ಜಮ್ಮು: ಉಗ್ರರ ದಾಳಿಗೆ ಬಲಿಯಾದ ವ್ಯಕ್ತಿಯ ಮನೆಯಲ್ಲಿ ಸ್ಫೋಟ, ಮಗು ಮೃತ್ಯು ಹಲವರಿಗೆ ಗಾಯ

Update: 2023-01-02 05:22 GMT

ಶ್ರೀನಗರ: ಜಮ್ಮುವಿನ ರಾಜೌರಿಯಲ್ಲಿ ರವಿವಾರ ನಡೆದ ಉಗ್ರರ ದಾಳಿಗೆ ಬಲಿಯಾದ ವ್ಯಕ್ತಿಯೊಬ್ಬರ ಮನೆಯಲ್ಲಿ ಸ್ಫೋಟ ಸಂಭವಿಸಿದ್ದು ಮಗುವೊಂದು ಸಾವನ್ನಪ್ಪಿದ್ದು, ಐವರು ಗಾಯಗೊಂಡಿದ್ದಾರೆ ಎಂದು NDTV ವರದಿ ಮಾಡಿದೆ.

"ಮೊದಲ ಗುಂಡಿನ ದಾಳಿ ನಡೆದ ಮನೆಯ ಬಳಿ ಸ್ಫೋಟ ಸಂಭವಿಸಿದೆ. ಐವರು ಗಾಯಗೊಂಡಿದ್ದಾರೆ. ಒಂದು ಮಗು ಗಾಯಗೊಂಡು ಸಾವನ್ನಪ್ಪಿದೆ. ಮತ್ತೊಬ್ಬರ ಸ್ಥಿತಿ ಗಂಭೀರವಾಗಿದೆ. ಮಾಧ್ಯಮ ಸಿಬ್ಬಂದಿ ಜಾಗರೂಕರಾಗಿರಲು ವಿನಂತಿಸಲಾಗಿದೆ. ಮತ್ತೊಂದು ಶಂಕಿತ ಐಇಡಿ ಗುರುತಿಸಲಾಗಿದೆ ಅದನ್ನು ತೆರವುಗೊಳಿಸಲಾಗುತ್ತಿದೆ" ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ರಾಜೌರಿ ಜಿಲ್ಲೆಯ ಡ್ಯಾಂಗ್ರಿ ಗ್ರಾಮದಲ್ಲಿ ಸೋಮವಾರ ಸಂಭವಿಸಿದ ಸ್ಫೋಟದಲ್ಲಿ ಹಲವಾರು ಜನರು ಗಾಯಗೊಂಡಿದ್ದಾರೆ.  ರವಿವಾರದ  ಭಯೋತ್ಪಾದಕ ದಾಳಿಗೆ ಬಲಿಯಾದ ವ್ಯಕ್ತಿಯ ಮನೆಯಲ್ಲಿ ಸ್ಫೋಟ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ರಾಜೌರಿ ಜಿಲ್ಲೆಯಲ್ಲಿ ನಡೆದ ಉಗ್ರರ ದಾಳಿಯಲ್ಲಿ ಗಾಯಗೊಂಡ ನಾಗರಿಕರೊಬ್ಬರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ನಂತರ ಸಾವಿನ ಸಂಖ್ಯೆ ನಾಲ್ಕಕ್ಕೆ ಏರಿದೆ.

ಘಟನೆಯಲ್ಲಿ ಗಾಯಗೊಂಡ ಇತರ ಒಂಬತ್ತು ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ ಮತ್ತು ಅವರಲ್ಲಿ ಕೆಲವರ ಸ್ಥಿತಿ "ತುಂಬಾ ಗಂಭೀರವಾಗಿದೆ" ಎಂದು ರಾಜೌರಿಯ ಸರಕಾರಿ ವೈದ್ಯಕೀಯ ಕಾಲೇಜಿನ ವೈದ್ಯರು ತಿಳಿಸಿದ್ದಾರೆ.

ತೀವ್ರವಾಗಿ ಗಾಯಗೊಂಡ ಕೆಲವರನ್ನು ವಿಮಾನದಲ್ಲಿ ಜಮ್ಮುವಿಗೆ ರವಾನಿಸಲಾಗಿದೆ.

Similar News