ಅಮೆರಿಕದ ಪ್ರಪ್ರಥಮ ಮಹಿಳಾ ಸಿಖ್ ನ್ಯಾಯಾಧೀಶೆಯಾಗಿ ಪ್ರಮಾಣ ವಚನ ಸ್ವೀರಿಸಿದ ಮನ್‌ಪ್ರೀತ್ ಮೋನಿಕಾ ಸಿಂಗ್‌

Update: 2023-01-09 10:43 GMT

ಹೂಸ್ಟನ್: ಭಾರತೀಯ ಮೂಲದ ಮನ್‌ಪ್ರೀತ್ ಮೋನಿಕಾ ಸಿಂಗ್ (Manpreet Monica Singh) ಅವರು ಹ್ಯಾರಿಸ್ ಕೌಂಟಿಯ ನ್ಯಾಯಾಧೀಶೆಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದು, ಆ ಮೂಲಕ ಅಮೆರಿಕಾದ ಪ್ರಪ್ರಥಮ ಮಹಿಳಾ ಸಿಖ್ ನ್ಯಾಯಾಧೀಶೆ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ ಎಂದು ndtv.com ವರದಿ ಮಾಡಿದೆ.

ಮನ್‌ಪ್ರೀತ್ ಮೋನಿಕಾ ಸಿಂಗ್ ಅವರು ಹುಟ್ಟಿ, ಬೆಳೆದದ್ದು ಹೂಸ್ಟನ್ ನಗರದಲ್ಲಾದರೂ ಈಗ ತಮ್ಮ ಪತಿ ಮತ್ತು ಇಬ್ಬರು ಮಕ್ಕಳೊಂದಿಗೆ ವಾಸಿಸುತ್ತಿರುವುದು ಬೆಲ್ಲೇರ್‌ನಲ್ಲಿ. ಟೆಕ್ಸಾಸ್‌ನ ಲಾ ನಂ. 4ರಲ್ಲಿರುವ ಹ್ಯಾರಿಸ್ ಕೌಂಟಿ ಸಿವಿಲ್ ಕೋರ್ಟ್ ನ್ಯಾಯಾಧೀಶೆಯಾಗಿ ಅವರು ಶುಕ್ರವಾರ ಪ್ರಮಾಣ ವಚನ ಸ್ವೀಕರಿಸಿದರು.

ಮನ್‌ಪ್ರೀತ್ ಮೋನಿಕಾ ಸಿಂಗ್ ಅವರ ತಂದೆ 1970ರ ದಶಕದಲ್ಲಿ ಅಮೆರಿಕಾಗೆ ವಲಸೆ ಬಂದಿದ್ದರು. ವಿಚಾರಣಾಧೀನ ವಕೀಲೆಯಾಗಿ 20 ವರ್ಷಗಳ ಕಾಲ ಕಾರ್ಯನಿರ್ವಹಿಸಿರುವ ಅವರು, ಸ್ಥಳೀಯ, ರಾಜ್ಯ ಮತ್ತು ರಾಷ್ಟ್ರ ಮಟ್ಟದ ಹಲವಾರು ನಾಗರಿಕ ಹಕ್ಕು ಸಂಘಟನೆಗಳೊಂದಿಗೆ ಗುರುತಿಸಿಕೊಂಡಿದ್ದಾರೆ.

ಪ್ರಮಾಣ ವಚನ ಸ್ವೀಕರಿಸಿ ಮಾತನಾಡಿದ ಮನ್‌ಪ್ರೀತ್ ಮೋನಿಕಾ ಸಿಂಗ್, "ನಾನು ಎಚ್-ಟೌನ್ ( ಹೂಸ್ಟನ್ ನಗರದ ಅಡ್ಡ ಹೆಸರು) ಪ್ರತಿನಿಧಿಸುವುದರಿಂದ ಈ ಹುದ್ದೆಯು ನನಗೆ ಅಪರಿಮಿತವಾದುದಾಗಿದೆ. ನಾನು ಇದರಿಂದ ಸಂತಸಗೊಂಡಿದ್ದೇನೆ" ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

ಕಿಕ್ಕಿರಿದು ತುಂಬಿದ್ದ ನ್ಯಾಯಾಲಯ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಪ್ರಮಾಣ ವಚನ ಸಮಾರಂಭದ ಅಧ್ಯಕ್ಷತೆಯನ್ನು ಅಮೆರಿಕಾದ ಮೊಟ್ಟ ಮೊದಲ ದಕ್ಷಿಣ ಏಶ್ಯಾ ಮೂಲದ ನ್ಯಾಯಾಧೀಶ ಹಾಗೂ ಭಾರತೀಯ ಅಮೆರಿಕ ಪ್ರಜೆ ರವಿ ಸಂದಿಲ್ ವಹಿಸಿದ್ದರು. ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, "ಸಿಖ್ ಸಮುದಾಯದ ಪಾಲಿಗೆ ಇದು ನಿಜಕ್ಕೂ ಮಹತ್ವದ ಕ್ಷಣ" ಎಂದು ಶ್ಲಾಘಿಸಿದರು.

"ಸಿಖ್ ಸಮುದಾಯದ ಪಾಲಿಗೆ ಇದು ಹೆಮ್ಮೆಯ ದಿನ ಮಾತ್ರವಲ್ಲದೆ ಹೂಸ್ಟನ್ ನಗರದ ವಿವಿಧತೆಯನ್ನು ನ್ಯಾಯಾಲಯಗಳಲ್ಲಿನ ವಿವಿಧತೆಯಲ್ಲಿ ಕಂಡಿರುವ ಎಲ್ಲ ವರ್ಣೀಯರ ಪಾಲಿಗೂ ಹೆಮ್ಮೆಯ ದಿನವಾಗಿದೆ" ಎಂದು ಹೂಸ್ಟನ್ ಮೇಯರ್ ಸಿಲ್ವೆಸ್ಟರ್ ಟರ್ನರ್ ಬಣ್ಣಿಸಿದರು.

ಅಮೆರಿಕಾದಲ್ಲಿ ಸಿಖ್ ಸಮುದಾಯದ 50,000 ಮಂದಿ ವಾಸಿಸುತ್ತಿದ್ದು, ಈ ಪೈಕಿ  20,000 ಮಂದಿ ಹೂಸ್ಟನ್ ನಗರದಲ್ಲೇ ವಾಸಿಸುತ್ತಿದ್ದಾರೆ. ಹೂಸ್ಟನ್ ನಗರ ವಿವಿಧ ಧರ್ಮ, ಬಣ್ಣದ ಸಮುದಾಯಗಳ ಪಾಲಿನ ಆಶ್ರಯ ತಾಣವಾಗಿದ್ದು, ತನ್ನ ವೈವಿಧ್ಯತೆಗೆ ಹೆಸರಾಗಿದೆ.

ಇದನ್ನೂ ಓದಿ: ಪ್ರಧಾನಿ ಮೋದಿ ಇಂದೋರ್ ಭೇಟಿಗೂ ಮುನ್ನ ಪಾದಚಾರಿ ಮಾರ್ಗಕ್ಕೆ ʼತಿರಂಗದ ಬಣ್ಣʼ: ಜನರಿಂದ ಭಾರೀ ಆಕ್ರೋಶ

Similar News