ರೈತ ಪ್ರತಿಭಟನೆ ಬೆಂಬಲಿಸಿದ್ದಕ್ಕೆ ಭಾರತ ಪ್ರವೇಶ ನಿರಾಕರಿಸಲ್ಪಟ್ಟಿದ್ದ ದರ್ಶನ್ ಸಿಂಗ್ ಗೆ ಪ್ರತಿಷ್ಠಿತ ಪ್ರಶಸ್ತಿ
ಹೊಸದಿಲ್ಲಿ: ಕೃಷಿ ಕಾಯಿದೆಗಳ ವಿರುದ್ಧ ರೈತ ಪ್ರತಿಭಟನೆಯನ್ನು ಬೆಂಬಲಿಸಿ ಸಹಾಯ ಮಾಡಿದ್ದಾರೆಂಬ ಕಾರಣಕ್ಕೆ ಭಾರತಕ್ಕೆ ಪ್ರವೇಶ ನಿರಾಕರಿಸಲ್ಪಟ್ಟಿದ್ದ ಅಮೆರಿಕಾದಲ್ಲಿ ನೆಲೆಸಿರುವ ಭಾರತೀಯ ಮೂಲದ ಉದ್ಯಮಿ, ಬಿಲಿಯಾಧಿಪತಿ ದರ್ಶನ್ ಸಿಂಗ್ ಧಲಿವಾಲ್ ಅವರನ್ನು ಸಾಗರೋತ್ತರ ಭಾರತೀಯರಿಗೆ ನೀಡಲಾಗುವ ಅತ್ಯುನ್ನತ ಸರಕಾರಿ ಪ್ರಶಸ್ತಿಯಾದ ಪ್ರವಾಸಿ ಭಾರತೀಯ ಸಮ್ಮಾನ್ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಇಸ್ರೇಲ್ ಮೂಲದ ಹೋಟೆಲ್ ಉದ್ಯಮಿ ರೀನಾ ಪುಷ್ಕರ್ಣ ಹಾಗೂ ಫೆಡೆಕ್ಸ್ ಅಧ್ಯಕ್ಷ ರಾಜ್ ಸುಬ್ರಮಣಿಯಂ ಸಹಿತ 27 ಮಂದಿ ಪ್ರಶಸ್ತಿ ಪುರಸ್ಕೃತರ ಪಟ್ಟಿಯಲ್ಲಿ ದರ್ಶನ್ ಸಿಂಗ್ ಅವರ ಹೆಸರು ಕೂಡ ಇದೆ.
ಇಂದೋರ್‌ನಲ್ಲಿ ಜನವರಿ 8-10 ನಡುವೆ ನಡೆಯಲಿರುವ ಪಿಬಿಡಿ ಸಮ್ಮೇಳನದ ವೇಳೆ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ದರ್ಶನ್ ಸಿಂಗ್ ಧಲಿವಾಲ್ ಅವರನ್ನು ಈ ಪ್ರಶಸ್ತಿಗೆ ಆಯ್ಕೆಮಾಡಿರುವುದು ಅಚ್ಚರಿ ಹುಟ್ಟಿಸಿದೆ. 1972 ರಲ್ಲಿ ಭಾರತ ತೊರೆದು ಅಮೆರಿಕಾ ಸೇರಿದ್ದ ಸಿಂಗ್ ಅವರು ಮಿಲ್ವಾಕೀ ಎಂಬಲ್ಲಿ ನೆಲೆಸಿದ್ದರು. ಅಮೆರಿಕಾದಲ್ಲಿ ಅತ್ಯಂತ ದೊಡ್ಡ ಪೆಟ್ರೋಲ್ ರಿಟೇಲರ್ ಅವರೆಂದು ಮಾಧ್ಯಮಗಳು ಅವರನ್ನು ಬಣ್ಣಿಸಿವೆ. ಅಮೆರಿಕಾದಾದ್ಯಂತ ಅವರು ಸಾವಿರಾರು ಪೆಟ್ರೋಲ್ ಪಂಪ್‌ಗಳ ಒಡೆಯರಾಗಿದ್ದಾರೆ.
ರೈತ ಪ್ರತಿಭಟನೆ ವೇಳೆ ರೈತರು ಸಿಂಘು ಗಡಿ ಸಮೀಪ 2021 ರಲ್ಲಿ ನೆಲೆಸಿದ್ದಾಗ ಧಲಿವಾಲ್ ಅಲ್ಲಿ ಲಂಗರ್ (ಸಮುದಾಯ ಪಾಕಶಾಲೆ) ಆರಂಭಿಸಿದ್ದರು. ಅಕ್ಟೋಬರ್ 23, 2021 ರಂದು ದಿಲ್ಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಾಗ ಅವರಿಗೆ ಪ್ರವೇಶ ನಿರಾಕರಿಸಿದ್ದ ಅಧಿಕಾರಿಗಳು ಅವರನ್ನು ಹಲವು ಗಂಟೆಗಳ ಕಾಲ ವಿಚಾರಣೆ ನಡೆಸಿದ್ದರು. ರೈತ ಪ್ರತಿಭಟನೆಯನ್ನು ಬೆಂಬಲಿಸಿದ ಕಾರಣಕ್ಕೆ ತನಗೆ ಪ್ರವೇಶ ನಿರಾಕರಿಸಲಾಗಿದೆ ಎಂದ ಅವರ ನಂತರ ಆರೋಪಿಸಿದ್ದರು.
ರೈತ ಪ್ರತಿಭಟನೆಗೆ ಬೆಂಬಲ ನೀಡದಂತೆ ಅವರನ್ನು ಅಧಿಕಾರಿಗಳು ಬಲವಂತಪಡಿಸಿದ್ದಾರೆಂದು ಆರೋಪಿಸಲಾಗಿತ್ತು. ಘಟನೆಯ ನಂತರ ಅವರು ಅಮೆರಿಕಾಗೆ ವಾಪಸಾಗಿದ್ದರು.
ಸರ್ಕಾರ ನಂತರ ಕೃಷಿ ಕಾಯಿದೆಗಳನ್ನು ವಾಪಸ್ ಪಡೆದ ತರುವಾಯ ಕಳೆದ ವರ್ಷ ಜೂನ್‌ನಲ್ಲಿ ಚಿಕಾಗೋದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಮರ್ಪಿತ ಎರಡು ಕೃತಿಗಳನ್ನು ಶ್ರೀ ರವಿಶಂಕರ್ ಹಾಗೂ ಅಮೆರಿಕಾದಲ್ಲಿನ ಭಾರತದ ರಾಯಭಾರಿ ತರಣಜಿತ್ ಸಿಂಗ್ ಸಂಧು ಬಿಡುಗಡೆಗೊಳಿಸಿದ ಕಾರ್ಯಕ್ರಮದಲ್ಲಿ ದರ್ಶನ್ ಸಿಂಗ್ ಧಲಿವಾಲ್ ಕಾಣಿಸಿಕೊಂಡಿದ್ದರು.