ಅತ್ಯಾಚಾರ ಆರೋಪದಿಂದ ಖುಲಾಸೆ: ಸರಕಾರದಿಂದ 10 ಸಾವಿರ ಕೋಟಿ ರೂ. ಪರಿಹಾರ ಕೋರಿದ ವ್ಯಕ್ತಿ
ಇಂದೋರ್: ಸಾಮೂಹಿಕ ಅತ್ಯಾಚಾರದ ಆರೋಪದಿಂದ ಖುಲಾಸೆಗೊಂಡ ಮಧ್ಯಪ್ರದೇಶದ ರತ್ಲಾಮ್‌ನ ವ್ಯಕ್ತಿಯೊಬ್ಬರು ತನಗೆ ಉಂಟಾದ "ಅವಮಾನ ಮತ್ತು ಮಾನಸಿಕ ಸಂಕಟ" ವನ್ನು ಸರಿದೂಗಿಸಲು ರಾಜ್ಯ ಸರ್ಕಾರ 10,000 ಕೋಟಿ ರೂ.ಗೂ ಅಧಿಕ ಹಣವನ್ನು ಪರಿಹಾರವಾಗಿ ನೀಡಬೇಕೆಂದು ನ್ಯಾಯಾಲಯದ ಮೊರೆ ಹೋಗಿದ್ದಾರೆ.
ಅಕ್ಟೋಬರ್ 20, 2022 ರಂದು ಸ್ಥಳೀಯ ನ್ಯಾಯಾಲಯವು ಕಾಂತಿಲಾಲ್ ಭೀಲ್ ಮೇಲಿದ್ದ ಸಾಮೂಹಿಕ ಅತ್ಯಾಚಾರದ ಆರೋಪವನ್ನು ಕೈಬಿಟ್ಟ ನಂತರ ಆತ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ಮೊರೆ ಹೋಗಿದ್ದಾರೆಂದು ಅವರ ವಕೀಲ ವಿಜಯ್ ಸಿಂಗ್ ಯಾದವ್ ಹೇಳಿದ್ದಾರೆ.
ಮಹಾರಾಷ್ಟ್ರ ಸರ್ಕಾರ ಮತ್ತು ತನಿಖಾಧಿಕಾರಿಗಳ ವಿರುದ್ಧ ಕಾಂತಿಲಾಲ್ ಸಲ್ಲಿಸಿರುವ ಅರ್ಜಿ ವಿಚಾರಣೆಯು ಜನವರಿ 10 ರಂದು ನಡೆಯಲಿದೆ. "ಮಾನವ ಜೀವನ ಅಮೂಲ್ಯ" ಎಂಬ ಕಾರಣಕ್ಕಾಗಿ 10,000 ಕೋಟಿ ರೂ. ಕೇಳಲಾಗಿದೆ ಎಂದು ಕಾಂತಿಲಾಲ್ ತನ್ನ ಬೇಡಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಒಟ್ಟು ರೂ. 10,006.2 ಕೋಟಿ ಪರಿಹಾರವನ್ನು ಕಾಂತಿಲಾಲ್ ಕೇಳಿದ್ದು, 6.02 ಕೋಟಿ ರೂಗಳನ್ನು ಇತರೆ ಖರ್ಚಿಗಾಗಿ ಸೇರಿಸಿಕೊಂಡಿದ್ದಾರೆ.
2020 ರ ಡಿಸೆಂಬರ್ 23 ರಂದು ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಪೊಲೀಸರು ತನ್ನನ್ನು ಬಂಧಿಸಿದಾಗ ತಾನು ತನ್ನ ಕುಟುಂಬದ ಏಕೈಕ ಆಧಾರವಾಗಿದ್ದೆ ಎಂದು ಕಾಂತಿಲಾಲ್ ತಮ್ಮ ಅರ್ಜಿಯಲ್ಲಿ ಹೇಳಿದ್ದಾರೆ. ತನ್ನ ವಯಸ್ಸಾದ ತಾಯಿ, ಹೆಂಡತಿ ಮತ್ತು ಮೂವರು ಮಕ್ಕಳು ತನ್ನನ್ನೇ ನಂಬಿದ್ದಾರೆ ಎಂದು ಅವರ ತಿಳಿಸಿದ್ದಾರೆ.
ಸಾಮೂಹಿಕ ಅತ್ಯಾಚಾರದ ನಕಲಿ ಆರೋಪಗಳಿಂದಾಗಿ ತನಗೆ ಮತ್ತು ತನ್ನ ಕುಟುಂಬಕ್ಕೆ ಉಂಟಾದ ನೋವು ಮತ್ತು ಮಾನಸಿಕ ಸಂಕಟವನ್ನು ಉಲ್ಲೇಖಿಸಿ ತನ್ನ ಕಕ್ಷಿ 10,006.02 ಕೋಟಿ ರೂ.ಗಳನ್ನು ಕೋರಿದ್ದಾರೆ ಎಂದು ವಕೀಲ ಯಾದವ್ ಹೇಳಿದರು.
ವಕೀಲರ ಪ್ರಕಾರ, ಜುಲೈ 20, 2018 ರಂದು ಮಹಿಳೆಯೊಬ್ಬರು ಕಾಂತಿಲಾಲ್ ವಿರುದ್ಧ ಮಾನಸ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ದೂರು ದಾಖಲಿಸಿದ್ದರು. ತನ್ನ ಸಹೋದರನ ಮನೆಗೆ ಬಿಡುವ ನೆಪದಲ್ಲಿ ತನ್ನ ಮೇಲೆ ಕಾಂತಿಲಾಲ್ ಅತ್ಯಾಚಾರವೆಸಗಿದ್ದಾನೆ, ಬಳಿಕ ಇನ್ನೊಬ್ಬನಿಗೆ ತನ್ನನ್ನು ಹಸ್ತಾಂತರಿಸಿದ್ದಾನೆ ಎಂದು ಆಕೆ ಆರೋಪಿಸಿದ್ದಳು. ದೂರಿನ ಮೇರೆಗೆ ಕಾಂತಿಲಾಲ್ ನನ್ನು ಬಂಧಿಸಿದ್ದ ಪೊಲೀಸರು ಸುಮಾರು ಎರಡು ವರ್ಷಗಳ ಕಾಲ ವಿಚಾರಣಾಧೀನ ಕೈದಿಯಾಗಿ ಸೆರೆವಾಸದಲ್ಲಿ ಇಟ್ಟಿದ್ದರು.