ಉತ್ತರ ಪ್ರದೇಶದ ಮದ್ರಸಾಗಳಲ್ಲಿ ಮಾರ್ಚ್‌ ನಿಂದ ಧಾರ್ಮಿಕ ಶಿಕ್ಷಣದ ಜೊತೆಗೆ ಎನ್‌ಸಿಇಆರ್‌ಟಿ ಪಠ್ಯಕ್ರಮ ಜಾರಿ

Update: 2023-01-03 12:35 GMT

 ಲಕ್ನೋ: ಉತ್ತರ ಪ್ರದೇಶ ಮದರಸಾಗಳ ಮಂಡಳಿಯು ಮಾರ್ಚ್‌ ತಿಂಗಳಿನಲ್ಲಿ ಆರಂಭಗೊಳ್ಳಲಿರುವ ಮುಂದಿನ ಶೈಕ್ಷಣಿಕ ಅವಧಿಯಲ್ಲಿ ಮದರಸಾಗಳಲ್ಲಿ ಎನ್‌ಸಿಇಆರ್‌ಟಿ ಪಠ್ಯಕ್ರಮವನ್ನು ಪರಿಚಯಿಸಲಿದೆ.

"ಧಾರ್ಮಿಕ ಶಿಕ್ಷಣದೊಂದಿಗೆ ಆಧುನಿಕ ಶಿಕ್ಷಣವನ್ನೂ ಒದಗಿಸಲಾಗುವುದು," ಎಂದು ಮದರಸಾ ಶಿಕ್ಷಣ ಮಂಡಳಿಯ ಅಧ್ಯಕ್ಷರಾದ ಇಫ್ತೀಕರ್‌ ಅಹ್ಮದ್‌ ಜಾವೇದ್‌ ಅವರು  ಹೇಳಿದ್ದಾರೆ. "ಈಗ ಮದರಸಾ ಮಕ್ಕಳು ಕೂಡ ಕಂಪ್ಯೂಟರ್‌, ಗಣಿತ, ವಿಜ್ಞಾನ ಶಿಕ್ಷಣ ಪಡೆಯಬಹುದು," ಎಂದು ಅವರು ಹೇಳಿದರು.

ಕಳೆದ ವರ್ಷದ ಸೆಪ್ಟೆಂಬರ್‌ ತಿಂಗಳಿನಲ್ಲಿ ಉತ್ತರ ಪ್ರದೇಶ ಸರ್ಕಾರ ರಾಜ್ಯದ ಅನಧಿಕೃತ ಮದರಸಾಗಳ ಸಮೀಕ್ಷೆ ನಡೆಸಿತ್ತಲ್ಲದೆ ಅವುಗಳ ನಿಧಿಗಳ ಮೂಲ, ಶಿಕ್ಷಕರ ಸಂಖ್ಯೆ, ಪಠ್ಯಕ್ರಮ ಮುಂತಾದ ವಿವರಗಳನ್ನು ಸಂಗ್ರಹಿಸಿತ್ತು.

ಉತ್ತರಾಖಂಡ ರಾಜ್ಯದ ವಕ್ಫ್‌ ಮಂಡಳಿ ಕೂಡ ಕಳೆದ ನವೆಂಬರಿನಲ್ಲಿ ರಾಜ್ಯದಲ್ಲಿ ತನ್ನ ಅಧೀನದಲ್ಲಿರುವ 103 ಮದರಸಾಗಳಲ್ಲಿ ಎನ್‌ಸಿಇಆರ್‌ಟಿ ಪಠ್ಯಕ್ರಮ ಪರಿಚಯಿಸಲು ನಿರ್ಧರಿಸಿತ್ತು.

Similar News