ಚಿನ್ನಾಭರಣ ಅಂಗಡಿಯಲ್ಲಿ ದರೋಡೆ ಪ್ರಕರಣ: ನ್ಯಾಯಾಲಯಕ್ಕೆ ಶರಣಾದ ಕೇಂದ್ರ ಸಚಿವ ನಿಶಿತ್ ಪ್ರಾಮಾಣಿಕ್

Update: 2023-01-10 15:43 GMT

ಕೋಲ್ಕತ್ತಾ: 2009ರಲ್ಲಿ ಅಲಿಪುರ್ದೌರ್ ಪ್ರದೇಶದ ಎರಡು ಚಿನ್ನಾಭರಣ ಅಂಗಡಿಯಲ್ಲಿ ನಡೆದಿದ್ದ ದರೋಡೆ ಪ್ರಕರಣವೊಂದರಲ್ಲಿ ಪಾತ್ರವಿತ್ತು ಎಂಬ ಆರೋಪಕ್ಕೆ ಗುರಿಯಾಗಿರುವ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿಶಿತ್ ಪ್ರಾಮಾಣಿಕ್ (Nisith Pramanik) ಮಂಗಳವಾರ ಅಲಿಪುರ್ದೌರ್ ಜಿಲ್ಲಾ ನ್ಯಾಯಾಲಯಕ್ಕೆ ಶರಣಾಗಿದ್ದಾರೆ ಎಂದು ವರದಿಯಾಗಿದೆ.

ಕಳೆದ ನವೆಂಬರ್ ತಿಂಗಳಲ್ಲಿ ಅಲಿಪುರ್ದೌರ್‌ನ ಮೂರನೆ ಜಿಲ್ಲಾ ನ್ಯಾಯಾಲಯವು ಕೂಚ್ ಬೆಹಾರ್ ಲೋಕಸಭಾ ಕ್ಷೇತ್ರದ ಸಂಸದ ನಿಶಿತ್ ಪ್ರಾಮಾಣಿಕ್‌ಗೆ ಬಂಧನದ ವಾರೆಂಟ್ ಜಾರಿ ಮಾಡಿತ್ತು. ನಂತರ ಹೈಕೋರ್ಟ್ ಮೊರೆ ಹೋಗಿದ್ದ ಪ್ರಾಮಾಣಿಕ್, ಜಾಮೀನಿಗಾಗಿ ಮನವಿ ಸಲ್ಲಿಸಿದ್ದರು.

ಜಾಮೀನು ಅರ್ಜಿಯ ವಿಸ್ತೃತ ವಿಚಾರಣೆ ನಡೆಸಿದ ಕೋಲ್ಕತ್ತಾ ಹೈಕೋರ್ಟ್, ಜನವರಿ 12ರೊಳಗೆ ಅಲಿಪುರ್ದೌರ್ ಜಿಲ್ಲಾ ನ್ಯಾಯಾಲಯಕ್ಕೆ ಖುದ್ದು ಹಾಜರಾಗುವಂತೆ ಸೂಚಿಸಿತ್ತು. ಹೈಕೋರ್ಟ್ ಸೂಚನೆಯಂತೆ ಪ್ರಾಮಾಣಿಕ್ ಜಿಲ್ಲಾ ನ್ಯಾಯಾಲಯಕ್ಕೆ ಮಂಗಳವಾರ ಶರಣಾದರು. ನ್ಯಾಯಾಲಯದಲ್ಲಿ ಸುಮಾರು 45 ನಿಮಿಷಗಳ ಕಾಲ ಪ್ರಾಮಾಣಿಕ್ ಹಾಜರಿದ್ದರು. ಮುಂದಿನ ವಿಚಾರಣೆಗಳಲ್ಲಿ ಅವರು ಖುದ್ದಾಗಿ ಹಾಜರಿರಬೇಕಾದ ಅಗತ್ಯವಿಲ್ಲ. ಅವರ ಪರ ಅವರ ವಕೀಲರು ಹಾಜರಿದ್ದರೆ ಸಾಕು ಎಂದು ಹೈಕೋರ್ಟ್ ಆದೇಶಿಸಿದೆ.

ನ್ಯಾಯಾಲಯದಿಂದ ಹೊರ ಬಂದ ಅವರು, ರಾಜ್ಯದಲ್ಲಿರುವ ವಿರೋಧ ಪಕ್ಷಗಳ ನಾಯಕರನ್ನು ರಾಜ್ಯ ಸರ್ಕಾರ ನಿರಂತರವಾಗಿ ಸುಳ್ಳು ಪ್ರಕರಣಗಳಲ್ಲಿ ಸಿಲುಕಿಸುತ್ತಿದೆ. ಇದು ನನ್ನನ್ನು ಸಿಲುಕಿಸಲು ಮಾಡಲಾಗಿರುವ ರಾಜಕೀಯ ಪಿತೂರಿ ಎಂದು ಆರೋಪಿಸಿದ್ದಾರೆ.

Similar News