×
Ad

ಕಲಬೆರಕೆ ಪನೀರ್‌ ಮಾರಾಟ ಮಾಡಿದ ಆರೋಪಿಗೆ ನಿರೀಕ್ಷಣಾ ಜಾಮೀನು ನೀಡಿದ ಮಧ್ಯಪ್ರದೇಶ ಹೈಕೋರ್ಟ್

Update: 2023-01-05 12:35 IST

ಭೋಪಾಲ್‌: ಸೇವನೆಗೆ ಅನರ್ಹವಾದ ಪನೀರ್‌ ಅನ್ನು ಮಾರಾಟ ಮಾಡುತ್ತಿದ್ದಾರೆ ಎಂಬ ಆರೋಪ ಹೊತ್ತ ಮಾರಾಟಗಾರನೊಬ್ಬನಿಗೆ ಮಧ್ಯಪ್ರದೇಶ ಹೈಕೋರ್ಟಿನ ಗ್ವಾಲಿಯರ್‌ ಪೀಠ ಜಾಮೀನು ನೀಡಿದೆ.

ಗ್ರಾಹಕರು ಈತ ಮಾರಾಟ ಮಾಡುವ ಪನೀರ್‌ ಪರಿಶುದ್ಧವಾಗಿದೆ ಎಂದು ತಿಳಿದು ಖರೀದಿಸುತ್ತಿದ್ದರು ಹಾಗೂ ನಂತರ ಅದು ಕಲಬೆರಕೆಯಿಂದ ಕೂಡಿದೆ ಎಂದು ಕಂಡುಕೊಂಡಿದ್ದರೆಂಬುದಕ್ಕೆ ಯಾವುದೇ ಪುರಾವೆಯಿಲ್ಲ ಎಂದು ಮಾರಾಟಗಾರನಿಗೆ ಜಾಮೀನು ನೀಡುವ ವೇಳೆ ಜಸ್ಟಿಸ್‌ ಅತುಲ್‌ ಶ್ರೀಧರನ್‌ ಅವರ ಪೀಠ ಹೇಳಿದೆ.

ಜಾಮೀನು ಅರ್ಜಿ ಸಲ್ಲಿಸಿದ್ದ ಮಾರಾಟಗಾರನ ಮಳಿಗೆಯನ್ನು ಆಹಾರ ಪರೀಕ್ಷಕರೊಬ್ಬರು ಪರಿಶೀಲನೆ ವೇಳೆ ಅಲ್ಲಿರುವ ಪನೀರ್‌ ಸೇವನೆಗೆ ಅಸುರಕ್ಷಿತ ಎಂದು ಕಂಡು ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಕಾಯಿದೆ 2006 ಅನ್ವಯ ಪ್ರಕರಣ ದಾಖಲಿಸಿದ್ದರಲ್ಲದೆ ನಂತರ ಪೊಲೀಸ್‌ ದೂರು ಕೂಡ ದಾಖಲಿಸಿದ್ದರಿಂದ ಮಾರಾಟಗಾರನ ವಿರುದ್ಧ ಐಪಿಸಿ ಸೆಕ್ಷನ್‌ 420, 272, 273 ಅನ್ವಯ ಎಫ್‌ಐಆರ್‌ ದಾಖಲಾಗಿತ್ತು.

ಈ ಹಿನ್ನೆಲೆಯಲ್ಲಿ ತನ್ನನ್ನು ಬಂಧಿಸಬಹುದೆಂದು ಅರಿತ ಮಾರಾಟಗಾರ ಜಾಮೀನಿಗೆ ಅರ್ಜಿ ಸಲ್ಲಿಸಿದ್ದ. ತನ್ನ ವಿರುದ್ಧ ದುರುದ್ದೇಶದಿಂದ  ಪ್ರಕರಣ ದಾಖಲಿಸಲಾಗಿತ್ತು ಎಂದು ಆತ ತನ್ನ ಜಾಮೀನು ಅರ್ಜಿಯಲ್ಲಿ ಹೇಳಿಕೊಂಡಿದ್ದ. ತನ್ನ ವಿರುದ್ಧ ಆಹಾರ ಸುರಕ್ಷತೆ ಕಾಯಿದೆ ವಿರುದ್ಧ ಪ್ರಕರಣ ದಾಖಲಿಸಲಾಗಿರುವುದರಿಂದ ತನಗೆ ಸೆಕ್ಷನ್‌ 57(1)  ಅನ್ವಯ ದಂಡ ವಿಧಿಸಬಹುದಾಗಿದೆ ಎಂದು ಅರ್ಜಿದಾರ ಹೇಳಿದರೆ ಸರಕಾರದ ಪರ ವಕೀಲರು ಆತ ಕಲಬೆರಕೆ ಆಹಾರ ಮಾರಾಟ ಮಾಡುತ್ತಿದ್ದುದರಿಂದ ವಂಚನೆ ಪ್ರಕರಣ ದಾಖಲಿಸಲಾಗಿದೆ ಎಂದಿದ್ದರು,

ಅಂತಿಮವಾಗಿ ನ್ಯಾಯಾಲಯ ಅರ್ಜಿದಾರನ ವಾದವನ್ನು ಮನ್ನಿಸಿ ಆತನಿಗೆ ಜಾಮೀನು ಮಂಜೂರು ಮಾಡಿದೆ.

Similar News