ಮೈ ಮಿಸ್ಟರ್: ಬೆಂದ ಜೀವಗಳ ಬಿಕ್ಕಳಿಕೆ

Update: 2023-01-08 10:14 GMT

''ನಾನು ಇತ್ತೀಚೆಗೆ ನೋಡಿದ ಅತ್ಯುತ್ತಮ ಸಿರೀಸ್‌ಗಳಲ್ಲಿ ಇದು ಒಂದು. ಇದೊಂದು ಮೇರು ಕೃತಿ. ಮನುಷ್ಯನ ಮಾನಸಿಕ ತಾಕಲಾಟಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ಇಲ್ಲಿ ನಿರೂಪಿಸಲಾಗಿದೆ. ಜನಸಾಮಾನ್ಯರ ದೈನಂದಿನ ನೋವು, ಸಂಕಟಗಳನ್ನು ಅತ್ಯಂತ ಸೂಕ್ಷ್ಮವಾಗಿ ಈ ಸರಣಿ ಹಿಡಿದಿಡುತ್ತದೆ'' 'ಅಲ್ ಕೆಮಿಸ್ಟ್' ಕಾದಂಬರಿಯ ಮೂಲಕ ಜಗದ್ವಿಖ್ಯಾತನಾಗಿರುವ ಪೌಲೋ ಕೊಯೆಲ್ಹೋ ಅವರು 'ಮೈ ಮಿಸ್ಟರ್' ಕೊರಿಯನ್ ಸರಣಿಯ ಕುರಿತಂತೆ ಬರೆದಿರುವ ಸಾಲು ಇದು.

2021ರಲ್ಲಿ ಬಿಡುಗಡೆಗೊಂಡು 16 ಕಂತುಗಳಲ್ಲಿ ಪ್ರಸಾರಗೊಂಡ 'ಮೈ ಮಿಸ್ಟರ್' ಜನಸಾಮಾನ್ಯರನ್ನಷ್ಟೇ ಅಲ್ಲ, ಗಂಭೀರ ವಿಮರ್ಶಕರನ್ನು ಕೂಡ ತನ್ನೆಡೆಗೆ ಸೆಳೆದುಕೊಂಡಿದೆ. ಕೊರಿಯನ್ ಜನಪ್ರಿಯ ಸರಣಿಗಳ ನಡುವೆಯೇ, ಕೊರಿಯಾದ ಮಧ್ಯಮ ವರ್ಗದ ಜನರ ವರ್ತಮಾನದ ಅತಂತ್ರತೆ, ಸಂಕಟ, ನೋವು, ನಲಿವುಗನ್ನೊಳನ್ನು ಪರಿಣಾಮಕಾರಿಯಾಗಿ ಕಟ್ಟಿ ಕೊಟ್ಟ ಯಶಸ್ವೀ ಸರಣಿ 'ಮೈ ಮಿಸ್ಟರ್'. ಒಂದು ಬೃಹತ್ ಕಟ್ಟಡ ನಿರ್ಮಾಣ ಸಂಸ್ಥೆ. ಆ ಕಂಪೆನಿಯೊಳಗಿರುವ ಅಧಿಕಾರಿ ವರ್ಗಗಳ ನಡುವಿನ ತಿಕ್ಕಾಟ, ಒಬ್ಬರ ಕಾಲೆಳೆಯಲು ಇನ್ನೊಬ್ಬರು ನಡೆಸುವ ಸಂಚು ಕತೆಯ ಮೇಲ್ಪದರವಾದರೆ ಅದರ ತಳದಲ್ಲಿ ಕೊರಿಯಾದ ಮಧ್ಯಮ ವರ್ಗ ಅನುಭವಿಸುತ್ತಿರುವ ಆರ್ಥಿಕ ಅತಂತ್ರತೆ, ಅಭದ್ರತೆಯ ದಟ್ಟ ಚಿತ್ರಣವಿದೆ. ಆ ಕಂಪೆನಿಯಲ್ಲಿ ಕಥಾನಾಯಕ ಪಾರ್ಕ್ ಡಾಂಗ್ ಹೂನ್ ಇಂಜಿನಿಯರ್ ಆಗಿ ಕೆಲಸ ನಿರ್ವಹಿಸುತ್ತಿದ್ದಾನೆ. ಕಂಪೆನಿಯ ಮೇಲಧಿಕಾರಿ, ಸಿಇಒ ಡೂ ಜೂ ಯಂಗ್. ಈತ ಕಾಲೇಜಿನ ಅವಧಿಯಲ್ಲಿ ಪಾರ್ಕ್ ಡಾಂಗ್‌ನ ಜ್ಯೂನಿಯರ್ ಆಗಿದ್ದವನು. ಇದೇ ಸಂದರ್ಭದಲ್ಲಿ ಪಾರ್ಕ್ ಡಾಂಗ್ ಹೂನ್‌ನ ಪತ್ನಿಯ ಜೊತೆಗೆ ಅಕ್ರಮ ಸಂಬಂಧವನ್ನು ಕದ್ದು ಮುಚ್ಚಿ ಹೊಂದಿರುತ್ತಾನೆ. ಈತನಿಗೆ ಪಾರ್ಕ್ ಡಾಂಗ್ ಹೂನ್‌ನನ್ನು ಕೆಲಸದಿಂದ ವಜಾಗೊಳಿಸಬೇಕಾಗಿದೆ. ಇಂತಹ ಹೊತ್ತಿನಲ್ಲೇ ಪಾರ್ಕ್ ಡಾಂಗ್ ಹೂನ್‌ನಿಗೆ ಒಂದು ಕೊರಿಯರ್ ಬರುತ್ತದೆ. ಲಂಚದ ರೂಪದಲ್ಲಿ ಅದರೊಳಗೆ ಉಡುಗೊರೆಯ ಕೂಪನ್‌ಗಳಿರುತ್ತವೆ. ಹಾಗೆ ಕೊರಿಯರ್ ಬಂದ ಹೊತ್ತಿನಲ್ಲೇ, ಅದೇ ಕಂಪೆನಿಗೆ 'ಲಂಚ ಪಡೆದ ಆರೋಪ'ದ ಒಂದು ಈ ಮೇಲ್ ರವಾನೆಯಾಗುತ್ತದೆ. ಅದೇ ಕಂಪೆನಿಯಲ್ಲಿ ಈತನದೇ ಹೆಸರನ್ನು ಹೋಲುವ ಇನ್ನೊಬ್ಬ ಮೇಲಧಿಕಾರಿಯನ್ನೂ ಈ ಕೊರಿಯರ್ ಗುರಿ ಮಾಡಿರುತ್ತದೆ ಎನ್ನುವುದು ತನಿಖೆಯಿಂದ ನಿಧಾನಕ್ಕೆ ಬಯಲಾಗುತ್ತದೆ. ಇಬ್ಬರಿಗೂ ತಮ್ಮನ್ನು ವಜಾಗೊಳಿಸಲು ಒಂದು ಸಂಚು ನಡೆಯುತ್ತಿರುವುದು ಗೊತ್ತಾಗಿ ಬಿಡುತ್ತದೆ ಮತ್ತು ಅವರು ಅದರ ಕಾರಣವನ್ನು, ಕಾರಣಕರ್ತರನ್ನು ಹುಡುಕುವ ಪ್ರಯತ್ನ ನಡೆಸುತ್ತಾರೆ.

ಲಂಚವನ್ನು ಪಾರ್ಕ್ ಸ್ವೀಕರಿಸಿದ್ದರೂ, ಕಚೇರಿಯಲ್ಲಿ ತಾತ್ಕಾಲಿಕ ಸಿಬ್ಬಂದಿಯಾಗಿ ಸೇರಿದ್ದ ಲೀ ಜಿ ಆನ್ ಎಂಬಾಕೆಯಿಂದ ಆತ ಕೊನೆಯ ಕ್ಷಣದಲ್ಲಿ ರಕ್ಷಿಸಲ್ಪಡುತ್ತಾನೆ. ಆದರೆ ಆಕೆಯ ಉದ್ದೇಶ ಆತನನ್ನು ರಕ್ಷಿಸುವುದು ಆಗಿರುವುದಿಲ್ಲ. ಸಾಲಗಾರರ ಕ್ರೌರ್ಯಗಳಿಂದ ತತ್ತರಿಸಿದ ಬದುಕು ಲೀ ಜಿ ಆನ್‌ಳದ್ದು. ತನ್ನ ಕುಟುಂಬದ ಮೇಲೆ ದೌರ್ಜನ್ಯವೆಸಗಿದ ಸಾಲಗಾರನೊಬ್ಬನನ್ನು ಕೊಂದು ಬಾಲ್ಯದಲ್ಲೇ ಜೈಲು ಶಿಕ್ಷೆ ಅನುಭವಿಸಿ ಬಂದಾಕೆ. ಇದೀಗ ಕೊಲೆಗಾರನ ಮಗ ಆಕೆಯನ್ನು ಬೆಂಬತ್ತಿದ್ದಾನೆ. ಕುಟುಂಬ ಮಾಡಿಟ್ಟ ಸಾಲ, ಅನಾರೋಗ್ಯ ಪೀಡಿತ ಮೂಕಿ ಅಜ್ಜಿಯ ಜೊತೆಗೆ ಬದುಕನ್ನು ಮುನ್ನಡೆಸಬೇಕು. ಹಸಿವು ಬಡತನಗಳ ನಡುವೆ ಆಕೆ ಆ ಕಂಪೆನಿಯನ್ನು ಸೇರಿರುತ್ತಾಳೆ. ತನ್ನ ಸಾಲವನ್ನು ತೀರಿಸುವ ಅನಿವಾರ್ಯ ಸ್ಥಿತಿಯಲ್ಲಿ ಆಕೆ, ಕಂಪೆನಿಯ ಇಬ್ಬರು ಅಧಿಕಾರಿಗಳನ್ನು ವಜಾಗೊಳಿಸಲು ನೆರವಾಗುತ್ತೇನೆ ಎಂದು ಸಿಇಒ ಡೂ ಜೂ ಯಂಗ್‌ಗೆ ಮಾತು ಕೊಡುತ್ತಾಳೆ. ಓರ್ವನನ್ನು ವಜಾಗೊಳಿಸುವಲ್ಲಿ ಆಕೆ ಯಶಸ್ವಿಯಾಗುತ್ತಾಳೆ. ಇನ್ನು ಪಾರ್ಕ್ ಡಾಂಗ್ ಹೂನ್‌ನ್ನು ವಜಾಗೊಳಿಸುವ ಸರದಿ. ಅದಕ್ಕಾಗಿ ಆಕೆ ಆತನ ಮೊಬೈಲ್‌ನ ಗೂಢಚಾರಿಕೆ ಮಾಡುತ್ತಾಳೆ. ಆತನ ಮೊಬೈಲ್ ಮೂಲಕ ಆತನ ಮಾತುಗಳನ್ನು ಆಲಿಸ ತೊಡಗುತ್ತಾಳೆ. ಈ ಆಲಿಸುವಿಕೆಯೇ ಆಕೆ ಬದುಕನ್ನು ನೋಡುವ ದೃಷ್ಟಿಯನ್ನು ಬದಲಿಸುವಂತೆ ಮಾಡುತ್ತದೆ. ಪುರುಷರಲ್ಲಿ ಕ್ರೌರ್ಯವನ್ನು, ಸಮಯ ಸಾಧಕತನವನ್ನೇ ಕಂಡಿದ್ದ ಆಕೆಗೆ ಮೊತ್ತ ಮೊದಲ ಬಾರಿಗೆ ಒಬ್ಬ ಮನುಷ್ಯನ ಪರಿಚಯವಾಗುತ್ತದೆ. ಅದು ಪಾರ್ಕ್ ಮತ್ತು ಜಿ ಆನ್ ಇಬ್ಬರ ಬದುಕಿಗೂ ತಿರುವೊಂದನ್ನು ನೀಡುತ್ತದೆ.

ಜಿ ಆನ್ ಮತ್ತು ಪಾರ್ಕ್ ಇಬ್ಬರೊಳಗಿನ ಆತಂಕ, ನೋವು, ಸಂಕಟಗಳನ್ನು ಹೆಪ್ಪುಗಟ್ಟಿದ ವೌನದ ಮೂಲಕವೇ ಸರಣಿ ಪರಿಣಾಮಕಾರಿಯಾಗಿ ಕಟ್ಟಿಕೊಡುತ್ತದೆ. ಮೊಬೈಲ್ ಮೂಲಕ ಜಿ ಆನ್ ಆಲಿಸುವ ಪಾರ್ಕ್‌ನ ನಿಟ್ಟುಸಿರು, ನಡೆದುಕೊಂಡು ಹೋಗುವಾಗಿನ ಬೂಟಿನ ಸದ್ದು, ಏದುಸಿರುವ ಇವು ಸರಣಿಯುದ್ದಕ್ಕೂ ನಮ್ಮನ್ನು ಬೆಂಬತ್ತುತ್ತವೆ. ಕೊರಿಯಾದ ಅರ್ಥ ವ್ಯವಸ್ಥೆಗೆ ನಲುಗಿ ಹತಾಶೆಯ ಹಂತ ತಲುಪಿರುವ ಮಧ್ಯಮ ವರ್ಗದ ಸ್ಥಿತಿಗತಿಯನ್ನು ಪಾರ್ಕ್ ಕುಟುಂಬದ ಮೂಲಕ ಸರಣಿ ತೆರೆದಿಡುತ್ತದೆ. ಸಂಕಷ್ಟದ ಸಮಯದಲ್ಲೂ ಪರಸ್ಪರ ಹೆಗಲಾಗುವ ಕುಟುಂಬ ಸದಸ್ಯರು ಮತ್ತು ಸ್ನೇಹಿತರು ಕೊರಿಯಾದಲ್ಲಿ ಇನ್ನೂ ಉಳಿದಿರುವ ಜೀವ ಸೆಲೆಯಾಗಿ ನಮಗೆ ನೆಮ್ಮದಿಯನ್ನು ನೀಡುತ್ತದೆ. ಸರಣಿ ನಿಧಾನಕ್ಕೆ ಚಲಿಸುತ್ತದೆ. ಮನುಷ್ಯನ ಒಳಗಿನ ಆತಂಕ, ತಲ್ಲಣಗಳನ್ನು ವ್ಯಕ್ತವಾಗಿಸಲು ಚಿತ್ರದುದ್ದಕ್ಕೂ ವೌನವನ್ನೇ ಹಿನ್ನೆಲೆ ಸಂಗೀತವಾಗಿ ಬಳಸಲಾಗಿದೆ. 'ಮೈ ಮಿಸ್ಟರ್' ನೊಂದು, ಬೆಂದು ಒಣಗಿ ಹೋಗಿರುವ ಜೀವಗಳ ಆಳದ ಬಿಕ್ಕಳಿಕೆ. ಅದು ನಮ್ಮ ನಿಮ್ಮೆಳಗಿನ ಬಿಕ್ಕಳಿಕೆ ಕೂಡ ಆಗಿರಬಹುದು. -ಮುಸಾಫಿರ್

Similar News