×
Ad

ಸ್ವಿಗ್ಗಿ ಏಜೆಂಟ್ ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದು ಎಳೆದೊಯ್ದ ಕಾರು: ಯುವಕ ಮೃತ್ಯು

ಹೊಸ ವರ್ಷದ ರಾತ್ರಿ ನಡೆದ ಮತ್ತೊಂದು ಭೀಕರ ಘಟನೆ

Update: 2023-01-05 10:47 IST

ನೊಯ್ಡಾ: ದಿಲ್ಲಿ ಘಟನೆಯನ್ನೇ ಹೋಲುವ  ಹಿಟ್ ಆ್ಯಂಡ್ ರನ್ ಪ್ರಕರಣದಲ್ಲಿ ಸ್ವಿಗ್ಗಿ ಡೆಲಿವರಿ ಏಜೆಂಟ್ ನ  ದ್ವಿಚಕ್ರ ವಾಹನಕ್ಕೆ ಕಾರೊಂದು  ಡಿಕ್ಕಿ ಹೊಡೆದು ಸುಮಾರು 500 ಮೀಟರ್ ವರೆಗೆ ಎಳೆದೊಯ್ದ ಪರಿಣಾಮ ಡೆಲಿವರಿ ಏಜೆಂಟ್ ಸಾವನ್ನಪ್ಪಿರುವ  ಘಟನೆ ಹೊಸ ವರ್ಷ ರವಿವಾರದಂದು ಉತ್ತರಪ್ರದೇಶದ ನೋಯ್ಡಾದಲ್ಲಿ ನಡೆದಿದೆ ಎಂದು NDTV ವರದಿ ಮಾಡಿದೆ.

ಸ್ವಿಗ್ಗಿಯಲ್ಲಿ ಕೆಲಸ ಮಾಡುತ್ತಿದ್ದ 24 ವರ್ಷದ ಕೌಶಲ್ ಯಾದವ್  ಹೊಸ ವರ್ಷದ ರಾತ್ರಿ ಫುಡ್ ಡೆಲಿವರಿಗೆ ಹೊರಟಿದ್ದಾಗ ನೋಯ್ಡಾ ಸೆಕ್ಟರ್ 14 ರ ಫ್ಲೈಓವರ್ ಬಳಿ ಕಾರೊಂದು ಅವರ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಪಘಾತ ನಡೆದ ಸ್ಥಳದಿಂದ ಸುಮಾರು 500 ಮೀಟರ್ ದೂರದಲ್ಲಿರುವ ದೇವಸ್ಥಾನದ ಬಳಿ ಚಾಲಕ ಕಾರನ್ನು ನಿಲ್ಲಿಸಿದ್ದ. ಕೌಶಲ್ ಶವ ಹೊರಬಿದ್ದ ಬಳಿಕ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ರವಿವಾರ ಮಧ್ಯರಾತ್ರಿ 1 ಗಂಟೆಗೆ ಸಹೋದರ ಅಮಿತ್,  ಕೌಶಲ್ ಗೆ ಕರೆ ಮಾಡಿದಾಗ ದಾರಿ ಹೋಕರೊಬ್ಬರು ಕರೆ ಸ್ವೀಕರಿಸಿ ಅಪಘಾತದ ಬಗ್ಗೆ ತಿಳಿಸಿದರು.

ಅಮಿತ್ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆರೋಪಿಗಳ ಪತ್ತೆಗಾಗಿ ಆ ಪ್ರದೇಶದಲ್ಲಿ ಅಳವಡಿಸಲಾಗಿರುವ ಸಿಸಿಟಿವಿಗಳನ್ನು ಸ್ಕ್ಯಾನ್ ಮಾಡುತ್ತಿದ್ದೇವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ದಿಲ್ಲಿಯಲ್ಲಿ 20 ವರ್ಷದ ಮಹಿಳೆಯೊಬ್ಬರಿಗೆ ಕಾರು ಡಿಕ್ಕಿ ಹೊಡೆದು ಸುಮಾರು 13 ಕಿಮೀ ಎಳೆದೊಯ್ದು ಸಾಯಿಸಿರುವ  ಕೆಲವೇ ಗಂಟೆಗಳಲ್ಲಿ ಈ ದುರ್ಘಟನೆ ನಡೆದಿತ್ತು.

Similar News