ನೋಟ್ ಬ್ಯಾನ್ ಕುರಿತ ಸುಪ್ರೀಂಕೋರ್ಟ್ ತೀರ್ಪಿನ ನಂತರ ಪಿ. ಚಿದಂಬರಂ ಹೇಳಿದ್ದೇನು?
ಹೊಸದಿಲ್ಲಿ: ಸುಪ್ರೀಂ ಕೋರ್ಟಿನ ಪಂಚ ಸದಸ್ಯರ ಪೀಠದ ಓರ್ವ ನ್ಯಾಯಾಧೀಶರು ನೋಟು ಅಮಾನ್ಯೀಕರಣ ನೀತಿಯನ್ನು ಒಪ್ಪದೇ ಇರುವುದು ಕೇಂದ್ರವನ್ನು ತರಾಟೆಗೆ ತೆಗೆದುಕೊಂಡಂತೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಮಾಜಿ ವಿತ್ತ ಸಚಿವ ಪಿ ಚಿದಂಬರಂ ಹೇಳಿದ್ದಾರೆ.
ಕೇಂದ್ರದ ನಿರ್ಧಾರವನ್ನು ಬಹುಮತದ ತೀರ್ಪಿನಲ್ಲಿ ನಾಲ್ಕು ಮಂದಿ ನ್ಯಾಯಮೂರ್ತಿಗಳು ಎತ್ತಿ ಹಿಡಿದಿದ್ದಾರಾದರೂ, ಸುಪ್ರೀಂ ಕೋರ್ಟ್ ಅಮಾನ್ಯೀಕರಣ ತೀರ್ಪಿನ ಔಚಿತ್ಯವನ್ನು ಎತ್ತಿ ಹಿಡಿದಿಲ್ಲ ಹಾಗೂ ಅದರ ನಿರೀಕ್ಷಿತ ಗುರಿ ಈಡೇರಿದೆ ಎಂದು ಹೇಳಿಲ್ಲ ಎಂದು ಚಿದಂಬರಂ ಹೇಳಿದ್ದಾರೆ. ವಾಸ್ತವವಾಗಿ ಸುಪ್ರೀಂ ಕೋರ್ಟಿನ ಪೀಠದ ನಾಲ್ಕು ಮಂದಿ ನ್ಯಾಯಮೂರ್ತಿಗಳು ಈ ಪ್ರಶ್ನೆಯಿಂದ ದೂರ ಸರಿದು ನಿಂತಿದ್ದಾರೆ ಎಂದು ಇಂದು ಸರಣಿ ಟ್ವೀಟ್‌ಗಳಲ್ಲಿ ಚಿದಂಬರಂ ಹೇಳಿದರು.
ಸುಪ್ರೀಂ ಕೋರ್ಟಿನ ಪೀಠದ ಐವರು ನ್ಯಾಯಮೂರ್ತಿಗಳ ಪೈಕಿ ಓರ್ವ ನ್ಯಾಯಮೂರ್ತಿಗಳ ಅಸಮ್ಮತಿಯ ತೀರ್ಪಿನ ಕುರಿತು ಉಲ್ಲೇಖಿಸಿದ ಚಿದಂಬರಂ "ಅಮಾನ್ಯೀಕರಣದ ಅಕ್ರಮವನ್ನು ಅವರು ಎತ್ತಿ ಹಿಡಿದಿರುವುದು ಖುಷಿ ನೀಡಿದೆ, ಅಷ್ಟೇ ಅಲ್ಲದೆ ಈ ತೀರ್ಪು ಪ್ರಜಾಪ್ರಭುತ್ವದಲ್ಲಿ ಸಂಸತ್ತಿನ ಮಾತ್ರದತ್ತ ಬೆಳಕು ಚೆಲ್ಲಿದೆ. ಭವಿಷ್ಯದಲ್ಲಿ ಅನಿಯಂತ್ರಿತ ಕಾರ್ಯಾಂಗವು ಸಂಸತ್ತು ಹಾಗೂ ಜನರ ಮೇಲೆ ವಿನಾಶಕಾರಿ ನೀತಿ ಹೇರದು ಎಂಬ ಆಶಾಭಾವವಿದೆ," ಎಂದು ಚಿದಂಬರಂ ಹೇಳಿದ್ದಾರೆ.