ಭಯೋತ್ಪಾದಕ ಗುಂಪು ಜೈಷೆ ಮುಹಮ್ಮದ್ ನ ಮುಖವಾಡ ಸಂಘಟನೆಗೆ ಕೇಂದ್ರದ ನಿಷೇಧ

Update: 2023-01-07 15:15 GMT

ಹೊಸದಿಲ್ಲಿ,ಜ.7: ನಿಷೇಧಿತ ಭಯೋತ್ಪಾದಕ ಗುಂಪು ಜೈಷೆ ಮುಹಮ್ಮದ್ (JEM)ನ ಛಾಯಾ ಸಂಘಟನೆ ಪೀಪಲ್ಸ್ ಆ್ಯಂಟಿ-ಫ್ಯಾಸಿಸ್ಟ್-ಫ್ರಂಟ್ (ಪಿಎಎಫ್ಎಫ್) ಮತ್ತು ಅದರ ಎಲ್ಲ ಅಭಿವ್ಯಕ್ತಿಗಳು ಹಾಗೂ ಮುಖವಾಡ ಸಂಘಟನೆಗಳನ್ನು ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆ (UAPA)ಯಡಿ ಭಯೋತ್ಪಾದಕ ಸಂಘಟನೆಗಳು ಎಂದು ಕೇಂದ್ರ ಸರಕಾರವು ಶುಕ್ರವಾರ ಘೋಷಿಸುವ ಮೂಲಕ ನಿಷೇಧವನ್ನು ಹೇರಿದೆ.

ಯುಎಪಿಎ ಅಡಿ ನಿಷೇಧಿತ ಜೆಇಎಂ ಭಯೋತ್ಪಾದಕ ಗುಂಪಿನ ಛಾಯಾ ಸಂಘಟನೆಯಾಗಿ ಪಿಎಎಫ್ಎಫ್ 2019ರಲ್ಲಿ ತಲೆಯೆತ್ತಿತ್ತು. ಅಧಿಸೂಚನೆಯ ಮೂಲಕ ಪಿಎಎಫ್ಎಫ್ ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿರುವ ಗೃಹ ವ್ಯವಹಾರಗಳ ಸಚಿವಾಲಯವು,ಪಿಎಎಫ್ಎಫ್ ಭಾರತೀಯ ಭದ್ರತಾ ಪಡೆಗಳು,ರಾಜಕೀಯ ನಾಯಕರು ಮತ್ತು ಜಮ್ಮು-ಕಾಶ್ಮೀರದಲ್ಲಿ ಕೆಲಸ ಮಾಡುತ್ತಿರುವ ಇತರ ರಾಜ್ಯಗಳ ಜನರಿಗೆ ನಿಯಮಿತವಾಗಿ ಬೆದರಿಕೆಗಳನ್ನು ಒಡ್ಡುತ್ತಿದೆ ಎಂದು ಬೆಟ್ಟು ಮಾಡಿದೆ.

ಪಿಎಎಫ್ಎಫ್ ಭಯೋತ್ಪಾದನೆಯಲ್ಲಿ ತೊಡಗಿದೆ. ಅದು ಭಾರತದಲ್ಲಿ ವಿವಿಧ ಭಯೋತ್ಪಾದಕ ಕೃತ್ಯಗಳನ್ನು ನಡೆಸಿದೆ ಎಂದು ಹೇಳಿರುವ ಗೃಹ ಸಚಿವಾಲಯವು,ಪಿಎಎಫ್ಎಫ್ ಇತರ ಸಂಘಟನೆಗಳೊಂದಿಗೆ ಸೇರಿಕೊಂಡು ಜಮ್ಮು-ಕಾಶ್ಮೀರದಲ್ಲಿ ಮತ್ತು ಭಾರತದ ಇತರ ಪ್ರಮುಖ ನಗರಗಳಲ್ಲಿ ಹಿಂಸಾತ್ಮಕ ಭಯೋತ್ಪಾದಕ ಕೃತ್ಯಗಳನ್ನು ನಡೆಸಲು ಭೌತಿಕವಾಗಿ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಸಂಚು ರೂಪಿಸುವಲ್ಲಿ ತೊಡಗಿಕೊಂಡಿದೆ,ಜೊತೆಗೆ ನೇಮಕಾತಿ ಹಾಗೂ ಶಸ್ತ್ರಾಸ್ತ್ರ ತರಬೇತಿಗಾಗಿ ಯುವಜನರ ಮೂಲಭೂತೀಕರಣದಲ್ಲಿ ತೊಡಗಿದೆ ಎಂದು ತಿಳಿಸಿದೆ.

Similar News