ನೋಟು ನಿಷೇಧ ಕುರಿತು ಸುಪ್ರೀಂಕೋರ್ಟ್ ತೀರ್ಪಿಗೆ ಕಾಂಗ್ರೆಸ್ ಪ್ರತಿಕ್ರಿಯಿಸಿದ್ದು ಹೀಗೆ...

Update: 2023-01-02 10:13 GMT

ಹೊಸದಿಲ್ಲಿ: ನೋಟು ಅಮಾನ್ಯೀಕರಣದ ಕುರಿತಾದ ಸುಪ್ರೀಂ ಕೋರ್ಟ್‌ನ ತೀರ್ಪು ಕೇವಲ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಗೆ ಸಂಬಂಧಿಸಿದೆ. ನ್ಯಾಯಾಲಯವು ನೋಟು ನಿಷೇಧವನ್ನು ಎತ್ತಿಹಿಡಿದಿದೆ ಎಂದು ಹೇಳುವುದು "ಸರಿಯಲ್ಲ" ಎಂದು ಕಾಂಗ್ರೆಸ್ ಇಂದು ಹೇಳಿದೆ.

4-1 ಬಹುಮತದ ತೀರ್ಪಿನಲ್ಲಿ ನರೇಂದ್ರ ಮೋದಿ ಸರಕಾರದ 2016 ರ ನೋಟು ನಿಷೇಧ ನಿರ್ಧಾರವನ್ನು ನ್ಯಾಯಾಲಯವು ಬೆಂಬಲಿಸಿದ ಸ್ವಲ್ಪ ಸಮಯದ ನಂತರ ಪ್ರತಿಕ್ರಿಯಿಸಿದ  ಪ್ರಮುಖ ವಿರೋಧ ಪಕ್ಷ ಕಾಂಗ್ರೆಸ್,  ನೋಟು ಅಮಾನ್ಯೀಕರಣದ ಉದ್ದೇಶಗಳನ್ನು ಪೂರೈಸಿದೆಯೇ ಎಂಬುದರ ಕುರಿತು ತೀರ್ಪು ಏನನ್ನೂ ಹೇಳುವುದಿಲ್ಲ ಎಂದು ಹೇಳಿದೆ.

"ನವೆಂಬರ್ 8, 2016 ರಂದು ನೋಟು ಅಮಾನ್ಯೀಕರಣವನ್ನು ಘೋಷಿಸುವ ಮೊದಲು ಆರ್‌ಬಿಐ ಕಾಯಿದೆ, 1934 ರ ಸೆಕ್ಷನ್ 26 (2) ಅನ್ನು ಸರಿಯಾಗಿ ಅನ್ವಯಿಸಲಾಗಿದೆಯೇ ಅಥವಾ ಇಲ್ಲವೇ ಎಂಬುದರ ಕುರಿತು ಮಾತ್ರ ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ ತಿಳಿಸಿದೆ. ಹೆಚ್ಚೇನೂ ಇಲ್ಲ, ಕಡಿಮೆ ಇಲ್ಲ"ಎಂದು ಕಾಂಗ್ರೆಸ್‌ನ ಸಂವಹನ ಮುಖ್ಯಸ್ಥ ಹಾಗೂ ಸಂಸದ ಜೈರಾಮ್ ರಮೇಶ್  ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

1,000 ಹಾಗೂ 500 ರೂ. ಮುಖಬೆಲೆಯ ನೋಟುಗಳನ್ನು ಅಮಾನ್ಯಗೊಳಿಸುವ ಕೇಂದ್ರದ ಆದೇಶವನ್ನು "ಕಾನೂನುಬಾಹಿರ" ಎಂದು ಪರಿಗಣಿಸಿದ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರ ವಿಭಿನ್ನ ತೀರ್ಪನ್ನು ಕಾಂಗ್ರೆಸ್ ನಾಯಕರು ಉಲ್ಲೇಖಿಸಿದ್ದಾರೆ.

 "ಅತ್ಯಂತ  ಹಾನಿಕಾರಕ ನಿರ್ಧಾರವಾಗಿರುವ ನೋಟು ನಿಷೇಧದ  ಪರಿಣಾಮದ ಬಗ್ಗೆ ತೀರ್ಪಿನಲ್ಲಿ ಏನನ್ನೂ ಹೇಳಿಲ್ಲ, ನೋಟು ನಿಷೇಧ ಎಂಎಸ್ ಎಂಇಗಳನ್ನು ದುರ್ಬಲಗೊಳಿಸಿತು. ಅಸಂಘಟಿತ ವಲಯವನ್ನು ಹಾಗೂ  ಲಕ್ಷಗಟ್ಟಲೆ ಜೀವನೋಪಾಯವನ್ನು ನಾಶಪಡಿಸಿತು" ಎಂದು ರಮೇಶ್ ಹೇಳಿದರು.

Similar News