ಭೂತಕಾಲದ ಕತೆ ಹೇಳುವ ದೆವ್ವ

Update: 2023-01-08 06:52 GMT

ಹೊಸ ವರ್ಷದ ಮೊದಲ ಶುಕ್ರವಾರ ಚಂದನವನದಲ್ಲಿ ವಿಭಿನ್ನ ಕಥೆಯ ಸಿನೆಮಾಗಳು ರಿಲೀಸ್ ಆಗಿವೆ. ಅಂತಹ ಸಿನೆಮಾಗಳಲ್ಲಿ ‘ಸ್ಪೂಕಿ ಕಾಲೇಜ್’ ಕೂಡ ಒಂದು. ಸ್ಪೂಕಿ ಅಂದರೆ ಭಯಾನಕ ಅನ್ನುವ ಅರ್ಥ ಬರುತ್ತದೆ. ಟೈಟಲ್‌ನಲ್ಲೇ ಭಯಾನಕತೆಯನ್ನು ಹೊತ್ತು ತಂದಿರುವ ಈ ಚಿತ್ರ, ಥಿಯೇಟರ್‌ನಲ್ಲಿ ಅಷ್ಟು ಭಯಪಡಿಸುವುದಿಲ್ಲ ಅನ್ನುವುದು ನಿಜ. ಹಾರರ್ ಸಿನೆಮಾ ಆಗಿರುವುದರಿಂದ, ಪ್ರೇಕ್ಷಕರು ಥಿಯೇಟರ್‌ನಿಂದ ಹೊರಗೆ ಬರಬೇಕಾದ್ರೆ ಭಯಾನಕ ಅನುಭವ ಆಗುತ್ತೆ ಎಂದು ಥಿಯೇಟರ್‌ಗೆ ಹೋಗುವ ಪ್ರೇಕ್ಷಕರಿಗೆ ಸ್ವಲ್ಪ ಮಟ್ಟಿನ ನಿರಾಸೆಯಾದರೂ, ಸಿನೆಮಾದ ಕ್ವಾಲಿಟಿ, ಮೇಕಿಂಗ್ ಮತ್ತು ಗ್ರಾಫಿಕ್ಸ್ ಬಳಕೆಗೆ ಮರುಳಾಗುವುದು ಸುಳ್ಳಲ್ಲ.

‘ಸ್ಪೂಕಿ ಕಾಲೇಜ್’ ಸಂಪೂರ್ಣವಾಗಿ ಕಾಲೇಜ್‌ನಲ್ಲೇ ನಡೆಯುವ ಕಥೆ. ಅಲ್ಲಲ್ಲಿ ಮಾತ್ರ ಒಂದೆರಡು ಲೊಕೇಷನ್ ಬೇರೆಯಾಗುತ್ತದೆ ಅನ್ನುವುದನ್ನು ಬಿಟ್ಟರೆ, ಇಡೀ ಸಿನೆಮಾ ಸಾಗುವುದೇ ಕಾಲೇಜ್ ಕ್ಯಾಂಪಸ್‌ನಲ್ಲಿ. ಭೂತಕಾಲದ ನೆನಪು ಹೊತ್ತು ದೆವ್ವವಾಗಿ ಬರುವ ನಾಯಕ, ಪ್ರೇಮಿಗಳಿಗೆ ಹೇಗೆಲ್ಲಾ ತೊಂದರೆ ಕೊಡುತ್ತಾನೆ ಅನ್ನುವುದೇ ಚಿತ್ರದ ಒನ್ಲೈನ್ ಸ್ಟೋರಿ. ಅಷ್ಟಕ್ಕೂ ಇಲ್ಲಿ ನಾಯಕ ದೆವ್ವವಾಗಿ ಕಾಡುವುದು ಯಾಕೆ? ಪ್ರೀತಿ ಪ್ರೇಮ ಅಂದರೆ ಯಾಕೆ ದ್ವೇಷಿಸುತ್ತಾನೆ? ಅವನಿಗೂ ನಾಯಕಿಗೂ ಇರುವ ಸಂಬಂಧ ಏನು? ಅನ್ನುವುದು ಗೊತ್ತಾಗ್ಬೇಕಾದ್ರೆ ಸಿನೆಮಾ ನೋಡ್ಲೇಬೇಕು.

ನಾಯಕ ರಿಷಿ ಹಾಗೂ ನಾಯಕಿ ಖುಷಿ ಇಬ್ಬರೂ ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಅದರಲ್ಲೂ ನಾಯಕಿ ಖುಷಿಯ ಅಭಿನಯಕ್ಕೆ ಪ್ರೇಕ್ಷಕರು ಫುಲ್‌ಮಾರ್ಕ್ಸ್ ಕೊಟ್ಟಿದ್ದಾರೆ. ಪ್ರೀತಿ, ಪ್ರೇಮ ಎಂದು ಮೈ ಮರೆಯೋ ಯುವ ಪೀಳಿಗೆ, ಭವಿಷ್ಯದ ಬಗ್ಗೆ ಯೋಚಿಸದೆ ಹೇಗೆಲ್ಲಾ ಎಡವಟ್ಟುಗಳನ್ನು ಮಾಡಿಕೊಳ್ಳುತ್ತಾರೆ? ಯೌವನದ ಅಮಲಲ್ಲಿ ಮೈ ಮರೆತರೆ ಏನೆಲ್ಲಾ ತೊಂದರೆಗಳಾಗುತ್ತದೆ ಅನ್ನುವುದನ್ನು ಈ ಸಿನೆಮಾದ ಮೂಲಕ ಹೇಳಿದ್ದಾರೆ ನಿರ್ದೇಶಕ ಭರತ್. ಮೊದಲ ಪ್ರಯತ್ನದಲ್ಲೇ ನಿರ್ದೇಶಕ ಭರತ್, ಮೇಕಿಂಗ್‌ನಲ್ಲಿ ಮೋಡಿ ಮಾಡುತ್ತಾರೆ. ಆದರೆ ಕಥೆ ಇನ್ನೂ ಸ್ವಲ್ಪಗಟ್ಟಿಯಾಗಿದ್ದಿದ್ದರೆ, ಭಯಾನಕ ಅನುಭವ ಕೊಡುತ್ತಿತ್ತೋ ಏನೋ. ಅಷ್ಟಕ್ಕೂ ಐ ಲವ್ ಯೂ ಎಂದು ಹೇಳೋ ಪ್ರೇಮಿಗಳನ್ನು ಕಂಡರೆ ಆಗದಿರುವ ದೆವ್ವಕ್ಕೂ, ಕಾಲೇಜಿಗೂ ಏನು ಸಂಬಂಧ? ದೆವ್ವಕ್ಕೂ, ನಾಯಕಿಗೂ ಇರುವ ಸಂಬಂದ ಏನು ಅನ್ನೋದನ್ನು ಅಚ್ಚುಕಟ್ಟಾಗಿ ಕಟ್ಟಿಕೊಡೋ ಪ್ರಯತ್ನ ಮಾಡಿದ್ದಾರೆ ನಿರ್ದೇಶಕರು. ಮೊದಲ ಸಿನೆಮಾದಲ್ಲೇ ಹಾರರ್ ಕಥೆಯ ಜೊತೆ ಬಂದಿರುವ ನಿರ್ದೇಶಕರು, ಹಿನ್ನೆಲೆ ಸಂಗೀತದ ಸ್ಕೋರ್ ಬಗ್ಗೆ ಇನ್ನೂ ಸ್ವಲ್ಪಗಮನ ಕೊಟ್ಟಿದ್ದರೂ ಸಿನೆಮಾ ಬೇರೆಯದ್ದೇ ಲೆವೆಲ್‌ನಲ್ಲಿ ಸದ್ದು ಮಾಡುತ್ತಿತ್ತೇನೋ. ನಾಯಕ ಮತ್ತು ನಾಯಕಿಯ ಅಭಿನಯ ಪ್ರೇಕ್ಷಕರನ್ನು ಕಾಡದೇ ಇರುವುದಿಲ್ಲ. ಚಾಲೆಂಜಿಂಗ್ ಪಾತ್ರದಲ್ಲಿ ಅಭಿನಯಿಸಿರುವ ನಾಯಕ ರಿಷಿ, ಪಾತ್ರಕ್ಕೆ ಜೀವ ತುಂಬುವ ಪ್ರಯತ್ನ ಮಾಡಿದ್ದಾರೆ. ಇನ್ನು ನಾಯಕಿ ಖುಷಿಯಂತೂ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಅಲ್ಲಲ್ಲಿ ಕಾಮಿಡಿ ಕಿಕ್ ಕೊಟ್ಟರೆ, ಸಿನೆಮಾದಲ್ಲಿ ಬರುವ ಹಾಡುಗಳು ಮೋಡಿ ಮಾಡಿವೆ.. ಹಾಡಿನಲ್ಲಿ ರೀಷ್ಮಾ ನಾಣಯ್ಯ ಪ್ರೇಕ್ಷಕರನ್ನು ಕಾಡುತ್ತಾರೆ. ಸಿನೆಮಾದ ಎಡಿಟಿಂಗ್ ಗಮನ ಸೆಳೆಯುತ್ತದೆ.

ಚಿತ್ರದ ಮತ್ತೊಂದು ಪ್ಲಸ್ ಪಾಯಿಂಟ್ ಅಂದರೆ ಅದು, ಛಾಯಾಗ್ರಹಣ. ಹೌದು ಮನೋಹರ್ ಜೋಷಿ ಕ್ಯಾಮರಾ ಕೈಚಳಕ ಮೋಡಿ ಮಾಡುವಂತಿದೆ. ಕತ್ತಲು, ಬೆಳಕಿನಾಟವನ್ನು ಜೋಷಿ, ಸುಂದರವಾಗಿ ಸೆರೆ ಹಿಡಿದಿದ್ದಾರೆ. ಕೆಲವು ದೃಶ್ಯಗಳಲ್ಲಂತೂ ಕ್ಯಾಮರಾ ಕೈಚಳಕವೇ ಎದ್ದು ಕಾಣಿಸುತ್ತದೆ. ಗ್ರಾಫಿಕ್ಸ್ ಬಳಕೆಗೂ ಅಷ್ಟೇ ಒತ್ತು ಕೊಟ್ಟಿರುವ ನಿರ್ದೇಶಕರು, ಆದಷ್ಟು ನೈಜವಾಗಿಯೇ ಗ್ರಾಫಿಕ್ ಡಿಸೈನ್ ಮಾಡಿಸಿದ್ದಾರೆ. ಕಥೆಯಲ್ಲಿ ಸ್ವಲ್ಪಧಮ್ ಇದ್ದಿದ್ರೆ, ಈ ಸಿನೆಮಾ ಪ್ರೇಕ್ಷಕರನ್ನು ಗಾಢವಾಗಿ ಕಾಡುವುದರಲ್ಲಿ ಅನುಮಾನವೇ ಇರಲಿಲ್ಲ. ಆದರೂ ನವ ನಿರ್ದೇಶಕನ ಹಾರರ್ ಪ್ರಯತ್ನವನ್ನು ಒಮ್ಮೆ ನೋಡುವುದಕ್ಕೆ ಯಾವುದೇ ಮೋಸವಿಲ್ಲ.

ಸಿನೆಮಾ: ಸ್ಪೂಕಿ ಕಾಲೇಜ್

ತಾರಾಗಣ: ವಿವೇಕ್ ಸಿಂಹ (ನಾಯಕ), ಖುಷಿ (ನಾಯಕಿ), ರೀಷ್ಮಾ ನಾಣಯ್ಯ, ವಿಜಯ್ ಚಂಡೂರ್

ನಿರ್ದೇಶಕರು: ಭರತ್ ಜಿ.

ನಿರ್ಮಾಪಕ: ಎಚ್.ಕೆ. ಪ್ರಕಾಶ್

ಸಂಗೀತ ನಿರ್ದೇಶಕ: ಅಜನೀಶ್ ಲೋಕನಾಥ್

Similar News