RRR ಚಿತ್ರದ 'ನಾಟು ನಾಟು' ಹಾಡಿಗೆ ಗೋಲ್ಡನ್ ಗ್ಲೋಬ್ ಪ್ರಶಸ್ತಿ

Update: 2023-01-11 05:25 GMT

ಹೊಸ ದಿಲ್ಲಿ: ಗೋಲ್ಡನ್ ಗ್ಲೋಬ್ಸ್ ಪ್ರಶಸ್ತಿ ಆಯ್ಕೆ ಸುತ್ತಿನ ಎರಡು ವಿಭಾಗಕ್ಕೆ ನಾಮನಿರ್ದೇಶನಗೊಂಡಿದ್ದ ಎಸ್.ಎಸ್. ರಾಜಮೌಳಿ ನಿರ್ದೇಶನದ ಬ್ಲಾಕ್‌ಬಸ್ಟರ್ ಸಿನಿಮಾ 'RRR', ತನ್ನ 'ನಾಟು ನಾಟು' ಹಾಡಿಗಾಗಿ ಅತ್ಯುತ್ತಮ ಅಸಲಿ ಹಾಡು ಪ್ರಶಸ್ತಿ ಗಳಿಸಿದೆ. ಆದರೆ, ಇಂಗ್ಲಿಷೇತರ ಅತ್ಯುತ್ತಮ ಚಿತ್ರಗಳ ವಿಭಾಗಕ್ಕೂ ನಾಮನಿರ್ದೇಶನಗೊಂಡಿದ್ದ 'RRR' ಚಿತ್ರ, ಆ ಪ್ರಶಸ್ತಿಯಿಂದ ವಂಚಿತಗೊಂಡಿದೆ. ಈ ವಿಭಾಗದ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿಗೆ ಅರ್ಜೆಂಟೀನಾದ 'ಅರ್ಜೆಂಟೀನಾ, 1985' ಸಿನಿಮಾ ಭಾಜನವಾಯಿತು. ಈ ವಿಭಾಕ್ಕೆ ನಾಮನಿರ್ದೇಶನಗೊಂಡಿದ್ದ ಇತರ ಚಿತ್ರಗಳ ಪೈಕಿ ಜರ್ಮನಿಯ 'ಕ್ವೈಟ್ ಆನ್ ದ ವೆಸ್ಟರ್ನ್ ಫ್ರಂಟ್ಸ್', ಬೆಲ್ಜಿಯಂನ 'ಕ್ಲೋಸ್' ಹಾಗೂ ದಕ್ಷಿಣ ಕೊರಿಯಾದ 'ಡಿಸಿಷನ್ ಟು ಲೀವ್' ಸೇರಿದ್ದವು ಎಂದು ndtv.com ವರದಿ ಮಾಡಿದೆ.

ಗೋಲ್ಡನ್ ಗ್ಲೋಬ್ಸ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ RRR ಸಿನಿಮಾ ಪರವಾಗಿ ಚಿತ್ರದ ನಿರ್ದೇಶಕ ಎಸ್‌.ಎಸ್.ರಾಜಮೌಳಿ, ನಾಯಕ ನಟರಾದ ಜೂನಿಯರ್ ಎನ್‌ಟಿಆರ್ ಹಾಗೂ ತಮ್ಮ ಪತ್ನಿ ಉಪಾಸನಾ ಕಮಿನೇನಿಯೊಂದಿಗೆ ರಾಮಚರಣ್ ಉಪಸ್ಥಿತರಿದ್ದರು.

RRR ಸಿನಿಮಾದಲ್ಲಿ ಜೂನಿಯರ್ ಎನ್‌ಟಿಆರ್ ಹಾಗೂ ರಾಮ್ ಚರಣ್ ಕ್ರಮವಾಗಿ ಸ್ವಾತಂತ್ರ್ಯ ಹೋರಾಟಗಾರರಾದ ಕೋಮರಂ ಭೀಮ್ ಹಾಗೂ ಅಲ್ಲುರಿ ಸೀತಾರಾಮರಾಜು ಪಾತ್ರದಲ್ಲಿ ನಟಿಸಿದ್ದರು. ಈ ಚಿತ್ರದ ಕತೆಯನ್ನು 1920ರ ಬ್ರಿಟಿಷ್ ಆಕ್ರಮಿತ ಭಾರತವನ್ನು ಹಿನ್ನೆಲೆಯಾಗಿಟ್ಟುಕೊಂಡು ಹೆಣೆಯಲಾಗಿತ್ತು. ತಾರಾಗಣದಲ್ಲಿ ಬಾಲಿವುಡ್ ತಾರೆಯರಾದ ಆಲಿಯಾ ಭಟ್, ಅಜಯ್ ದೇವಗನ್‌ರೊಂದಿಗೆ ಬ್ರಿಟಿಷ್ ನಟರಾದ ರೇ ಸ್ಟೀವನ್‌ಸನ್, ಆಲಿಸನ್ ಡೂಡಿ ಮತ್ತು ಒಲಿವಿಯಾ ಮೋರಿಸ್ ಕೂಡಾ ಇದ್ದರು.

RRR ಸಿನಿಮಾ ಜಾಗತಿಕ ಮಟ್ಟದಲ್ಲಿ ರೂ. 1,200 ಕೋಟಿಗೂ ಹೆಚ್ಚು ಗಳಿಕೆ ಮಾಡಿದ್ದು, ಈಗಾಗಲೇ ನ್ಯೂಯಾರ್ಕ್ ಚಲನಚಿತ್ರ ವಿಮರ್ಶಕರ ಬಳಗದಿಂದ ಚಿತ್ರದ ನಿರ್ದೇಶಕ ರಾಜಮೌಳಿಗೆ ದೊರೆತಿರುವ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯೂ ಸೇರಿದಂತೆ ಹಲವಾರು ಅಂತಾರಾಷ್ಟ್ರೀಯ ಪ್ರಶಸ್ತಿಗೆ ಭಾಜನವಾಗಿದೆ. RRR ಚಿತ್ರವು ಹಲವಾರು ಆಸ್ಕರ್ ಪ್ರಶಸ್ತಿ ವಿಭಾಗಕ್ಕೆ ಖುದ್ದು ದಾಖಲಿಸಿಕೊಂಡಿದ್ದು, ಹೆಚ್ಚು ವಿಭಾಗಗಳಲ್ಲದಿದ್ದರೂ, ಕನಿಷ್ಠ ಒಂದು ವಿಭಾಗದಲ್ಲಿ ನಾಮನಿರ್ದೇಶನಗೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಗೋಲ್ಡನ್ ಗ್ಲೋಬ್ಸ್ ಪ್ರಶಸ್ತಿ ಸಮಾರಂಭವನ್ನು ಹಾಸ್ಯ ನಟ ಜೆರ್ರಾಡ್ ಕಾರ್ಮಿಕೇಲ್‌ರೊಂದಿಗೆ ಲಾಸ್ ಏಂಜಲೀಸ್‌ನಲ್ಲಿ ಆಯೋಜಿಸಲಾಗುತ್ತಾ ಬರಲಾಗಿದೆ. ತನ್ನ ಜನಾಂಗೀಯ ಹಾಗೂ ಲಿಂಗಭೇದ ನಡವಳಿಕೆಗಳಿಗಾಗಿ ಹಾಲಿವುಡ್‌ನ ಈ ಪ್ರಮುಖ ಮುಖ್ಯವಾಹಿನಿ ಸಂಸ್ಥೆಗೆ ಹಲವಾರು ಖ್ಯಾತನಾಮರು ಈ ಹಿಂದೆ ಪ್ರಶಸ್ತಿ ಮರಳಿಸಿದ್ದರು. ಕಳೆದ ವರ್ಷ ಇದೇ ಕಾರಣಕ್ಕೆ ಗೋಲ್ಡನ್ ಗ್ಲೋಬ್ಸ್ ಪ್ರಶಸ್ತಿ ಪ್ರದಾನ ಸಮಾರಂಭದ ನೇರ ಪ್ರಸಾರದ ಹೊಣೆ ಹೊತ್ತಿರುವ NBC ಸುದ್ದಿ ಸಂಸ್ಥೆ ಸಮಾರಂಭವನ್ನು ಬಹಿಷ್ಕರಿಸಿತ್ತು. ಇದಲ್ಲದೆ ಟಾಮ್ ಕ್ರೂಸ್ ನೇತೃತ್ವದಲ್ಲಿ ಹಲವಾರು ಪ್ರಖ್ಯಾತ ತಾರೆಯರೂ ತಮ್ಮ ಪ್ರಶಸ್ತಿಗಳನ್ನು ಮರಳಿಸಿದ್ದರು. ಇದಾದ ನಂತರ ಸಂಸ್ಥೆಯು ಆಂತರಿಕ ಬದಲಾವಣೆ ತಂದುಕೊಂಡಿದೆ ಎಂದು ವರದಿಯಾಗಿದೆ.

Similar News