ಮಾಲೆಗಾಂವ್‌ ಸ್ಫೋಟ: ಆರೋಪ ಕೈಬಿಡಲು ಪುರೋಹಿತ್‌ ಸಲ್ಲಿಸಿದ್ದ ಅರ್ಜಿ ತಿರಸ್ಕರಿಸಿದ ಬಾಂಬೆ ಹೈಕೋರ್ಟ್‌

Update: 2023-01-02 10:24 GMT

ಮುಂಬೈ: ಮಾಲೆಗಾಂವ್‌ನಲ್ಲಿ 2008 ರಲ್ಲಿ ನಡೆದ ಸ್ಫೋಟ ಪ್ರಕರಣದ ಆರೋಪಿಯಾಗಿರುವ ಲೆಫ್ಟಿನೆಂಟ್‌ ಕರ್ನಲ್‌ ಪ್ರಸಾದ್‌ ಪುರೋಹಿತ್‌ ತಮ್ಮ ವಿರುದ್ಧದ  ಆರೋಪಗಳನ್ನು ಕೈಬಿಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಬಾಂಬೆ ಹೈಕೋರ್ಟ್‌ ಇಂದು ತಿರಸ್ಕರಿಸಿದೆ.

ತಮ್ಮ ವಿಚಾರಣೆ ನಡೆಸಲು ಕ್ರಿಮಿನಲ್‌ ದಂಡ ಸಂಹಿತೆಯ ಸೆಕ್ಷನ್‌ 197(2) ಅನ್ವಯ ಪ್ರಾಸಿಕ್ಯೂಶನ್‌ ಭಾರತೀಯ ಸೇನೆಯ ಅನುಮತಿ ಕೋರಿಲ್ಲ ಎಂದು ಪುರೋಹಿತ್‌ ತಮ್ಮ ಅರ್ಜಿಯಲ್ಲಿ ಹೇಳಿದ್ದರು.

ಅಧಿಕೃತ ಕರ್ತವ್ಯದ ಸಂದರ್ಭ ನಡೆದ ಘಟನೆಯ ವೇಳೆ ಸೇನಾ ಸಿಬ್ಬಂದಿಯ ವಿರುದ್ಧದ ಯಾವುಇದೇ ಕ್ರಿಮಿನಲ್‌ ದಂಡ ಸಂಹಿತೆಯ ಪ್ರಕರಣದ ವಿಚಾರಣೆಗೆ ಕೇಂದ್ರದ ಪೂರ್ವಾನುಮತಿ ಬೇಕೆಂದು ಸೆಕ್ಷನ್‌ 197(2) ಹೇಳುತ್ತದೆ.

ಆರೋಪಿ ತನ್ನ  ಅಧಿಕೃತ ಕರ್ತವ್ಯದಲ್ಲಿದ್ದಾಗ ಸಂಭವಿಸಿದ ಘಟನೆ ಇದಾಗಿಲ್ಲದೇ ಇರುವ ಕಾರಣ ಪೂರ್ವಾನುಮತಿ ಅಗತ್ಯವಿಲ್ಲ ಎಂದು ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ಏಜನ್ಸಿ ಹೇಳಿದೆ.

"ಬಾಂಬ್‌ ಸ್ಫೋಟ ನಡೆಸುವುದು ಅಧಿಕೃತ ಕರ್ತವ್ಯವಲ್ಲ," ಎಂದು ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಎಸ್‌ ಗಡ್ಕರಿ ಹಾಗೂ ಪಿ ಡಿ ನಾಯ್ಕ್‌ ಅವರ ವಿಭಾಗೀಯ ಪೀಠ ಹೇಳಿದೆ.

2008 ರಲ್ಲಿ ಬಂಧಿತರಾದ ಪುರೋಹಿತ್‌ ಅವರ ವಿರುದ್ಧ ಯುಎಪಿಎ ಅನ್ವಯ ಪ್ರಕರಣ ದಾಖಲಾಗಿದ್ದು 2017 ರಲ್ಲಿ ಅವರಿಗೆ ಸುಪ್ರೀಂ ಕೋರ್ಟ್‌ ಜಾಮೀನು ನೀಡಿತ್ತು.

ಈ ಪ್ರಕರಣದಲ್ಲಿ ಬಿಜೆಪಿ ಸಂಸದೆ ಪ್ರಜ್ಞಾ ಠಾಕುರ್‌ ಕೂಡ ಆರೋಪಿ ಎಂಬುದನ್ನು ಇಲ್ಲಿ ಉಲ್ಲೇಖಿಸಬಹುದಾಗಿದೆ.

ಸೆಪ್ಟೆಂಬರ್‌ 29, 2008 ರಲ್ಲಿ ನಡೆದ ಈ ಸ್ಫೋಟದಲ್ಲಿ ಆರು ಮಂದಿ ಮೃತಪಟ್ಟು 100 ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು.

ಸ್ಫೋಟಕ್ಕೆ ಬಳಸಲಾದ ಸ್ಫೋಟಕಗಳನ್ನು ಪುರೋಹಿತ್‌ ಕಾಶ್ಮೀರದಿಂದ ತರಿಸಿದ್ದರು ಎಂದು ಎನ್‌ಐಎ ಆರೋಪಿಸಿತ್ತು.

Similar News