ಟೋಲ್ ಸಿಬ್ಬಂದಿಯನ್ನು ಥಳಿಸಿದ ತೆಲಂಗಾಣ ಶಾಸಕ: ವಿಡಿಯೊ ವೈರಲ್

Update: 2023-01-05 02:29 GMT

ಮಂಚೇರಿಯಲ್: ತೆಲಂಗಾಣದ ಆಡಳಿತಾರೂಢ ಭಾರತ ರಾಷ್ಟ್ರೀಯ ಸಮಿತಿ ಪಕ್ಷದ ಶಾಸಕರೊಬ್ಬರು ಟೋಲ್ ಪ್ಲಾಜಾ ಸಿಬ್ಬಂದಿಯನ್ನು ಥಳಿಸಿದ್ದಾರೆ ಎನ್ನಲಾದ ಸಿಸಿಟಿವಿ ದೃಶ್ಯಾವಳಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಶಾಸಕ ಈ ಆರೋಪವನ್ನು ನಿರಾಕರಿಸಿದ್ದಾರೆ.

ಸ್ಥಳೀಯ ಟಿವಿ ಚಾನಲ್ ಈ ವಿಡಿಯೊ ತುಣುಕನ್ನು ಪ್ರಸಾರ ಮಾಡಿದ್ದು, ಬೆಲ್ಲಂಪಳ್ಳಿ ಶಾಸಕ ದುರ್ಗಂ ಚಿನ್ನಯ್ಯ ಅವರು ಮಂಚೆರಿಯಲ್ ಜಿಲ್ಲೆಯ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿಯ ಟೋಲ್ ಪ್ಲಾಜಾ ಉದ್ಯೋಗಿಯನ್ನು ಥಳಿಸುತ್ತಿರುವುದು ಕಾಣಿಸುತ್ತಿದೆ.

ಶಾಸಕರು ಕಾರಿನಲ್ಲಿ ಪ್ರಯಾಣಿಸುವ ವೇಳೆ ಈ ಘಟನೆ ನಡೆದಿದೆ ಎನ್ನಲಾಗಿದೆ.

ಶಾಸಕರ ಗನ್‌ಮ್ಯಾನ್ ಹಾಗೂ ಇತರ ಕೆಲವರು ಟೋಲ್‌ಪ್ಲಾಜಾ ಬಳಿ ಗುಂಪು ಸೇರಿರುವುದು ದೃಶ್ಯಾವಳಿಯಲ್ಲಿ ಕಂಡುಬರುತ್ತಿದೆ. ಒಬ್ಬ ವ್ಯಕ್ತಿ ಮತ್ತೊಬ್ಬ ವ್ಯಕ್ತಿಯ ಬಳಿ ಬಂದು ಆತನನ್ನು ಥಳಿಸುತ್ತಿರುವುದು ಮತ್ತು ಆ ಬಳಿಕ ವ್ಯಕ್ತಿ ಆಚೆ ಹೋಗುತ್ತಿರುವ ದೃಶ್ಯ ದಾಖಲಾಗಿದೆ.

ಈ ಕುರಿತ ಮಾಧ್ಯಮ ವರದಿಗಳನ್ನು ಶಾಸಕ ನಿರಾಕರಿಸಿದ್ದು, ಹೆದ್ದಾರಿ ಕಾಮಗಾರಿ ಮುಗಿಯುವ ಮುನ್ನವೆ ಟೋಲ್ ಶುಲ್ಕ ಸಂಗ್ರಹಿಸಲಾಗುತ್ತಿದೆ ಎಂದು ಆಪಾದಿಸಿದ್ದಾರೆ.

"ನಿಯಮಗಳ ಬಗ್ಗೆ ನಾನು ವಿಚಾರಿಸಿದ್ದೇನೆ. ಆದರೆ ಅಧಿಕಾರಿಗಳಿಂದ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ. ಅವರ ವ್ಯವಸ್ಥಾಪಕರನ್ನು ಕೇಳಿದಾಗ, ಟೋಲ್ ಪ್ಲಾಜಾ ಸಿಬ್ಬಂದಿ ಒರಟಾಗಿ ಮಾತನಾಡಿದ್ದಾನೆ. ಆದರೂ ನಾನು ಆತನ ಮೆಲೆ ಹಲ್ಲೆ ಮಾಡಿಲ್ಲ" ಎಂದು ಚಿನ್ನಯ್ಯ ಹೇಳಿದ್ದಾರೆ.

ಈ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ. ಆದರೆ ತನಿಖೆ ನಡೆಸಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.

Similar News