ದೆಹಲಿ ದೇಶದ ಅತ್ಯಂತ ಮಲಿನ ನಗರ !

Update: 2023-01-11 02:53 GMT

ಹೊಸದಿಲ್ಲಿ: ರಾಷ್ಟ್ರ ರಾಜಧಾನಿ ದೆಹಲಿ, ದೇಶದ ಅತ್ಯಂತ ಮಲಿನ ನಗರ ಎಂಬ ಕುಖ್ಯಾತಿಗೆ ಪಾತ್ರವಾಗಿದೆ. ಅತ್ಯಂತ ಮಲಿನ ನಗರಗಳ ಪಟ್ಟಿಯಲ್ಲಿ 2019ರಲ್ಲಿ ಮೂರನೇ ಸ್ಥಾನದಲ್ಲಿದ್ದ ದೆಹಲಿ ಕಳೆದ ವರ್ಷ ಎರಡನೇ ಸ್ಥಾನದಲ್ಲಿತ್ತು ಎಂದು ನ್ಯಾಷನಲ್ ಕ್ಲೀನ್ ಏರ್ ಪ್ರೋಗ್ರಾಂ (ಎನ್‌ಸಿಎಪಿ) ಟ್ರ್ಯಾಕರ್ ಆಧರಿತ ವಾರ್ಷಿಕ ಪಿಎಂ 2.5 ಮಟ್ಟವನ್ನು ಮಾಪನ ಮಾಡಿದ ಕೇಂದ್ರೀಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಕಟಿಸಿದೆ.

2019ರಿಂದೀಚೆಗೆ ದೆಹಲಿಯ ವಾರ್ಷಿಕ ಪಿಎಂ2.5 ಮಟ್ಟ ಶೇಕಡ 7.4ರಷ್ಟು ಸುಧಾರಿಸಿದ್ದು, 2019ರಲ್ಲಿ ಪ್ರತಿ ಘನ ಮೀಟರ್‌ಗೆ 108 ಮೈಕ್ರೊಗ್ರಾಂ ಇದ್ದ ಪಿಎಂ2.5 ಮಟ್ಟ ಇದೀಗ 99.7 ಮೈಕ್ರೋಗ್ರಾಂ ಆಗಿದೆ. 2019ರ ಪಟ್ಟಿಯಲ್ಲಿ ರಾಷ್ಟ್ರ ರಾಜಧಾನಿಗಿಂತ ಮೇಲಿದ್ದ ಗಾಝಿಯಾಬಾದ್ ಮತ್ತು ನೋಯ್ಡಾದಲ್ಲಿ ಕ್ರಮವಾಗಿ ಶೇಕಡ 22.2 ಹಾಗೂ 29.8ರಷ್ಟು ಸುಧಾರಣೆ ಕಂಡುಬಂದಿದೆ.

ಕೇಂದ್ರ ಸರ್ಕಾರ 2019ರಲ್ಲಿ ಎನ್‌ಸಿಪಿಎ ಆರಂಭಿಸಿತ್ತು. ಪ್ರಮುಖ ಮಾಲಿನ್ಯ ಕಾರಕ ಕಣಗಳಾದ ಪಿಎಂ10 ಮತ್ತು ಪಿಎಂ 2.5 ಮಟ್ಟವನ್ನು 2024ರ ಒಳಗಾಗಿ 131 ಕಳಪೆ ಸಾಧನೆಯ ನಗರ ಮತ್ತು ಪಟ್ಟಣ ಕೇಂದ್ರಗಳಲ್ಲಿ ಶೇಕಡ 20-30ರಷ್ಟು ಕಡಿಮೆ ಮಾಡುವ ಗುರಿ ಹಾಕಿಕೊಳ್ಳಲಾಗಿತ್ತು. 2022ರ ಸೆಪ್ಟೆಂಬರ್‌ನಲ್ಲಿ ಕೇಂದ್ರ ಸರ್ಕಾರ ಪರಿಷ್ಕೃತ ಗುರಿಯನ್ನು ನಿಗದಿಪಡಿಸಿ, ಪಿಎಂ ಮಟ್ಟವನ್ನು 2026ರ ಒಳಗಾಗಿ ಶೇಕಡ 40ರಷ್ಟು ಕಡಿಮೆ ಮಾಡಲು ಉದ್ದೇಶಿಸಿತ್ತು. ಇದಕ್ಕಾಗಿ 6897.06 ಕೋಟಿ ರೂಪಾಯಿಗಳನ್ನು ಈ ಯೋಜನೆಯಡಿ ಹಣಕಾಸು ಆಯೋಗದಿಂದ ಬಿಡುಗಡೆ ಮಾಡಲಾಗಿದೆ.

ವಾರ್ಷಿಕ ಸರಾಸರಿ ಸುರಕ್ಷಿತ ಮಟ್ಟ ಪ್ರತಿ ಘನ ಮೀಟರ್‌ಗೆ 40 ಮೈಕ್ರೊಗ್ರಾಂಗಳು. ದೆಹಲಿ ಹೊರತುಪಡಿಸಿ ಫರೀದಾಬಾದ್ (95.6), ಗಾಝಿಯಾಬಾದ್ (91.3), ಪಾಟ್ನಾ (90.9), ಮುಝಫರ್‌ಪುರ (86.9), ನೋಯ್ಡಾ (80.4), ಮೀರತ್ (77.7), ಗೋಬಿಂದ್‌ಗಢ (72.4), ಗಯಾ (70.8) ಮತ್ತು ಜೋಧಪುರ (69.3) ಮಲಿನ ನಗರಗಳ ಪೈಕಿ ಮೊದಲ 10 ಸ್ಥಾನಗಳಲ್ಲಿವೆ.

Similar News