ಇಂಡಿಗೋ ವಿಮಾನದಲ್ಲಿ ಮದ್ಯಪಾನ: ಇಬ್ಬರು ಪ್ರಯಾಣಿಕರ ಬಂಧನ
ಪಾಟ್ನಾ: ದಿಲ್ಲಿ-ಪಾಟ್ನಾ ಇಂಡಿಗೋ ವಿಮಾನ 6E-6383 ದಲ್ಲಿ ಮದ್ಯಪಾನ ಮಾಡುತ್ತಿದ್ದ ಇಬ್ಬರು ಪ್ರಯಾಣಿಕರನ್ನು ಪಾಟ್ನಾ ವಿಮಾನ ನಿಲ್ದಾಣ ಪೊಲೀಸರು ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) ಸಹಾಯದಿಂದ ರವಿವಾರ ಸಂಜೆ ಬಂಧಿಸಿದ್ದಾರೆ. ದೇಶೀಯ ವಿಮಾನದಲ್ಲಿ ಮದ್ಯಪಾನ ನಿರ್ಬಂಧಿಸಲಾಗಿದೆ.
ವಿಮಾನದಲ್ಲಿ ಯಾವುದೇ ಗಲಾಟೆ ನಡೆದಿಲ್ಲ ಎಂದು ಮೂಲಗಳು ತಿಳಿಸಿದ್ದು, ವಿಮಾನ ನಿಲ್ದಾಣದ ಎಸ್‌ಎಚ್‌ಒ ರಾಬರ್ಟ್ ಪೀಟರ್ ಅವರು ಇಬ್ಬರು ಅಮಲೇರಿದ ಪ್ರಯಾಣಿಕರನ್ನು ಬಂಧಿಸಿರುವುದನ್ನು ಖಚಿತಪಡಿಸಿದ್ದಾರೆ ಹಾಗೂ ಇಬ್ಬರನ್ನು ನ್ಯಾಯಾಲಯಕ್ಕೆ ಕರೆದೊಯ್ಯಲಾಗುವುದು ಎಂದು ಅವರು ಹೇಳಿದರು.
ಪ್ರೋಟೋಕಾಲ್ ಪ್ರಕಾರ, ಏರ್‌ಲೈನ್ಸ್ ಏರ್ ಟ್ರಾಫಿಕ್ ಕಂಟ್ರೋಲರ್‌ಗೆ ಮಾಹಿತಿ ನೀಡಿತು. ವಿಮಾನ ಆಗಮನದ ನಂತರ ಅವರನ್ನು ಬಂಧಿಸಲಾಯಿತು ಎಂದು ಮೂಲಗಳು ತಿಳಿಸಿವೆ.
ದಿಲ್ಲಿಯಿಂದ ವಿಮಾನ ಹತ್ತುವಾಗ ಇಬ್ಬರೂ ಪ್ರಯಾಣಿಕರು ಅದಾಗಲೇ ಕುಡಿದಿದ್ದರು ಮತ್ತು 80 ನಿಮಿಷಗಳ ವಿಮಾನ ಯಾನದಲ್ಲಿ ಕುಡಿಯಲು ಪ್ರಯತ್ನಿಸಿದರು.
ಸಿಐಎಸ್ಎಫ್ ಅವರನ್ನು ವಶಕ್ಕೆ ಪಡೆದು ನಂತರ ವಿಮಾನ ನಿಲ್ದಾಣ ಪೊಲೀಸರಿಗೆ ಒಪ್ಪಿಸಿದೆ.