ಚಹಾ ಮಾಡುವ ವೀಡಿಯೊದೊಂದಿಗೆ 'ಇದು ನನ್ನನ್ನು ಎಲ್ಲಿಗೆ ಕೊಂಡೊಯುತ್ತದೆ ಯಾರಿಗೆ ಗೊತ್ತು' ಎಂದ ಟಿಎಂಸಿ ಸಂಸದೆ ಮೊಯಿತ್ರಾ
ಕೋಲ್ಕತಾ: ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ವಿರುದ್ಧ ಕಟು ಟೀಕೆಗೆ ಹೆಸರುವಾಸಿಯಾಗಿರುವ ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ಅವರು ಬಂಗಾಳದ ರಸ್ತೆ ಬದಿಯ ಟೀ ಸ್ಟಾಲ್‌ನಲ್ಲಿ ತಾನು ಚಹಾ ಮಾಡುತ್ತಿರುವ ವೀಡಿಯೊವನ್ನು ಟ್ವೀಟ್ ಮಾಡಿದ್ದಾರೆ.
“ಚಹಾ ಮಾಡಲು ಪ್ರಯತ್ನಿಸುತ್ತಿರುವೆ. ಇದು ನನ್ನನ್ನು ಎಲ್ಲಿಗೆ ಕೊಂಡೊಯ್ಯಬಹುದೆಂದು ಯಾರಿಗೆ ಗೊತ್ತು'' ಎಂದು ವೀಡಿಯೊದೊಂದಿಗೆ ಫೈರ್‌ಬ್ರಾಂಡ್ ನಾಯಕಿ ಬರೆದಿದ್ದಾರೆ.
ಬಾಲ್ಯದಲ್ಲಿ ಚಹಾವನ್ನು ಮಾರಾಟ ಮಾಡುತ್ತಿದ್ದೆ ಎಂದು ಆಗಾಗ ಹೇಳುತ್ತಿರುವ ಪ್ರಧಾನ ಮಂತ್ರಿಯನ್ನು ಉಲ್ಲೇಖಿಸಿ ಮೊಯಿತ್ರಾ ಟ್ವೀಟಿಸಿದರು.
ಮೊಯಿತ್ರಾ ಅವರು ತಮ್ಮ ಲೋಕಸಭಾ ಕ್ಷೇತ್ರವಾದ ಕೃಷ್ಣಾನಗರದಲ್ಲಿ ಟೀ ಸ್ಟಾಲ್ ನಲ್ಲಿ ಚಹಾ ಪಾತ್ರಕ್ಕೆ ಸಕ್ಕರೆ ಸೇರಿಸುವುದು. ಚಹಾ ಕುದಿದ ಬಳಿಕ ಅಂಗಡಿಯವನು ಮೊಯಿತ್ರಾಗೆ ಸಹಾಯ ಮಾಡುತ್ತಿರುವುದು ವೀಡಿಯೊದಲ್ಲಿ ಕಂಡುಬಂದಿದೆ.
ತೃಣಮೂಲ ಕಾಂಗ್ರೆಸ್ ನಾಯಕಿ ಈ ವರ್ಷದ ನಿರ್ಣಾಯಕ ಪಂಚಾಯತ್ ಚುನಾವಣೆಗೆ ಮುನ್ನ ಅವರ ಪಕ್ಷದ ಹೊಸ 'ದೀದಿ ಸುರಕ್ಷಾ ಕವಚ' ಪ್ರಚಾರಕ್ಕಾಗಿ ತಮ್ಮ ಕ್ಷೇತ್ರದಲ್ಲಿ ಪ್ರವಾಸ ಕೈಗೊಂಡಿದ್ದಾರೆ.
ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಬಳಕೆದಾರರು ಪ್ರಧಾನಿ ಮೋದಿಯವರ ಬಗ್ಗೆ ಉಲ್ಲೇಖಗಳನ್ನು ಮಾಡಿದ್ದಾರೆ.
ಬಳಕೆದಾರರಲ್ಲಿ ಒಬ್ಬರು ಹೀಗೆ ಬರೆದಿದ್ದಾರೆ: “ದೇಶಕ್ಕೆ ಓರ್ವ ಚಾಯ್‌ವಾಲಾ ಸಾಕು. ದೇಶವು ಇನ್ನೊಂದು ಚಾಯ್ ವಾಲಿಯನ್ನು ಹೊಂದಬಹುದೇ ಎಂದು ತಿಳಿದಿಲ್ಲ...”,ಎಂದು ಬರೆದಿದ್ದಾರೆ.
ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಮೊಮ್ಮಗ ಹಾಗೂ ಮಾಜಿ ಬಿಜೆಪಿ ನಾಯಕ ಚಂದ್ರ ಕುಮಾರ್ ಬೋಸ್ ಈ ಕುರಿತು ಪ್ರತಿಕ್ರಿಯಿಸುತ್ತಾ: "ಅದು ನಿಮ್ಮನ್ನು ಎಲ್ಲಿಗೆ ಕರೆದೊಯ್ಯುತ್ತದೆ ಎಂದು ನಿಮಗೆ ತಿಳಿದಿದೆ ಎಂದು ನಾನು ಬಾಜಿ ಕಟ್ಟುತ್ತೇನೆ" ಎಂದಿದ್ದಾರೆ.
ಕಳೆದ ರಾತ್ರಿ ಈ ವೀಡಿಯೊವನ್ನು ಪೋಸ್ಟ್ ಮಾಡಿದ ನಂತರ ಸುಮಾರು 8,000 ಬಾರಿ 'ಲೈಕ್' ಮಾಡಿದ್ದು, 600 ಕ್ಕೂ ಹೆಚ್ಚು ಬಾರಿ ರಿ ಟ್ವೀಟ್ ಮಾಡಲಾಗಿದೆ.
Tried my hand at making chai… who knows where it may lead me :-) pic.twitter.com/iAQxgw61M0
— Mahua Moitra (@MahuaMoitra) January 11, 2023