ಜಮ್ಮು: ಉಗ್ರರ ದಾಳಿಗೆ ನಾಲ್ವರು ಬಲಿ

Update: 2023-01-02 02:37 GMT

ಜಮ್ಮು/ ಶ್ರೀನಗರ: ಜಮ್ಮು ವಿಭಾಗದ ರಾಜೌರಿ ಸಮೀಪ ಉಗ್ರರು ನಡೆಸಿದ ಭೀಕರ ದಾಳಿಯಲ್ಲಿ ನಾಲ್ಕು ಮಂದಿ ಗ್ರಾಮಸ್ಥರು ಮೃತಪಟ್ಟು, ಒಂಬತ್ತು ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ.

ಭಾನುವಾರ ರಾತ್ರಿ ಬೆಟ್ಟದ ತಪ್ಪಲಿನ ಅಪ್ಪರ್ ಧಾಂಗ್ರಿ ಎಂಬ ಗ್ರಾಮಕ್ಕೆ ಎಸ್‌ಯುವಿಯಲ್ಲಿ ಆಗಮಿಸಿದ ಉಗ್ರರು ರಾಮ ದೇವಸ್ಥಾನದ ಸಮೀಪದ ಮೂರು ಮನೆಗಳ ಮೇಲೆ ದಾಳಿ ನಡೆಸಿದರು ಎಂದು ತಿಳಿದು ಬಂದಿದೆ.

ಸ್ಥಳೀಯರು ತಕ್ಷಣವೇ ಗಾಯಾಳುಗಳನ್ನು ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಕರೆದೊಯ್ದರು. ಆ ವೇಳೆಗಾಗಲೇ ಮೂವರು ಮೃತಪಟ್ಟಿದ್ದರು. ಗಾಯಾಳುಗಳ ಪೈಕಿ ಹಲವು ಮಂದಿಗೆ ಗಂಭೀರ ಗುಂಡಿನ ಗಾಯಗಳಾಗಿವೆ ಎಂದು ವೈದ್ಯಕೀಯ ಅಧೀಕ್ಷಕ ಡಾ.ಮೆಹ್ಮೂದ್ ಹೇಳಿದ್ದಾರೆ. ತಡರಾತ್ರಿ ಮತ್ತೊಬ್ಬ ಗಾಯಾಳು ಮೃತಪಟ್ಟರು.

ಮೃತಪಟ್ಟವರನ್ನು ಸತೀಶ್ ಕುಮಾರ್ (45), ದೀಪಕ್ ಕುಮಾರ್ (23), ಪ್ರೀತಂಲಾಲ್ (57) ಎಂದು ಗುರುತಿಸಲಾಗಿದೆ. ಆಸ್ಪತ್ರೆಯಲ್ಲಿ ಮೃತಪಟ್ಟ ಗಾಯಾಳುವಿನ ಗುರುತು ಪತ್ತೆಯಾಗಿಲ್ಲ. ಗಾಯಾಳುಗಳಲ್ಲಿ ಶಿಶುಪಾಲ (32), ಪವನ್ ಕುಮಾರ್ (38), ರೋಹಿತ್ ಪಂಡಿತ್ (27), ಸರೋಜ್ ಬಾಲಾ (35), ರಿಧಮ್ ಶರ್ಮಾ (17) ಮತ್ತು ಪವನ್ ಕುಮಾರ್ (32) ಸೇರಿದ್ದಾರೆ. ತೀವ್ರವಾಗಿ ಗಾಯಗೊಂಡವರನ್ನು ವಿಮಾನದ ಮೂಲಕ ಜಮ್ಮು ನಗರಕ್ಕೆ ಕರೆದೊಯ್ಯಲಾಗಿದೆ. ಈ ಹತ್ಯೆಯನ್ನು ಖಂಡಿಸಿ ವಿವಿಧ ಸಂಘಟನೆಗಳು ಸೋಮವಾರ ರಾಜೌರಿ ಜಿಲ್ಲಾ ಬಂದ್‌ಗೆ ಕರೆ ನೀಡಿವೆ.

ಅಪ್ಪರ್ ದಾಂಗ್ರಿ ಗ್ರಾಮದ ಮನೆಗಳನ್ನು ಗುರಿ ಮಾಡಿ ಇಬ್ಬರು ಉಗ್ರರು ದಾಳಿ ನಡೆಸಿದರು. ಸಿಆರ್‌ಪಿಎಫ್ ಹಾಗೂ ಸೇನಾ ತುಕಡಿಗಳು ಇಡೀ ಪ್ರದೇಶವನ್ನು ಸುತ್ತುವರಿದಿದ್ದು, ಉಗ್ರರನ್ನು ಶೀಘ್ರವೇ ತಟಸ್ಥಗೊಳಿಸಲಿದ್ದೇವೆ. ವಿವರಗಳು ಇನ್ನಷ್ಟೇ ಲಭ್ಯವಾಗಬೇಕಿದ್ದು, ಶೋಧ ಕಾರ್ಯಾಚರಣೆ ಮುಂದುವರಿದಿದೆ ಎಂದು ಜಮ್ಮು ವಲಯದ ಎಡಿಜಿಪಿ ಮುಖೇಶ್ ಸಿಂಗ್ ವಿವರಿಸಿದ್ದಾರೆ.

Similar News