ಕಾರಿನಡಿ ಬಿದ್ದ ಯುವತಿಯನ್ನು ಎಳೆದೊಯ್ದು ಕೊಂದ ಘಟನೆ: ಬಂಧಿತ ಆರೋಪಿಗಳಲ್ಲೋರ್ವ ಬಿಜೆಪಿ ಸದಸ್ಯ ಎಂದ ಆಪ್
ಹೊಸದಿಲ್ಲಿ: ಹೊಸ ವರ್ಷದ ಮೊದಲ ದಿನವೇ ದಿಲ್ಲಿಯ ಬೀದಿಯಲ್ಲಿ ಸ್ಕೂಟಿಯಿಂದ ಕಾರಿನ ಕೆಳಗೆ ಬಿದ್ದ 20 ವರ್ಷದ ಯುವತಿಯನ್ನು 12 ಕಿ.ಮೀ. ದೂರ ಎಳೆದೊಯ್ದು ಸಾಯಿಸಿರುವ ಘಟನೆಗೆ ಸಂಬಂಧಿಸಿ ಬಂಧಿತ ಆರೋಪಿಗಳಲ್ಲಿ ಒಬ್ಬಾತ ಬಿಜೆಪಿ ಸದಸ್ಯನಾಗಿದ್ದಾನೆ ಎಂದು ಆಮ್ ಆದ್ಮಿ ಪಕ್ಷ (ಎಎಪಿ) ಇಂದು ಆರೋಪಿಸಿದೆ.
ಸುಲ್ತಾನ್‌ಪುರಿಯಲ್ಲಿ ನಡೆದ ಈ ಆಘಾತಕಾರಿ ಘಟನೆಯ ಕುರಿತು ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಎಎಪಿಯ ಮುಖ್ಯ ವಕ್ತಾರ ಸೌರಭ್ ಭಾರದ್ವಾಜ್, "ಪ್ರಕರಣದಲ್ಲಿ ಬಂಧಿತರಾಗಿರುವ ಐವರು ಆರೋಪಿಗಳಲ್ಲಿ ಒಬ್ಬನಾದ ಮನೋಜ್ ಮಿತ್ತಲ್ ಬಿಜೆಪಿ ಸದಸ್ಯ. ಲೆಫ್ಟಿನೆಂಟ್ ಗವರ್ನರ್ ವಿನಯ್ ಕುಮಾರ್ ಸಕ್ಸೇನಾ ಹಾಗೂ ದಿಲ್ಲಿ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಉದ್ದೇಶಪೂರ್ವಕವಾಗಿ ಈ ಮಾಹಿತಿಯನ್ನು ಮರೆಮಾಚಿದ್ದಾರೆ'' ಎಂದು ಹೇಳಿದ್ದಾರೆ.
ಪ್ರಕರಣ ದಾಖಲಾಗಿರುವ ಮಂಗೋಲ್‌ಪುರಿ ಪೊಲೀಸ್ ಠಾಣೆಯ ಛಾಯಾಚಿತ್ರಗಳನ್ನು ಹಂಚಿಕೊಂಡಿರುವ ಭಾರದ್ವಾಜ್, ಪೊಲೀಸ್ ಠಾಣೆಯ ಪಕ್ಕದಲ್ಲಿಯೇ ಮಿತ್ತಲ್ ಭಾವಚಿತ್ರವನ್ನು ಹೊಂದಿರುವ ಹೋರ್ಡಿಂಗ್ ಇದೆ. ಅದರಲ್ಲಿರುವ ಮಿತ್ತಲ್ ನನ್ನು ಬಿಜೆಪಿ ಸದಸ್ಯ ಎಂದು ಗುರುತಿಸುವುದು ಸಾಧ್ಯವಾಗದಿರುವುದು ವಿಪರ್ಯಾಸ ಎಂದು ಹೇಳಿದರು.
ಎಎಪಿ ಆರೋಪದ ಕುರಿತು ಪ್ರತಿಕ್ರಿಯಿಸಿರುವ ದಿಲ್ಲಿ ಬಿಜೆಪಿಯ ಮಾಧ್ಯಮ ಘಟಕದ ಮುಖ್ಯಸ್ಥ ಹರೀಶ್ ಖುರಾನಾ, ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ತಪ್ಪಿತಸ್ಥರು ಯಾವುದೇ ಪಕ್ಷಕ್ಕೆ ಸೇರಿದವರಾಗಿದ್ದರೂ ಅವರಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ತಿಳಿಸಿದ್ದಾರೆ.