×
Ad

​ರಾಜಪಕ್ಸ ಸಹೋದರರಿಗೆ ಕೆನಡಾ ನಿರ್ಬಂಧ: ಕಾರಣವೇನು ಗೊತ್ತೇ ?

Update: 2023-01-11 23:34 IST

ಒಟ್ಟಾವ, ಜ.11: ಶ್ರೀಲಂಕಾದಲ್ಲಿ ಅಂತರ್ಯುದ್ಧದ ಸಂದರ್ಭ ಮಾನವ ಹಕ್ಕುಗಳ ಉಲ್ಲಂಘನೆಗಾಗಿ ಮಾಜಿ ಅಧ್ಯಕ್ಷರಾದ ಗೊತಬಯ ರಾಜಪಕ್ಸ ಮತ್ತು ಮಹಿಂದಾ ರಾಜಪಕ್ಸ ಸೇರಿದಂತೆ 4 ಸರಕಾರಿ ಅಧಿಕಾರಿಗಳಿಗೆ ಕೆನಡಾ ಮಂಗಳವಾರ ನಿರ್ಬಂಧ ವಿಧಿಸಿದೆ. ಈ ನಾಲ್ಕು ವ್ಯಕ್ತಿಗಳು ಶ್ರೀಲಂಕಾದಲ್ಲಿ 1983ರಿಂದ 2009ರವರೆಗೆ ಸಂಭವಿಸಿದ ಸಶಸ್ತ್ರ ಸಂಘರ್ಷದ ಸಮಯದಲ್ಲಿ ದೇಶದ ಅಲ್ಪಸಂಖ್ಯಾತ ತಮಿಳು ಜನಸಮುದಾಯವನ್ನು ಗುರಿಯಾಗಿಸಿ ನಡೆದಿದ್ದ ಮಾನವ ಹಕ್ಕುಗಳ ಸಮಗ್ರ ಮತ್ತು ವ್ಯವಸ್ಥಿತ ಉಲ್ಲಂಘನೆಗೆ ಜವಾಬ್ದಾರರು’ ಎಂದು ಕೆನಡಾದ ವಿದೇಶಾಂಗ ಸಚಿವಾಲಯದ ಹೇಳಿಕೆ ಉಲ್ಲೇಖಿಸಿದೆ. 

ಈ ನಿರ್ಬಂಧಗಳು ಶ್ರೀಲಂಕಾದಲ್ಲಿ ಸಮಗ್ರ ಮಾನವ ಹಕ್ಕುಗಳ ಉಲ್ಲಂಘನೆ ಮಾಡಿದವರಿಗೆ ಕೆನಡಾದಲ್ಲಿ ಶಿಕ್ಷೆಯಿಂದ ವಿನಾಯಿತಿಯಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ರವಾನಿಸಿದೆ ಎಂದು ಹೇಳಿಕೆ ತಿಳಿಸಿದೆ. ಶ್ರೀಲಂಕಾ ಸೇನಾಪಡೆಯ ಉನ್ನತ ಅಧಿಕಾರಿಗಳಾದ ಸುನಿಲ್ ರತ್ನಾಯಕೆ ಮತ್ತು ಲೆಫ್ಟಿನೆಂಟ್ ಕಮಾಂಡರ್ ಚಂದನಪ್ರಸಾದ ಹೆಟಿಯರಚ್ಚಿ ನಿರ್ಬಂಧ ಪಟ್ಟಿಯಲ್ಲಿ ಸೇರ್ಪಡೆಗೊಂಡಿರುವ ಶ್ರೀಲಂಕಾದ ಇತರ ಇಬ್ಬರಾಗಿದ್ದಾರೆ.

ಎಲ್ಟಿಟಿಇ ನೇತೃತ್ವದಲ್ಲಿ ನಡೆದಿದ್ದ ಪ್ರತ್ಯೇಕತಾವಾದಿ ಹೋರಾಟವನ್ನು 2009ರಲ್ಲಿ ಶ್ರೀಲಂಕಾದ ಸೇನೆ ಹತ್ತಿಕ್ಕಿದ್ದು ಈ ಸಂದರ್ಭ ಮಹಿಂದಾ ರಾಜಪಕ್ಸ ಅಧ್ಯಕ್ಷರಾಗಿದ್ದರು ಮತ್ತು ಅವರ ಸಹೋದರ ಗೊತಬಯ ರಾಜಪಕ್ಸ ರಕ್ಷಣಾ ಸಚಿವರಾಗಿದ್ದರು. ಪ್ರತ್ಯೇಕತಾವಾದಿ ಸಂಘರ್ಷವನ್ನು ಹತ್ತಿಕ್ಕುವ ಅಂತಿಮ ದಿನಗಳಲ್ಲಿ ಶ್ರೀಲಂಕಾ ಸೇನೆ ನಡೆಸಿದ್ದ ಭೀಕರ ಬಾಂಬ್ ದಾಳಿ ಮತ್ತು ತೆರವು ಕಾರ್ಯಾಚರಣೆಯಲ್ಲಿ ತಮಿಳು ಸಮುದಾಯದ ಸುಮಾರು 40,000 ಜನರ ಹತ್ಯೆಯಾಗಿತ್ತು ಎಂದು ಅಂತರಾಷ್ಟ್ರೀಯ ವೀಕ್ಷಕರು ವರದಿ ಮಾಡಿದ್ದರು. 

Similar News