದು ಗುರುತಿಸಲಾಗಿದೆ. ಈತ ಜಾರ್ಖಂಡ್ ನ ಹಝಾರಿಬಾಗ್ ಜಿಲ್ಲೆಯ ಕಟಾಮ್ದಾಗ್ ಉಪವಿಭಾಗದ ಸಿಮರಿಯಾ ಗ್ರಾಮದ ನಿವಾಸಿ. ವಿನೋದ್ ಕಳವು ಸೇರಿದಂತೆ ಹಲವು ಕ್ರಿಮಿನಲ್ ಪ್ರಕರಣಗಳ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.

ಡಿಸೆಂಬರ್ 31ರಂದು ರಾತ್ರಿ ಬಿರಾಲಾಲ್ ಟುಡು ಹಾಗೂ ಅವರ ಕುಟುಂಬ ನಿದ್ರಿಸಿದ್ದ ಸಂದರ್ಭ  ವಿನೋದ್ ಮನೆ ಪ್ರವೇಶಿಸಿದ್ದಾನೆ. ಬಿರಾಲಾಲ್ ಆಡು ಹಾಗೂ ದನಗಳನ್ನು ಮನೆಯ ಒಳಗೆ ಕಟ್ಟಿ ಹಾಕಿದ್ದ. ವಿನೋದ್ ಆಡುಗಳನ್ನು ಬಿಚ್ಚಿದಾಗ ಜಾನುವಾರುಗಳು ಕೂಗಲು ಆರಂಭಿಸಿದವು ಎಂದು ಪೊಲೀಸರು ತಿಳಿಸಿದ್ದಾರೆ.

ಜಾನುವಾರುಗಳ ಸದ್ದು ಕೇಳಿ ಬಿರಲಾಲ್ ಟುಡು ಎಚ್ಚೆತ್ತ ಹಾಗೂ ಬೊಬ್ಬೆ ಹಾಕಿದ. ಬಿರಲಾಲ್ ತನ್ನ ಕುಟುಂಬದೊಂದಿಗೆ ನಿದ್ರಿಸಿದ್ದ ಕೊಠಡಿಯಿಂದ ಹೊರಬರಲು ಪ್ರಯತ್ನಿಸಿದ. ಆದರೆ, ಹೊರಗಡೆಯಿಂದ ಲಾಕ್ ಹಾಕಲಾಗಿತ್ತು. ಬಿರಲಾಲ್ ಬಾಗಿಲು ಒಡೆದು ಹೊರಬಂದ. ಬಳಿಕ ವಿನೋದ್ ಹಾಗೂ ಬಿರಲಾಲ್ ವಿರುದ್ಧ ಘರ್ಷಣೆ ನಡೆಯಿತು. ಈ ಕೋಲಾಹಲದ ಸದ್ದಿನಿಂದ ಎಚ್ಚೆತ್ತುಕೊಂಡ ಗ್ರಾಮದ ನಿವಾಸಿಗಳು ಬಿರಲಾಲ್ ಮನೆ ಮುಂದೆ ಸೇರಿದರು. ವಿನೋದ್ ಬಿರಲಾಲ್ ನ ಕೈಯಿಂದ ಬಿಡಿಸಿಕೊಂಡು ಪರಾರಿಯಾಗಲು ಪ್ರಯತ್ನಿಸಿದ. ಈ ಸಂದರ್ಭ ಗುಂಪು ಆತನನ್ನು ಥಳಿಸಿ ಹತ್ಯೆಗೈದಿದೆ.

ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. 

Similar News