'ಪಠಾಣ್' ಟ್ರೈಲರ್ ಬಿಡುಗಡೆ: ಸಾಹಸ ದೃಶ್ಯಗಳಿಂದ ಅಭಿಮಾನಿಗಳ ಕುತೂಹಲ ಇಮ್ಮಡಿಗೊಳಿಸಿದ ಶಾರೂಖ್ ಖಾನ್

Update: 2023-01-10 10:08 GMT

ಮುಂಬೈ: ಶಾರೂಖ್ ಖಾನ್ (Shah Rukh Khan), ದೀಪಿಕಾ ಪಡುಕೋಣೆ (Deepika Padukone) ಜೋಡಿಯಾಗಿ ನಟಿಸಿರುವ 'ಪಠಾಣ್' (Pathaan ) ಚಿತ್ರ ಜನವರಿ 15ರ ಸಂಕ್ರಾಂತಿಯಂದು ಬಿಡುಗಡೆಯಾಗುತ್ತಿದ್ದು, ಚಿತ್ರದ ಟ್ರೈಲರ್ ಬಿಡುಗಡೆಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು. ನಟ ಶಾರೂಖ್ ಖಾನ್ ಹಾಗೂ ಚಿತ್ರ ನಿರ್ಮಾಪಕರು ನೀಡಿದ್ದ ಭರವಸೆಯಂತೆಯೇ 'ಪಠಾಣ್' ಚಿತ್ರದ ಟ್ರೈಲರ್ ಸೋಮವಾರ  ಬಿಡುಗಡೆಯಾಗಿದೆ. ಚಿತ್ರದ ದೃಶ್ಯಗಳೂ ಸೀಟಿ ಗಿಟ್ಟಿಸುವ ಸಂಭಾಷಣೆ, ರೋಮಾಂಚಕ ಸಾಹಸ ದೃಶ್ಯಗಳು ಹಾಗೂ ಮೈಕಾವೇರಿಸುವಂಥ ಪ್ರಣಯ ಸನ್ನಿವೇಶಗಳನ್ನು ಒಳಗೊಂಡಿದ್ದು, ಅಭಿಮಾನಿಗಳ ಚಿತ್ರ ವೀಕ್ಷಣೆಯ ಕುತೂಹಲವನ್ನು ಇಮ್ಮಡಿಗೊಳಿಸಿವೆ.

'ಪಠಾಣ್' ಚಿತ್ರದ ಟ್ರೈಲರ್ ಬಿಡುಗಡೆಗೂ ಮುನ್ನ ಶಾರೂಖ್ ಖಾನ್, ಪಠಾಣ್ ಚಿತ್ರದಲ್ಲಿನ ತನ್ನ ಚಿತ್ರವೊಂದನ್ನು ಬಿಡುಗಡೆ ಮಾಡಿದ್ದರು. ಆ ಚಿತ್ರದಲ್ಲಿ ಶಾರೂಖ್ ಖಾನ್ ಬೇಡಿ ತೊಟ್ಟಿರುವ ಕೈಯಲ್ಲಿ ಗನ್ ಹಿಡಿದುಕೊಂಡಿದ್ದಾರೆ. ಅದೇ ಚಿತ್ರವನ್ನು ಟ್ವಿಟರ್‌ನಲ್ಲೂ ಹಂಚಿಕೊಂಡಿದ್ದ ಶಾರೂಖ್ ಖಾನ್, "ಕಾರ್ಯಾಚರಣೆ ಇನ್ನೇನು ಶುರುವಾಗಲಿದೆ. ಬರುತ್ತಾ ಇದೆ #PathaanTrailor. ಸೋಮವಾರ ಬೆಳಗ್ಗೆ 11 ಗಂಟೆಗೆ ಬಿಡುಗಡೆಯಾಗಲಿದೆ" ಎಂಬ ಟಿಪ್ಪಣಿ ಬರೆದಿದ್ದರು.

ಇದಕ್ಕೂ ಮುನ್ನ ಶಾರೂಖ್ ಖಾನ್ ಜನ್ಮದಿನವಾದ ನವೆಂಬರ್ 2ರಂದು 'ಪಠಾಣ್' ಚಿತ್ರದ ಟೀಸರ್ ಬಿಡುಗಡೆಯಾಗಿತ್ತು. ಚಿತ್ರದ ಟ್ರೈಲರ್ ಅನ್ನು ಶೀಘ್ರವೇ, ಸರಿಯಾದ ಸಮಯದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಭರವಸೆ ನೀಡಿದ್ದರು. 

ಟ್ರೈಲರ್ ಕುತೂಹಲಕಾರಿಯಾಗಿ ಮೂಡಿ ಬಂದಿರುವುದರಿಂದ ಚಿತ್ರದ ಬಗ್ಗೆ ಅಭಿಮಾನಿಗಳ ನಿರೀಕ್ಷೆಯೂ ಮೇರೆ ಮೀರಿದೆ.

Full View

Similar News