ರಿಷಭ್ ಪಂತ್ ಕಾರು ಅಪಘಾತದ ನಂತರ ತರಾತುರಿಯಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚಿದ NHAI

Update: 2023-01-02 09:12 GMT

ರೂರ್ಕಿ/ಡೆಹ್ರಾಡೂನ್: ರಸ್ತೆ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕ್ರಿಕೆಟ್ ಪಟು ರಿಷಭ್ ಪಂತ್‌ರನ್ನು (Rishabh Pant) ಭೇಟಿ ಮಾಡಿದ ದಿಲ್ಲಿ ಮತ್ತು ಜಿಲ್ಲಾ ಕ್ರಿಕೆಟ್ ಒಕ್ಕೂಟ ತಂಡವು, ಭೇಟಿಯ ನಂತರ ರಿಷಭ್ ಪಂತ್ ಅವರು ದಿಲ್ಲಿ-ಡೆಹ್ರಾಡೂನ್ ಹೆದ್ದಾರಿಯಲ್ಲಿದ್ದ ರಸ್ತೆ ಗುಂಡಿಯನ್ನು ತಪ್ಪಿಸುವ ಪ್ರಯತ್ನದಲ್ಲಿ ಅಪಘಾತಕ್ಕೀಡಾಗಿದ್ದಾರೆ ಎಂದು ಹೇಳಿಕೆ ನೀಡಿತ್ತು. ಇದರ ಬೆನ್ನಿಗೇ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಅಪಘಾತ ಸಂಭವಿಸಿದ ಜಾಗದಲ್ಲಿ ಶನಿವಾರ ರಾತ್ರಿ ತರಾತುರಿಯಲ್ಲಿ ರಸ್ತೆ ಗುಂಡಿ ರಿಪೇರಿ ಮಾಡಿದೆ. ಈ ವಿಷಯವನ್ನು ಸ್ಥಳೀಯ ಗ್ರಾಮಸ್ಥರು ಖಚಿತಪಡಿಸಿದ್ದು, ಈ ಕುರಿತು ರವಿವಾರ ಮಾಧ್ಯಮ ಪ್ರತಿನಿಧಿಗಳ ಗಮನಕ್ಕೆ ತಂದಿದ್ದಾರೆ ಎಂದು timesofindia.com ವರದಿ ಮಾಡಿದೆ.

ಶುಕ್ರವಾರ ಪಂತ್ ಅಪಘಾತಕ್ಕೀಡಾಗಿದ್ದ ಗುರುಕುಲ್ ನಸ್ರಣ್ ಪ್ರದೇಶದ ನಿವಾಸಿಗಳು ಈ ಕುರಿತು ಮಾಹಿತಿ ನೀಡಿದ್ದು, "ಇಲ್ಲಿನ ರಸ್ತೆಯುದ್ದಕ್ಕೂ ಸಣ್ಣ ಗಾತ್ರದ ಸುಮಾರು ಅರ್ಧ ಡಜನ್ ರಸ್ತೆ ಗುಂಡಿಗಳಿದ್ದು, ಈ ಮುನ್ನ ಕೂಡಾ ಇಲ್ಲಿ ಅಪಘಾತಗಳು ಸಂಭವಿಸಿವೆ" ಎಂದು ತಿಳಿಸಿದ್ದಾರೆ.

"ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಕೂಡಲೇ ರಸ್ತೆ ಗುಂಡಿಗಳನ್ನು ರಿಪೇರಿ ಮಾಡಿದ್ದರೂ, ಅದಷ್ಟೇ ಸಾಲದು. ಭವಿಷ್ಯದಲ್ಲೂ ಕೂಡಾ ಇಲ್ಲಿ ಅಪಘಾತಗಳು ಸಂಭವಿಸುತ್ತಲೇ ಇರುತ್ತವೆ" ಎಂದು ಗ್ರಾಮಸ್ಥರೊಬ್ಬರು ಹೇಳಿದ್ದಾರೆ.

"ಸ್ಥಳಿಯವಾಗಿ "ರಾಜ್ವಾ" ಎಂದು ಕರೆಯಲಾಗುವ ಕಿರು ನಾಲೆಯೊಂದು  ಹೆದ್ದಾರಿಯ ಎಡಭಾಗಕ್ಕೆ ಹೊಂದಿಕೊಂಡಿದ್ದು, ಅಲ್ಲಿಂದ ಅದು 45 ಡಿಗ್ರಿ ಕೋನದಲ್ಲಿ ಕೃಷಿ ಭೂಮಿಗಳಿಗೆ ತಿರುವು ಪಡೆಯುತ್ತದೆ. ಇಲ್ಲಿನ 40 ಮೀಟರ್ ಉದ್ದನೆಯ ರಸ್ತೆಯನ್ನು ಸಂಚಾರ ಪ್ರಾಧಿಕಾರಿಗಳು ಈ ಹಿಂದೆಯೇ 'ಅಪಘಾತ ವಲಯ' ಎಂದು ಘೋಷಿಸಿವೆ" ಎಂದು ತಿಳಿಸಿದ್ದಾರೆ.

"ಈ ಅಪಘಾತ ವಲಯಕ್ಕೆ ಹೊಂದಿಕೊಂಡಿರುವ ರಾಜ್ವಾ ನಾಲೆಯ ಬದಿಯಿಂದ ಕೊಂಚ ಮಟ್ಟಿನ ಜಾಗವನ್ನು ಸ್ವಾಧೀನಪಡಿಸಿಕೊಂಡು ಹೆದ್ದಾರಿಯನ್ನು ವಿಸ್ತರಿಸಿದರೆ, ಸಮರ್ಪಕ ಸೇವಾ ಪಥವನ್ನು ರೂಪಿಸಬಹುದು. ಇದರೊಂದಿಗೆ ಸಂಪರ್ಕ ರಸ್ತೆಯನ್ನೂ ವಿಲೀನಗೊಳಿಸಬಹುದು" ಎನ್ನುತ್ತಾರೆ ರೈತ ಮತ್ತು ಭಾರತೀಯ ಕಿಸಾನ್ ಸಂಘದ ಸದಸ್ಯರಾಗಿರುವ ಅರವಿಂದ್ ರಾಠಿ.

" ಮೊದಲಿಗೆ ಈ ಬಿಂದುವಿನಲ್ಲಿ ಹೆದ್ದಾರಿಯು ಕಿರಿದಾಗಿದೆ. ಎರಡನೆಯದಾಗಿ ಸಮತಟ್ಟಾಗಿಲ್ಲ. ಇದರೊಂದಿಗೆ ರಸ್ತೆ ಗುಂಡಿಗಳೂ ಇರುವುದರಿಂದ ವಾಹನ ಚಲಾಯಿಸುವುದು ಮತ್ತಷ್ಟು ಕ್ಲಿಷ್ಟಕರವಾಗಿದೆ" ಎನ್ನುತ್ತಾರೆ ಮತ್ತೊಬ್ಬ ಗ್ರಾಮಸ್ಥ ರಾಜೇಶ್ ಕುಮಾರ್ ಶರ್ಮ.

ಈ ಕುರಿತು ಪ್ರತಿಕ್ರಿಯಿಸಿರುವ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಪ್ರದೀಪ್ ಗುಸೇನ್, "ಶುಕ್ರವಾರ ಸಂಭವಿಸಿದ ಅಪಘಾತದಿಂದ ಉಂಟಾಗಿದ್ದ ಹಾನಿಯನ್ನು ಸರಿಪಡಿಸಲಾಗಿದೆ. ಈ ರಸ್ತೆಯ ಭಾಗವನ್ನು ರಿಪೇರಿಗೊಳಿಸುವಂತೆ ಪ್ರಾಧಿಕಾರದ ಆಡಳಿತವು ಸೂಚಿಸಿತ್ತು. ನಾವು ನಿಯಮಿತ ಅವಧಿಗೆ ರಸ್ತೆ ರಿಪೇರಿ ಕಾರ್ಯ ಕೈಗೊಳ್ಳುವುದರಿಂದ ರಸ್ತೆಯಲ್ಲಿ ಯಾವುದೇ ರಸ್ತೆ ಗುಂಡಿಗಳಿಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ.

ಕಳೆದ ಸೆಪ್ಟೆಂಬರ್‌ನಲ್ಲೂ ಕೂಡಾ ಇದೇ ಪ್ರದೇಶದಲ್ಲಿ ಬುಲಂದ್‌ಶಹರ್ ಶಾಸಕ ಅನಿಲ್ ಶರ್ಮ ಅವರ ಸಹೋದರ ಅಂಕಿತ್ ಶರ್ಮ ಚಲಾಯಿಸುತ್ತಿದ್ದ ಕಾರು ರಸ್ತೆ ವಿಭಜಕ ತಡೆಗೆ ಢಿಕ್ಕಿ ಹೊಡೆದು ಅಪಘಾತ ಸಂಭವಿಸಿತ್ತು.

ಇದನ್ನೂ ಓದಿ: ರಸ್ತೆ ಗುಂಡಿ ತಪ್ಪಿಸುವ ಪ್ರಯತ್ನದಲ್ಲಿ ಅಪಘಾತಕ್ಕೀಡಾದ ರಿಷಭ್ ಪಂತ್: ಉತ್ತರಾಖಂಡ ಸಿಎಂ

Similar News