ಹತ್ತು ದಿನದೊಳಗೆ ರೂ. 163 ಕೋಟಿ ರಾಜಕೀಯ ಜಾಹೀರಾತು ಮೊತ್ತ ಪಾವತಿಸುವಂತೆ ಆಪ್‌ಗೆ ನೋಟಿಸ್

Update: 2023-01-12 04:50 GMT

ಹೊಸದಿಲ್ಲಿ: ಸರ್ಕಾರಿ ಜಾಹೀರಾತುಗಳ ಮರೆಯಲ್ಲಿ ತನ್ನ ರಾಜಕೀಯ ಜಾಹೀರಾತು (Political Ads) ಪ್ರಸಾರ ಮಾಡುತ್ತಿದೆ ಎಂದು ಆರೋಪಿಸಿ ದಿಲ್ಲಿ (Delhi) ಸರ್ಕಾರಕ್ಕೆ ರೂ. 163.62 ಕೋಟಿ ಮೊತ್ತದ ವಸೂಲಾತಿ ನೋಟಿಸ್ ಜಾರಿ ಮಾಡಲಾಗಿದೆ ಎಂದು ndtv.com ವರದಿ ಮಾಡಿದೆ.

ಈ ನೋಟಿಸ್ ಅನ್ನು ಮಾಹಿತಿ ಮತ್ತು ಪ್ರಸಾರ ನಿರ್ದೇಶನಾಲಯದ ವತಿಯಿಂದ ಜಾರಿ ಮಾಡಲಾಗಿದ್ದು, ಆ ಮೊತ್ತವನ್ನು ಹತ್ತು ದಿನದೊಳಗಾಗಿ ಪಾವತಿಸುವಂತೆಯೂ ದಿಲ್ಲಿಯ ಆಡಳಿತಾರೂಢ ಸರ್ಕಾರವಾದ ಆಪ್‌ಗೆ (AAP) ಸೂಚಿಸಲಾಗಿದೆ.

"ಮೇಲ್ಕಂಡ ವಿಷಯಕ್ಕೆ ಸಂಬಂಧಪಟ್ಟಂತೆ, ರಾಜ್ಯ ಖಜಾನೆಗೆ ಕೂಡಲೇ ರೂ. 99,31,10,053 ಮೊತ್ತವನ್ನು ಮರುಪಾವತಿಸಲು ಹಾಗೂ ಈವರೆಗೆ ಸರ್ಕಾರದಿಂದ ಪಾವತಿಯಾಗದ ಜಾಹೀರಾತುಗಳಿಗೆ ಸಂಬಂಧಪಟ್ಟ ಸಂಸ್ಥೆಗಳಿಗೆ ಹತ್ತು ದಿನಗಳೊಳಗಾಗಿ ಅಂದಾಜು ರೂ. 7.11 ಕೋಟಿ ಮೊತ್ತವನ್ನು ನೇರವಾಗಿ ಪಾವತಿಸುವಂತೆ ಕೋರಲಾಗಿದೆ" ಎಂದು ನೋಟಿಸ್‌ನಲ್ಲಿ ಸೂಚಿಸಲಾಗಿದೆ.

"ಒಂದು ವೇಳೆ ನಿಗದಿತ ಅವಧಿಯೊಳಗೆ ಮರುಪಾವತಿಸಲು ಆಪ್ ಸಂಚಾಲಕರು ವಿಫಲವಾದರೆ, ದಿಲ್ಲಿ ಲೆಫ್ಟಿನೆಂಟ್ ಗವರ್ನರ್ ಅವರ ಈ ಹಿಂದಿನ ಆದೇಶದನ್ವಯ ಪಕ್ಷದ ಆಸ್ತಿಗಳ ಮುಟ್ಟುಗೋಲು ಸೇರಿದಂತೆ ಎಲ್ಲ ಬಗೆಯ ಸಾಂದರ್ಭಿಕ ಕಾನೂನು ಕ್ರಮ ಕೈಗೊಳ್ಳಲಾಗುವುದು" ಎಂದು ನೋಟಿಸ್‌ನಲ್ಲಿ ಎಚ್ಚರಿಸಲಾಗಿದೆ ಎಂದು ಮೂಲಗಳನ್ನು ಉಲ್ಲೇಖಿಸಿ PTI ಸುದ್ದಿ ಸಂಸ್ಥೆ ವರದಿ ಮಾಡಿದೆ.

ಸರ್ಕಾರಿ ಜಾಹೀರಾತುಗಳ ಮರೆಯಲ್ಲಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಪಕ್ಷವು ರಾಜಕೀಯ ಜಾಹೀರಾತುಗಳನ್ನು ನೀಡುತ್ತಿದೆ ಎಂದು ದಿಲ್ಲಿಯ ಲೆಫ್ಟಿನೆಂಟ್ ಗವರ್ನರ್ ವಿ.ಕೆ.ಸಕ್ಸೇನಾ ಆರೋಪಿಸಿದ ಸರಿಸುಮಾರು ಒಂದು ತಿಂಗಳ ನಂತರ ಈ ಬೆಳವಣಿಗೆಯಾಗಿದೆ.

ಡಿಸೆಂಬರ್ 20ರಂದು ಲೆಫ್ಟಿನೆಂಟ್ ಗವರ್ನರ್ ಅವರು ರೂ. 97 ಕೋಟಿಯನ್ನು ಮರುಪಾವತಿಸುವಂತೆ ಸೂಚಿಸಿದ್ದ ಆದೇಶಕ್ಕೆ ಪ್ರತಿಕ್ರಿಯಿಸಿದ್ದ ಆಪ್ ಪಕ್ಷ, ಅವರಿಗೆ ಅಂತಹ ಆದೇಶ ಹೊರಡಿಸುವ ಯಾವುದೇ ಅಧಿಕಾರವಿಲ್ಲ ಎಂದು ಹೇಳಿತ್ತು. ಈ ಕುರಿತು ಪ್ರತಿಕ್ರಿಯಿಸಿದ್ದ ಆಪ್ ಮುಖ್ಯ ವಕ್ತಾರ ಸೌರಭ್ ಭಾರದ್ವಾಜ್, ಲೆಫ್ಟಿನೆಂಟ್ ಗವರ್ನರ್ ಅವರ ಆದೇಶವನ್ನು ಹೊಸ ಪ್ರೇಮ ಪತ್ರ ಎಂದು ಕಟಕಿಯಾಡಿದ್ದರು.

"ನಾವು ರಾಷ್ಟ್ರೀಯ ಪಕ್ಷವಾಗಿ ಹೊರಹೊಮ್ಮಿರುವುದರಿಂದ ಮತ್ತು ಎಂಸಿಡಿಯನ್ನು ವಶಪಡಿಸಿಕೊಂಡಿರುವುದರಿಂದ ಬಿಜೆಪಿ ಕೆರಳಿದೆ. ಲೆಫ್ಟಿನೆಂಟ್ ಗವರ್ನರ್ ಸಾಹೇಬರು ಬಿಜೆಪಿ ಸೂಚನೆಯಂತೆ ಏನೆಲ್ಲ ಮಾಡಬೇಕೊ ಅದೆಲ್ಲವನ್ನೂ ಮಾಡುತ್ತಿದ್ದು, ಅದರಿಂದ ದಿಲ್ಲಿಯ ಜನತೆ ತೊಂದರೆಗೊಳಗಾಗಿದ್ದಾರೆ. ದಿಲ್ಲಿಯ ಜನತೆ ಎಷ್ಟು ಆತಂಕಿತರಾಗುತ್ತಾರೋ, ಅಷ್ಟು ಖುಷಿ ಬಿಜೆಪಿಗಾಗುತ್ತದೆ" ಎಂದು ವಾಗ್ದಾಳಿ ನಡೆಸಿದ್ದ ಸೌರಭ್ ಭಾರದ್ವಾಜ್, ಕಾನೂನಿನ ಕಣ್ಣಿನಲ್ಲಿ ಲೆಫ್ಟಿನೆಂಟ್ ಗವರ್ನರ್ ಅವರ ಸೂಚನೆ ಊರ್ಜಿತವಾಗುವುದಿಲ್ಲ ಎಂದೂ ಹೇಳಿದ್ದರು.

ಇದನ್ನೂ ಓದಿ: RRR ಸಿನಿಮಾ ಪ್ರದರ್ಶಿಸುವ ಚಿತ್ರಮಂದಿರಗಳಿಗೆ ಬೆಂಕಿ ಹಚ್ಚುತ್ತೇನೆಂದಿದ್ದ BJP ಸಂಸದನಿಂದಲೇ ಚಿತ್ರ ತಂಡಕ್ಕೆ ಅಭಿನಂದನೆ

Similar News