ಆಸ್ಕರ್ ಪ್ರಶಸ್ತಿ ಸುತ್ತಿಗೆ ಕಾಶ್ಮೀರ್ ಫೈಲ್ಸ್ ಎಂದ ವಿವೇಕ್ ಅಗ್ನಿಹೋತ್ರಿ: ಸತ್ಯಾಂಶ ಏನು?

Update: 2023-01-12 04:39 GMT

ಹೊಸದಿಲ್ಲಿ: 'ದಿ ಕಾಶ್ಮೀರ್ ಫೈಲ್ಸ್' (The Kashmir Files) ಚಿತ್ರದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ (Vivek Agnihotri) ಡಿಸೆಂಬರ್ 10ರಂದು ಟ್ವೀಟ್ ಮಾಡಿ ತಮ್ಮ ಚಿತ್ರ ಆಸ್ಕರ್ (Oscars) ಪ್ರಶಸ್ತಿಗೆ ಪರಿಗಣಿತ ಚಿತ್ರಗಳ ಮೊದಲ ಪಟ್ಟಿಯಲ್ಲಿ ಸೇರ್ಪಡೆಯಾಗಿದೆ ಎಂದು ಟ್ವೀಟ್ ಮಾಡಿದ್ದರು. ಈ ಪಟ್ಟಿಯಲ್ಲಿ ಸೇರ್ಪಡೆಯಾದ ಐದು ಭಾರತೀಯ ಚಿತ್ರಗಳ ಪೈಕಿ ಇದೂ ಒಂದು ಎಂದು ಹೇಳಿದ್ದರು. ಚಿತ್ರದ ನಟ ಅನುಪಮ್ ಖೇರ್ ಕೂಡಾ ಈ ಸುದ್ದಿಯನ್ನು ಟ್ವೀಟ್ ಮಾಡಿದ್ದರು.

thelogicalindian.com ಫ್ಯಾಕ್ಟ್ ಚೆಕ್ ತಂಡ ಪರಿಶೀಲಿಸಿದಾಗ ವಿವೇಕ್ ಅಗ್ನಿಹೋತ್ರಿ ಅವರ ಹೇಳಿಕೆಯ ಈ ಟ್ವೀಟ್ ತಪ್ಪುದಾರಿಗೆ ಎಳೆಯುವಂಥದ್ದು ಎಂದು ತಿಳಿದು ಬಂದಿದೆ. ಈ ಚಿತ್ರ ರಿಮೈಂಡರ್ ಲಿಸ್ಟ್‌ನಲ್ಲಿದೆಯೇ ಹೊರತು ಪ್ರಶಸ್ತಿ ಸುತ್ತಿಗೆ ಶಾರ್ಟ್‌ಲಿಸ್ಟ್ ಅಗಿಲ್ಲ ಎನ್ನುವುದು ವಾಸ್ತವ.

ಎನ್‌ಡಿಟಿವಿ ಜನವರಿ 10ರಂದು ಪ್ರಸಾರ ಮಾಡಿದ ವರದಿಯ ಪ್ರಕಾರ, RRR, ಕಾಂತಾರ ಮತ್ತು ಕಾಶ್ಮೀರ್‌ಫೈಲ್ಸ್ ರಿಮೈಂಡರ್ ಲಿಸ್ಟ್‌ನಲ್ಲಿದೆ. ಆಸ್ಕರ್ಸ್‌ 301 ಅರ್ಹ ಚಿತ್ರಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಈ ಮೂರು ಭಾರತೀಯ ಚಿತ್ರಗಳು ಪಟ್ಟಿಯಲ್ಲಿವೆ. ಇತರ ಕೆಲ ಭಾರತೀಯ ಚಿತ್ರಗಳೂ  ಪಟ್ಟಿಯಲ್ಲಿವೆ. ವಿವೇಕ್ ಅಗ್ನಿಹೋತ್ರಿ ಹೇಳಿದಂತೆ ಭಾರತದ ಐದು ಚಲನಚಿತ್ರಗಳ ಬದಲಾಗಿ 10 ಚಲನಚಿತ್ರಗಳು 300 ಚಿತ್ರಗಳ ಪಟ್ಟಿಯಲ್ಲಿವೆ.

ವಾಸ್ತವವಾಗಿ ಈ ರಿಮೈಂಡರ್ ಲಿಸ್ಟ್‌ನಲ್ಲಿರುವ ಚಿತ್ರಗಳ ಮೇಲೆ ಜನವರಿ 12-17ರವರೆಗೆ ಮತದಾನ ನಡೆದು ಪ್ರಶಸ್ತಿ ಸುತ್ತಿಗೆ ನಾಮನಿರ್ದೇಶನ ಮಾಡಲಾಗುತ್ತದೆ. ಜನವರಿ 24ರಂದು ನಾಮನಿರ್ದೇಶನಗೊಂಡ ಚಿತ್ರಗಳ ಹೆಸರು ಬಹಿರಂಗಪಡಿಸಲಾಗುತ್ತದೆ. ಇದುವರೆಗೆ ಶಾರ್ಟ್‌ಲಿಸ್ಟ್ ಆದ ಭಾರತೀಯ ಚಿತ್ರಗಳೆಂದರೆ, ಲಾಸ್ಟ್ ಫಿಲಂ ಶೋ, ಆಲ್ ದಟ್ ಬ್ರೆತ್ಸ್, ಎಲಿಫೆಂಟ್ ವಿಶ್‌ಪರ್ಸ್‌ ಮತ್ತು RRR ಚಿತ್ರದ ನಾಟು ನಾಟು ಹಾಡು.

ಇದನ್ನೂ ಓದಿ: RRR ಸಿನಿಮಾ ಪ್ರದರ್ಶಿಸುವ ಚಿತ್ರಮಂದಿರಗಳಿಗೆ ಬೆಂಕಿ ಹಚ್ಚುತ್ತೇನೆಂದಿದ್ದ BJP ಸಂಸದನಿಂದಲೇ ಚಿತ್ರ ತಂಡಕ್ಕೆ ಅಭಿನಂದನೆ

Similar News